Tuesday, September 10, 2024
Google search engine
Homeಜನಮನಹಳ್ಳಿ ಹಳ್ಳಿ ಕಾಯೋ ನಮ್ ಹಳ್ಳಿ ರೇಡಿಯೋ!

ಹಳ್ಳಿ ಹಳ್ಳಿ ಕಾಯೋ ನಮ್ ಹಳ್ಳಿ ರೇಡಿಯೋ!

ತುರುವೇಕೆರೆ ಪ್ರಸಾದ್


ತುರುವೇಕೆರೆ: ನಮ್ಮಲ್ಲಿ ಒಂದು ಹಿತೋಪದೇಶವಿದೆ: “ತನಗಾಗಿ ಸ್ವಲ್ಪ, ಪರರಿಗಾಗಿ ಸರ್ವಸ್ವ” ಎಂದು.ಕರೋನಾದಿಂದ ಮನುಷ್ಯನ ಅಟ್ಟಹಾಸಕ್ಕೆ ಅಹಮಿಕೆಗೆ ಒಂದು ಕಾಮ ಬಿದ್ದಿದೆ.

ಮನೆಯಲ್ಲೇ ಕೊಳ್ಳುಬಾಕತನವಿಲ್ಲದೆ ತನ್ನ ಇತಿಮಿತಿಯಲ್ಲಿ ಸರಳ ಜೀವನ ನಡೆಸಬಹುದು, ತನಗಾಗಿ ಸ್ವಲ್ಪ ಸಾಕು ಎಂಬುದು ಜ್ಞಾನೋದಯವಾಗಿದೆ.

ಇನ್ನು ಪರರಾಗಿ ಸರ್ವಸ್ವ. ಕೊರೋನಾ ವಿರುದ್ಧ ಹೋರಾಟದಲ್ಲಿ ವೈದ್ಯರು, ದಾದಿಯರು, ಪೋಲೀಸ್ ಸಿಬ್ಬಂದಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಸಮರೋಪಾದಿಯಲ್ಲಿ ಉಪಚಾರ ಮಾಡುತ್ತಿರುವ ಇವರೆಲ್ಲಾ “ಪರರಿಗಾಗಿ ಸರ್ವಸ್ವ”ವನ್ನೂ ತ್ಯಾಗ ಮಾಡಿ ಮನುಕುಲದ ಒಳಿತಿಗಾಗಿ ಟೊಂಕಕಟ್ಟಿ ನಿಂತಿದ್ದಾರೆ.


ನಿಮ್ಮೂರಿನ ಸುದ್ದಿ, ವರದಿ, ನಿಮ್ಮ ಲೇಖನಗಳನ್ನು ಇಲ್ಲಿಗೆ ವಾಟ್ಸಾಪ್ ಮಾಡಿ:9844817737


ಸಾಮಾಜಿಕ ಜವಾಬ್ಧಾರಿ ಎನ್ನುವುದು ಈ ಭೂಮಿ ಮತ್ತು ಅದರ ಮೇಲಿನ ಜೀವಿಗಳ ಸಾಮುದಾಯಿಕ ಹಿತಾಸಕ್ತಿ ಕಾಯುವ ಒಂದು ವೈಯಕ್ತಿಕ ಹಾಗೂ ಅಮೂಲ್ಯ ಕರ್ತವ್ಯ.

ಹೀಗಾಗಿ ಈ ಸಾಮಾಜಿಕ ಜವಾಬ್ಧಾರಿ ಎನ್ನುವುದು ಅತ್ಯಂತ ಮಹತ್ವದ ಬದ್ಧತೆಯಾಗಿದೆ.ಹಲವು ಪ್ರಖ್ಯಾತ ಉದ್ಯಮಿಗಳು, ಸಿನಿಮಾ ನಟರು, ಆಟಗಾರರು, ಸಂಘ ಸಂಸ್ಥೆಗಳು ಸಂಕಷ್ಟದ ಸಮಯದಲ್ಲಿ ಈ ಜವಾಬ್ಧಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆ ತುರುವೇಕೆರೆಯ ಚಿಮ್ಮನಹಳ್ಳಿಯ ಶ್ರೀ ಮುನೀಶ್ವರ ಶಿಕ್ಷಣ ಟ್ರಸ್ಟ್ ರಾಜ್ಯಕ್ಕೇ ಅನುಕರಣೀಯ ಮಾದರಿಯಾಗಿದೆ.

