ತುಮಕೂರ್ ಲೈವ್

ಹಾಡಿ ಹಾಡಿ ಇಲ್ಲಿಗೆ ಬಂದಿದ್ದೇನೆ! ಕ್ರಾಂತಿಕಾರಿ ಕವಿ ಗದ್ದರ್

 ತುಮಕೂರು ಜಿಲ್ಲೆ: ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡದ 11ನೇ ಆರೋಪಿ ತೆಲುಗು ಗಾಯಕ ಗದ್ದರ್ ಅವರು ಜೆಎಂಎಫ್‌ಸಿ ನ್ಯಾಯಾಲಕ್ಕೆ ಬುಧವಾರ ಹಾಜರಾಗಿ ನ್ಯಾಯಾಲಯದ ಪ್ರಕ್ರಿಯೆಯನ್ನು ಮುಗಿಸಿದರು.

ಪ್ರಕರಣದಲ್ಲಿ ಗದ್ದರ್ 11ನೇ ಮತ್ತು ತೆಲುಗು ಕವಿ ವರವರರಾವ್ 12ನೇ ಆರೋಪಿ ಆಗಿದ್ದರು. 2018ರಲ್ಲಿ ಸಲ್ಲಿಸಲಾದ ಹೊಸ ಆರೋಪಪಟ್ಟಿಯ ಪ್ರಕಾರ ಗದ್ದರ್ 4ನೇ ಆರೋಪಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಹೈಕೋರ್ಟ್ ಗದ್ದರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಪ್ರಕರಣವು ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ, ನಿಯಮದಂತೆ ಗದ್ದರ್ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದರು.

ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎರವಾಡ ಜೈಲಿನಲ್ಲಿದ್ದ  ವರವರರಾವ್‌ ಅವರನ್ನು ತಿರುಮಣಿ ಪೊಲೀಸರು ಬಾಡಿ ವಾರಂಟ್ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಗದ್ದರ್ ತಾವೇ ಹಾಜರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಮಧುಗಿರಿ ಡಿವೈಎಸ್‌ಪಿ ಕಚೇರಿಯಲ್ಲಿ ಗದ್ದರ್ ಅವರ ವಿಚಾರಣೆಗೆ ಹಾಜರಾಗಿದ್ದರು.

ಪಟ್ಟಣದ ಕೆಲ ಸಂಘಟನೆಗಳ ಮುಖಂಡರು ಗದ್ದರ್ ಅವರನ್ನು ಭೇಟಿಯಾಗಿ ಮಾತನಾಡಿದರು. ಗದ್ದರ್ ಅವರ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ವಕೀಲರ ಭವನದಲ್ಲಿಯೇ ಮಾಡಲಾಗಿತ್ತು. ಪಟ್ಟಣದ ಪೊಲೀಸರು ನ್ಯಾಯಾಲಯ ಸಂಕೀರ್ಣಕ್ಕೆ ಬಂದೋಬಸ್ತ್ ಒದಗಿಸಿದ್ದಾರೆ. ತೆಲಂಗಾಣ ಸರ್ಕಾರ ಗದ್ದರ್ ಅವರ ರಕ್ಷಣೆಗೆ ಇಬ್ಬರು ಗನ್‌ ಮನ್‌ಗಳನ್ನು ನಿಯೋಜಿಸಿದೆ.

ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು.

ವಕೀಲರೊಂದಿಗೆ ಗದ್ದರ್ ಮಾತನಾಡುತ್ತಿದ್ದ ವೇಳೆ ವಕೀಲರೊಬ್ಬರು ಒಂದು ಹಾಡು ಹೇಳಿ ಎಂದರು. ಅದಕ್ಕೆ ಗದ್ದರು ಅವರು ಹಾಡಿ ಹಾಡಿ ಇದೀಗ ಇಲ್ಲಿಗೆ ಬಂದಿದ್ದೇನೆ ಎಂದು ಮಂದಹಾಸ ಬೀರಿದರು.

 

 

 

 

 

Comment here