ತುಮಕೂರು ಲೈವ್

ಹೀಗಿರಲಿ ನಿಮ್ಮ ತೆಂಗಿನ ತೋಟ

ಡಾ. ಗಿರಿಜಮ್ಮ ಜಿ.


Tumukuru: ತೆಂಗು ರಾಜ್ಯದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದ್ದು, ಇದೊಂದು ದೀರ್ಘಾವಧಿ ಬೆಳೆಯಾಗಿರುವುದರಿಂದ ತೆಂಗಿನ ತೋಟ ಅಭಿವೃದ್ಧಿಪಡಿಸುವಾಗ ಉತ್ತಮ ಗುಣಮಟ್ಟದ ಸಸಿಗಳನ್ನು ಆಯ್ಕೆ ಮಾಡಿ ನಾಟಿ ಮಾಡಬೇಕು.

ಕೆಲವು ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳನ್ನು ಉತ್ಪಾದನೆ ಮಾಡಿ ಅಧಿಕ ಇಳುವರಿ ಹೊಂದಲು ಸಾಧ್ಯವಿದೆ.

ತೆಂಗಿನ ಬೀಜದಿಂದ ಸಸಿಯನ್ನು ಉತ್ಪಾದಿಸಿ ನಾಟಿ ಮಾಡಿ ಫಲ ಪಡೆಯುವ ಹಂತಕ್ಕೆ ಬರಲು ಸುಮಾರು 7-8 ವರ್ಷಗಳು ಬೇಕಾಗಬಹುದು. ಮುಂಬರುವ ದಿನಗಳಲ್ಲಿ ಉಂಟಾಗುವ ನಷ್ಟ ತಪ್ಪಿಸಲು ಪ್ರಾರಂಭದಲ್ಲಿಯೇ ಉತ್ತಮ ಗುಣಮಟ್ಟದ ಸಸಿಗಳನ್ನು ಆಯ್ಕೆ ಮಾಡಿ ನಾಟಿ ಮಾಡುವುದು ಸೂಕ್ತ.

ಸಸ್ಯೋತ್ಪಾದನೆಯ ವೈಜ್ಞಾನಿಕ ಕ್ರಮಗಳು:


ಬೀಜದ ತೆಂಗಿನಕಾಯಿ ಆಯ್ಕೆ ಮಾಡುವ ತೋಟವು ಮಳೆಯಾಶ್ರಿತವಾಗಿರಬೇಕು. ತೆಂಗಿನ ಇಳುವರಿಯನ್ನು ದುಪ್ಪಟ್ಟುಗೊಳಿಸಲು ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬೇಕು ಈ ಹಿನ್ನೆಲೆಯಲ್ಲಿ ಬೀಜ ಸಂಗ್ರಹಣೆಗಾಗಿ ಮಳೆಯಾಶ್ರಯದಲ್ಲೇ ಹೆಚ್ಚಿನ ಇಳುವರಿ ಕೊಡುವ ತೆಂಗಿನ ತೋಟವನ್ನು ಆಯ್ಕೆ ಮಾಡಿಕೊಳ್ಳಬೇಕು. ತೆಂಗು ಬೀಜ ಸಂಗ್ರಹಿಸುವ ತೋಟದಲ್ಲಿ ಆರೋಗ್ಯವಂತ, ಸದೃಢ ಮತ್ತು ಹೆಚ್ಚು ಇಳುವರಿ ಕೊಡುವ ಮರಗಳು ಶೇ.60ಕ್ಕಿಂತಲೂ ಹೆಚ್ಚಿರಬೇಕು.

ತೆಂಗು ಬೆಳೆಯಲ್ಲಿ ಪರಕೀಯ ಪರಾಗಸ್ಪರ್ಶ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಹಾಗೂ 80ಕ್ಕೂ ಹೆಚ್ಚು ಇಳುವರಿ ಕೊಡುವ ಮರಗಳಿರುವುದು ಅತ್ಯಂತ ಅವಶ್ಯಕ. ಕೇವಲ ಒಂದೆರೆಡು ಮರಗಳಲ್ಲಿ ಹೆಚ್ಚುವರಿ ಇಳುವರಿ ಇದ್ದು, ಉಳಿದ ಮರಗಳಲ್ಲಿ ಇಳುವರಿ ಕಳಪೆಯಾಗಿದ್ದಲ್ಲಿ ಅಂತಹ ತೋಟದಲ್ಲಿ ಮರಗಳನ್ನು ಆಯ್ಕೆ ಮಾಡಬಾರದು.

ತೆಂಗು ಬೀಜ ಸಂಗ್ರಹಣೆಗೆ ಆಯ್ಕೆ ಮಾಡುವ ತೋಟದ ಮರಗಳ ವಯಸ್ಸು 25 ರಿಂದ 50 ವರ್ಷಗಳಾಗಿರಬೇಕಲ್ಲದೆ 50 ವರ್ಷಗಳಿಗಿಂತ ಮೇಲ್ಪಟ್ಟ ಹಾಗೂ ತುಂಬಾ ಹಳೆಯ ಮರಗಳಲ್ಲಿ ಚೈತನ್ಯ ತುಂಬಾ ಕಡಿಮೆ ಇರುವುದರಿಂದ ಇಂತಹ ಮರಗಳಲ್ಲಿ ಬೀಜದ ಕಾಯಿ ಸಂಗ್ರಹಿಸಬಾರದು.