ಟ್ರಸ್ಟ್ ಆಶ್ರಯದಲ್ಲಿ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್, ಪಟ್ಟಣ ಪಂಚಾಯ್ತಿ, ತಾಲ್ಲೂಕು ಆಡಳಿತ ಒಟ್ಟಿಗೆ ಸೇರಿ ಕರೋನಾ ವಿರುದ್ಧ ತಳಮಟ್ಟದ ಹೋರಾಟವನ್ನು ಸಂಘಟಿಸಿದ್ದಾರೆ.

ಲೈವ್ಲಿ ಹುಡ್ ಪ್ರೋಗ್ರಾಂನ ಮಾಜಿ ನಿರ್ದೇಶಕ ಹಾಗೂ ರೆಡ್‍ಕ್ರಾಸ್ ಸಂಘಟನೆಯ ಮುಖ್ಯಸ್ಥ ಡಾ. ಅಚ್ಯುತರಾವ್ ಹಾಗೂ ಶ್ರೀ ಮುನೀಶ್ವರ ಟ್ರಸ್ಟ್‍ನ ಮಹಾಪೋಷಕ ಸಿ.ಎನ್ ಶಿವಪ್ಪನವರ ನೇತೃತ್ವದಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವುದರಿಂದ ಹಿಡಿದು ಜನರ ಸಂಕಷ್ಟಕ್ಕೆ ಸ್ಪಂದಿಸುವವರೆಗೆ ಈ ಸಂಘಟನೆಗಳ ಗುಂಪು ಸಾಮಾಜಿಕ ಸಾಂತ್ವನ ಮತ್ತು ಸೇವೆಯ ಹೊಸ ಮಾರ್ಗಗಳನ್ನು ಕಂಡುಕೊಂಡಿದೆ.

ಇವುಗಳಲ್ಲಿ ಪ್ರಮುಖವಾದ್ದು ನಮ್ ಹಳ್ಳಿ ರೇಡಿಯೋ!ಈ ಕಾರ್ಯಕ್ರಮದ ರೂವಾರಿ ನೊಣವಿನಕೆರೆಯ ಎಂ.ಪಿ. ಗಿರೀಶ್. ಟಿವಿ ವಾಹಿನಿಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ ಗಿರೀಶ್ ಕೊರೊನಾ ವಿರುದ್ಧ ಹೋರಾಡಲೇ ತಮ್ಮ ವೃತ್ತಿ ಜೀವನವನ್ನು ಬದಿಗಿಟ್ಟು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಸುಲಭವಾಗಿ ಸಿಗುವ ದುಬಾರಿ ಅಲ್ಲದ ಉಪಕರಣಗಳಿಂದ ವ್ಯಾನ್ ಒಂದರಲ್ಲಿ ಗಿರೀಶ್ ಕಂಪ್ಯೂಟರ್, ರೆಕಾರ್ಡರ್, ಮೈಕ್, ಆಪ್ಲಿಫೈಯ್ಯರ್ ಇತರೆ ಸಲಕರಣೆಗಳನ್ನು ಸಜ್ಜುಗೊಳಿಸುವ ಮೂಲಕ ವೈಫೈ ಮೂಲಕ ನಿರ್ವಹಿಸಬಹುದಾದ ರೇಡಿಯೋ ಕೇಂದ್ರವನ್ನು ಸ್ಥಾಪಿಸಿದ್ದಾರೆ.

ಈ ಸಂಚಾರಿ ನಮ್ ಹಳ್ಳಿ ರೇಡಿಯೋ ಕೇಂದ್ರದ ಮೂಲಕ ಪ್ರಸ್ತುತ ಸಂಕಷ್ಟದ ಸಂದರ್ಭದಲ್ಲಿ ತೀರಾ ಕುಗ್ರಾಮಗಳಲ್ಲಿರುವ ಮೊಬೈಲ್ ಸಂಪರ್ಕವೂ ಸಿಗದ ಜನರ ಕಷ್ಟಕಾರ್ಪಣ್ಯಗಳನ್ನು ಆಡಳಿತಕ್ಕೆ ಮುಟ್ಟಿಸುವುದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು, ಅವರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು, ಸಾಂತ್ವನ ಹೇಳುವುದು, ಧೈರ್ಯ ತುಂಬುವುದು ಮತ್ತು ಅವರನ್ನು ಮುಖ್ಯವಾಹಿನಿಗೆ ತರುವುದು ಗಿರೀಶ್ ಅವರ ಉದ್ದೇಶ.

ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಈ ರೇಡಿಯೋ ಸಂದೇಶದ ಮೂಲಕವೇ ಪ್ರಾಸ್ತಾವಿಕ ನುಡಿಗಳನ್ನಾಡಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.ಬೆಳಿಗ್ಗೆ 5 ಗಂಟೆಯಿಂದಲೇ ಈ ಸೇವಾ ಸಂಘಟನೆಯ ಕಾರ್ಯ ಆರಂಭವಾಗುತ್ತದೆ.

ಬೆ.5 ರಿಂದ 8 ಗಂಟೆಯವರೆಗೆ ಈ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಹಲವಾರು ಕೊಳಗೇರಿ/ ಹಿಂದುಳಿದ ಬಡಾವಣೆಗಳಲ್ಲಿರುವ ನಿರ್ಗತಿಕರು ಹಾಗೂ ಅಸಹಾಯಕರಿಗೆ ಹಾಲು ತಲುಪಿಸುವ ಪ್ರಯತ್ನ ಮಾಡುತ್ತಾರೆ.

ದೇವೇಗೌಡ ಬಡಾವಣೆ, ಕೆಂಪುಕಟ್ಟೆ, ಮೀನಾಕ್ಷಿವನ, ಜನತಾ ಕಾಲೋನಿ, ಇಂದಿರಾ ನಗರ, ವಡಕಟ್ಟೆ ಈ ಪ್ರದೇಶಗಳಲ್ಲಿ ಪ್ರತಿದಿನ ಸುಮಾರು 700 ಲೀಟರ್ ಹಾಲನ್ನು ಮನೆ ಮನೆಗೆ ಹಂಚಲಾಗುತ್ತದೆ.

ಆ ನಂತರ ಡಾ.ಅಚ್ಯುತ್‍ರಾವ್,ಡಾ.ಶರತ್, ಗಿರೀಶ್, ಮೆಂಟರ್ ಗೋಪಿಕೃಷ್ಣ ಹಾಗೂ ಮುನೀಶ್ವರ ಟ್ರಸ್ಟ್‍ನ ಶೈಕ್ಷಣಿಕ ನಿರ್ದೇಶಕಿ ಡಾ.ಶೀಲಾ ಖರೆ ಇವರ ನೇತೃತ್ವದ ಒಂದು ತಂಡ ಸಂಚಾರಿ ರೇಡಿಯೋ ಕೇಂದ್ರದೊಂದಿಗೆ ಹಳ್ಳಿಗಳಿಗೆ ಪಯಣ ಹೊರಡುತ್ತದೆ.ಈ ರೇಡಿಯೋ ಕೇಂದ್ರ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಹಾಡುಗಳು, ಲಾವಣಿಗಳು, ಪ್ರಕಟಣೆಗಳೊಂದಿಗೆ ಗಡಿಭಾಗದ ಹಳ್ಳಿಗಳತ್ತ ಸಾಗುತ್ತದೆ.

ಪ್ರತಿ ಹಳ್ಳಿಯಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.ಊರ ಮುಖಂಡರು, ಯುವಕರು, ಗೃಹಿಣಿಯರು, ಆಟೋ ಚಾಲಕರು, ಕೂಲಿ ಕಾರ್ಮಿಕರು,ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ರೇಡಿಯೋ ಮೂಲಕ ತಮ್ಮ ಅಭಿಪ್ರಾಯ, ಕಷ್ಟಕಾರ್ಪಣ್ಯವನ್ನು ಹಂಚಿಕೊಳ್ಳುತ್ತಾರೆ.

ಕೊರೊನಾ ಅಲ್ಲದೆ ಇತರೆ ಕಾಯಿಲೆಗಳಿಂದ ನರಳುವವರಿಗೆ, ಔಷಧೋಪಚಾರ ಬೇಕಾಗಿರುವವರಿಗೆ ಸಲಹೆ,ಉಪಚಾರ, ಮಾರ್ಗದರ್ಶನ,ಸಹಾಯಹಸ್ತವನ್ನು ಡಾ.ಶರತ್ ತಂಡ ನೀಡುತ್ತದೆ.ಇದೇ ವೇಳೆ ಹಳ್ಳಿಗಳಲ್ಲಿ ಸಾಮಾಜಿಕವಾಗಿ ಹಿಂದುಳಿದವರು, ನಿರ್ಗತಿಕರು, ಪಾಳ್ಯಗಳಲ್ಲಿ ವಾಸಿಸುವವರು, ಬುಡಕಟ್ಟು ಜನಾಂಗದವರು,ಅಲೆಮಾರಿಗಳು, ವಲಸೆ ಕಾರ್ಮಿಕರು ಹೀಗೆ ಜನಜೀವನದ ಒಂದು ಸಮೀಕ್ಷೆಯೂ ಸಮಾನಾಂತರವಾಗಿ ನಡೆಯುತ್ತದೆ.