ಈ ಮರಗಳಲ್ಲಿ ತೋಟದಲ್ಲಿರುವ ಮರಗಳ ಪೈಕಿ ಆರೋಗ್ಯವಂತ, ಕೀಟ ರೋಗ ಬಾಧೆಗಳಿಲ್ಲದ ಮತ್ತು ಛತ್ರಿಯಾಕಾರದಲ್ಲಿ ಜೋಡಿಸಲ್ಪಟ್ಟ 12ಕ್ಕಿಂತ ಹೆಚ್ಚು ಗರಿಗಳುಳ್ಳ ಮತ್ತು ಹೆಚ್ಚು ಇಳುವರಿ ಕೊಡುವ ಮರಗಳನ್ನು ತಾಯಿ ಮರಗಳೆಂದು ಗುರುತಿಸಬೇಕು.

ಕಾಯಿಗಳ ಗೊಂಚಲು ತೆಂಗಿನ ಗರಿಯ ಎಡೆಮಟ್ಟೆಯ ಮೇಲೆ ಕುಳಿತುಕೊಂಡಿರಬೇಕು, ಅಲ್ಲದೇ ಜೋತಾಡುತ್ತಿರುವ ಗೊನೆ ಬಿಟ್ಟಿರುವ ಮರಗಳನ್ನು ಆಯ್ಕೆ ಮಾಡಬಾರದು, ಜೋತಾಡುವ ಗೊನೆಗಳ ಕಾಯಿಗಳು ಚೆನ್ನಾಗಿ ಅಭಿವೃದ್ಧಿಯಾಗದೇ ಗಾತ್ರ ಕುಂಠಿತವಾಗುವುದರಿಂದ ಹಾಗೂ ಎಳೆಯ ಕಾಯಿಗಳು ಬಿದ್ದು ಹೋಗಬಹುದು.

ಗುಂಡಾದ ಅಥವಾ ಗೋಳಾಕಾರದ ಮಧ್ಯಮ ಗಾತ್ರದ ಕಾಯಿಗಳನ್ನು ಬಿಡುವ ಮರಗಳನ್ನು ಆಯ್ಕೆ ಮಾಡಬೇಕು ದಪ್ಪ ಅಥವಾ ಎಮ್ಮೆ ತಲೆ ಮತ್ತು ಸಣ್ಣ ಗಾತ್ರದ ಮತ್ತು ಏಣು ಕಾಯಿಗಳನ್ನು ಬಿಡುವ ಮರಗಳನ್ನು ಆಯ್ಕೆ ಮಾಡಬಾರದು.

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್ ಮಾಹೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ತಾಯಿ ಮರದಿಂದ ಚೆನ್ನಾಗಿ ಬಲಿತ ಬೀಜಗಳನ್ನು ಕೊಯ್ಲು ಮಾಡಿ ಸಂಗ್ರಹಿಸಬೇಕು.

ತೆಂಗಿನ ಕಾಯಿಗಳಿಗೆ ಏಟು ಬೀಳದಂತೆ ಕಟಾವು ಮಾಡಬೇಕು, ಕೊಯ್ಲಾದ ಕಾಯಿಗಳಲ್ಲಿಯೂ ಸಹ ಗುಂಡಾದ ಮಧ್ಯಮ ಗಾತ್ರದ ಕಾಯಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ಕಾಯಿಗಳನ್ನು ನೆರಳಿನಲ್ಲಿ ಗಾಳಿಯಾಡುವ ಪ್ರದೇಶದಲ್ಲಿ ಸಂಗ್ರಹಿಸಬೇಕು. ಕಾಯಿಗಳಲ್ಲಿ ನೀರು ಬತ್ತುವವರೆಗಿನ ಅವಧಿಯಲ್ಲಿ ವಾರಕ್ಕೊಮ್ಮೆ ಬೂಷ್ಟು ಹಿಡಿಯದಂತೆ ತಿರುವಿಹಾಕುತ್ತಿರಬೇಕು.

ಚಿಲುಕು ನೀರು ಇರುವ ಕಾಯಿಗಳನ್ನು 25ಘಿ4 ಅಡಿ ಅಳತೆಯ ಸಸಿ ಮಡಿಗಳಲ್ಲಿ ತೊಟ್ಟಿನ ಭಾಗ ಮೇಲೆ ಬರುವಂತೆ ನಾಟಿ ಮಾಡಬೇಕು. ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಕಾಯಿಗಳನ್ನು ಅಡ್ಡಲಾಗಿ ಮಲಗಿಸಿ ನಾಟಿ ಮಾಡಬಹುದು. ಇದರಿಂದ ಕಣ್ಣುಕೊಳೆಯುವ ರೋಗವನ್ನು ನಿಯಂತ್ರಿಸಬಹುದು.

ಹದವರಿತು ಆಗಾಗ್ಗೆ ನೀರು ಹಾಯಿಸುತ್ತಿರಬೇಕು. ಚಿಲುಕು ನೀರು ಇರುವ ನಾಟಿ ಮಾಡಿದ ಕಾಯಿಗಳು ಮೂರು ತಿಂಗಳ ಅವಧಿಯಲ್ಲಿ ಮೊಳಕೆ ಬರುತ್ತವೆ. ಆ ನಂತರವು ಕೆಲವು ಕಾಯಿಗಳಲ್ಲಿ ತಡವಾಗಿ ಮೊಳಕೆ ಬರುತ್ತಿರುತ್ತದೆ. ಮೂರು ತಿಂಗಳಲ್ಲಿ ಮೊಳಕೆ ಬಂದ ಸಸಿಗಳು ಉತ್ತಮ ಗುಣಮಟ್ಟದ ಮತ್ತು ಭವಿಷ್ಯದಲ್ಲಿ ಅಧಿಕ ಇಳುವರಿ ನೀಡುವ ಸಾಮಥ್ರ್ಯ ಹೊಂದಿರುತ್ತವೆ.

ತಡವಾಗಿ ಮೊಳಕೆ ಬಂದ ಸಸಿಗಳು ಕಳಪೆ ಗುಣಮಟ್ಟದವಾಗಿದ್ದು, ಅಧಿಕ ಇಳುವರಿ ನೀಡುವ ಸಾಮಥ್ರ್ಯ ಹೊಂದಿರುವುದಿಲ್ಲ. ಇಂತಹ ಸಸಿಗಳನ್ನು ನಾಟಿ ಮಾಡಲು ಬಳಸಬಾರದು. ಸುಮಾರು ಮೂರು ತಿಂಗಳ ಅವಧಿಯಲ್ಲಿ ಮೊಳಕೆ ಬಂದ ಸಸಿಗಳು ಬೇರೆ ಎಲ್ಲಾ ಸಸಿಗಳಿಗಿಂತ ಮೊದಲು ಪೀಪಿ ಗರಿಗಳನ್ನು ಬಿಡುತ್ತವೆ.

ನಾಟಿ ಮಾಡಲು ಪೀಪಿ ಗರಿ ಬಂದಿರುವ ಮತ್ತು ಮುಷ್ಟಿ ಗಾತ್ರದ ಕಾಂಡ ಹೊಂದಿರುವ ಆರು ತಿಂಗಳಿಂದ ಎರಡು ವರ್ಷಗಳ ವಯೋಮಾನದ ಸಸಿಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಮುಂದೆ ಉತ್ತಮ ಗುಣಮಟ್ಟದ ಶೀಘ್ರ ಫಲಕ್ಕೆ ಬರುವ ಮತ್ತು ಹೆಚ್ಚು ಇಳುವರಿ ಕೊಡುವ ತೋಟಗಳನ್ನು ಅಭಿವೃದ್ಧಿ ಪಡಿಸಬಹುದಾಗಿರುತ್ತದೆ.

ತೆಂಗಿನ ಬೆಳೆಯಲ್ಲಿ ಪರಕೀಯ ಪರಾಗಸ್ಪರ್ಶದಿಂದ ಕಾಯಿ ಕಚ್ಚುವುದರಿಂದ ಒಂದೇ ತಾಯಿ ಮರದ ಬೀಜಗಳನ್ನು ಬಳಸಿ ಬೆಳೆಸಿದ ಸಸಿ ಮಡಿಗಳಲ್ಲಿ ಸಹ ಮೊಳಕೆ ಬರುವ ಅವಧಿಯಲ್ಲಿ ವ್ಯತ್ಯಾಸವಾಗುತ್ತದೆ. ಆದುದರಿಂದ ಶೀಘ್ರ ಮೊಳಕೆ ಬಂದ ಸಸಿಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಉಳಿದ ಸಸಿಗಳನ್ನು ತಿರಸ್ಕರಿಸಬೇಕು.

ಶೀಘ್ರ ಮೊಳಕೆ ಬಂದ ಸಸಿಗಳು ನೀರು ಮತ್ತು ಗೊಬ್ಬರದ ಉಪಚಾರ ಮತ್ತಿತರೆ ಬೇಸಾಯ ಕ್ರಮಗಳಿಗೆ ಸಕಾರಾತ್ಮಕ ಸ್ಪಂದನೆಯನ್ನು ನೀಡುವುದರಿಂದ ತೆಂಗಿನ ಉತ್ಪಾದನೆ ಹೆಚ್ಚುತ್ತದೆ ಎಂದು ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಹಾರ್ಟಿಕ್ಲಿನಿಕ್ ಅಥವಾ ತಾಲ್ಲೂಕಿನ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.


ಲೇಖಕಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತುಮಕೂರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.

Comment here