ಸಂಜೆ ವೇಳೆಗೆ ಒಂದು ಹಳ್ಳಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ‘ ಅರಳೀಕಟ್ಟೆ’ ಮಾದರಿಯಲ್ಲಿ ಒಂದು ಚಿಕ್ಕ ಸಂವಾದ ಏರ್ಪಡಿಸಲಾಗುತ್ತದೆ. ಅಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಹಳ್ಳಿಯ ಬಡಜನರ ಸಮಸ್ಯೆಗಳ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಊರಿನ ರಾಜಕೀಯ ವ್ಯಕ್ತಿಗಳು, ಮುಖಂಡರೊಂದಿಗೆ ಚರ್ಚೆ ನಡೆಯುತ್ತದೆ.

ಇದೆಲ್ಲದರ ಫಲಶೃತಿಯಾಗಿ ಸುತ್ತ ನಾಲ್ಕೈದು ಹಳ್ಳಿಗಳ ಒಂದು ಹೊಸ ಯುವತಂಡವೇ ಕೊರೋನಾ ವಿರುದ್ಧ ಹೋರಾಡಲು ಸಜ್ಜಾಗಿ ನಿಲ್ಲುತ್ತದೆ. ಈಗಲಾಗಲೇ ಈ ಸಂಚಾರಿ ರೇಡಿಯೋ ಕೇಂದ್ರ ಬಾಣಸಂದ್ರ, ಜಿ. ಮಲ್ಲೇನಹಳ್ಳಿ, ಕೊಂಡಜ್ಜಿ, ವಿಘ್ನಸಂತೆ, ನೊಣವಿನಕೆರೆ,ಅಕ್ಕಳಸಂದ್ರ ಗೊಲ್ಲರಹಟ್ಟಿ ಅಲ್ಲದೆ ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರ, ಹಾಗೂ ತುಮಕೂರಿನ ಕೆ.ಎಂ.ದೊಡ್ಡಿ, ಗೂಳೂರು ಹೀಗೆ ಕಳೆದ 6 ದಿನಗಳಿಂದ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಚರಿಸಿ ಜನರಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಿದೆ.

ಇದು ಒಂದು ಭಾಗವಾದರೆ ಸಿ.ಎ. ಶಿವಣ್ಣ, ಪ್ರಜ್ವಲ್, ಡಾ. ರಂಗನಾಥ್, ಮಮತಾ, ಪದ್ಮಿನಿ ನೇತೃತ್ವದ ಇನ್ನೊಂದು ತಂಡ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದ ವಲಸೆ ಕಾರ್ಮಿಕರು, ಅಲೆಮಾರಿ ತಂಡಗಳು, ಕೂಲಿಕಾರ್ಮಿಕರು ಇತರೆ 88 ಅಸಹಾಯಕ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡುತ್ತದೆ.

ಇತರೆ ಸಂಘಟನೆಗಳ ಆಶ್ರಯದಲ್ಲಿ ಮನೆ ಮನೆಗೆ ಹೋಗಿ ಊಟದ ಪ್ಯಾಕೆಟ್‍ಗಳನ್ನು ಹಂಚಲಾಗುತ್ತದೆ. ಹಾಗೇ ಹಗಲು ರಾತ್ರಿ ಕರ್ತವ್ಯದಲ್ಲಿ ನಿರತರಾಗಿರುವ ಪೋಲೀಸ್ ಸಿಬ್ಬಂದಿ, ಪೌರಕಾರ್ಮಿಕರು, ವೈದ್ಯರು, ದಾದಿಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಹ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಇಷ್ಟೇ ಅಲ್ಲದೆ ತಂಡ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಗಿಂದಾಗ್ಗೆ ನಡೆಸುತ್ತಿದೆ. ವಿಶೇಷವಾಗಿ ಪೌರಕಾರ್ಮಿಕರು ಹಾಗೂ ಪೋಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಉಷ್ಣಮಾಪಕ ಯಂತ್ರದ(ಸ್ಕ್ರೀನಿಂಗ್) ವ್ಯವಸ್ಥೆಯನ್ನೂ ಮಾಡಲಾಗಿದೆ.

ನಮ್ ರೇಡಿಯೋದಲ್ಲಿ ಸ್ಥಳೀಯ ಪತ್ರಕರ್ತರು,ವೈದ್ಯ ಡಾ.ನಾಗರಾಜ್, ರಾಜಕೀಯ ಮುಖಂಡ ಕೊಂಡಜ್ಜಿ ವಿಶ್ವನಾಥ್ ಇತರೆ ಗಣ್ಯರು ಸಹ ಉಪಯುಕ್ತ ಸಂದೇಶ ನೀಡಿದ್ದಾರೆ.

ಸ್ಥಳೀಯ ಶಾಸಕ ಜಯರಾಮ್,ತಹಸೀಲ್ದಾರ್ ನಯೀಮ್ ಉನ್ನೀಸಾ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುಳಾದೇವಿ, ಆರಕ್ಷಕ ವೃತ್ತ ನಿರೀಕ್ಷಕ ಲೋಕೇಶ್, ಆರಕ್ಷಕ ಉಪನಿರೀಕ್ಷಕ ಪ್ರೀತಮ್ ಇವರೆಲ್ಲಾ ಕರೋನಾ ವಿರುದ್ಧದ ಈ ಅಭಿಯಾನಕ್ಕೆ ಕೈ ಜೋಡಿಸಿ ಬೆನ್ನುಲುಬಾಗಿ ನಿಂತಿದ್ದಾರೆ.

ಒಂದು ಸಮುದಾಯ ತನ್ನ ಮುಂದಿನ ಪೀಳಿಗೆಗೆ ಈ ಭೂಮಿ, ಇದರ ನೈಸರ್ಗಿಕ ಸಂಪನ್ಮೂಲ ಜೊತೆಗೆ ತನ್ನ ಮೌಲ್ಯಗಳು, ವಿಚಾರಗಳು, ಕೌಶಲಗಳು, ಸಾಂಸ್ಕøತಿಕ ಚಹರೆಗಳು ಇವನ್ನೆಲ್ಲಾ ವರ್ಗಾಯಿಸಬೇಕು.

ಸಾಮಾಜಿಕ ಜವಾಬ್ಧಾರಿ ಇಲ್ಲದ ಸಮಾಜ ಇವಾವ ಮೌಲ್ಯಗಳನ್ನೂ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಿಲ್ಲ.ಏಕೆಂದರೆ ಅಂತಹ ಸಮುದಾಯವೇ ತನ್ನ ಬೇಜವಾಬ್ಧಾರಿ ವರ್ತನೆಯಿಂದ ತನಗೆ ತಾನೇ ಭಸ್ಮಾಸುರನಂತೆ ವರವನ್ನೇ ಶಾಪವಾಗಿಸಿಕೊಂಡು ನಾಶವಾಗಿ ಹೋಗುತ್ತದೆ.ಹಾಗಾಗಿ ಕೊರೊನಾ ಸಂದರ್ಭದ ಸಾಮಾಜಿಕ ಸಮಸ್ಯೆಗಳ ಜೊತೆ ಜೊತೆಗೆ ನಂತರದ ಗಂಭೀರ ದುಷ್ಪರಿಣಾಮಗಳನ್ನೂ ಎದುರಿಸಲು ಜನರನ್ನು ಸನ್ನದ್ದುಗೊಳಿಸಿ ಧೈರ್ಯ ತುಂಬುತ್ತಿರುವ ರೆಡ್‍ಕ್ರಾಸ್ ಮತ್ತು ಇತರೆ ಸಂಘಟನೆಗಳಿಗೆ ಒಂದು ಬಿಗ್ ಸಲ್ಯೂಟ್ ಹೊಡೆಯಲೇಬೇಕು..!ಕೊರೊನಾ ವಾರಿಯರ್ಸ್.. ಹ್ಯಾಟ್ಸ್ ಆಫ್ ಟು ಯೂ !(ನಮ್ ಹಳ್ಳಿ ರೇಡಿಯೋ ಲಿಂಕ್:http://www.namdu1radio.com))

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?