ತುಮಕೂರ್ ಲೈವ್

ಹೀಗೆ ಓದಿದ್ರೆ ಜಾಸ್ತಿ ಅಂಕ ಬರ್ತಾವಂತೆ

ತುಮಕೂರು: ಓದಿದ ವಿಷಯವನ್ನು ನೆನಪಿಟ್ಟುಕೊಳ್ಳಲು ಪದೇಪದೇ ರಿಕಾಲ್ (ಪುನರ್ ಪಠಣ) ಮಾಡಬೇಕು ಎಂದು ಜಿಲ್ಲಾ ಬಾಲಭವನದ ಸದಸ್ಯ ಎಂ.ಬಸವಯ್ಯ ಸಲಹೆ ನೀಡಿದರು.
ಜಿಲ್ಲಾ ಬಾಲಭವನದಲ್ಲಿ “ಎಸ್.ಎಸ್.ಎಲ್.ಸಿ ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ” ಕುರಿತು ಆಯೋಜಿಸಿದ್ದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಪದೇ ಪದೇ ಅಭ್ಯಾಸ ಮಾಡುವುದರಿಂದ ಓದಿದ ವಿಷಯ ಮನಸ್ಸಿನಲ್ಲಿ ಹೆಚ್ಚಿನದಾಗಿ ಉಳಿಯುತ್ತದೆ. ಇದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಾಗುತ್ತದೆ ಎಂದು ಮಕ್ಕಳಿಗೆ ಮನಃಸ್ಥೈರ್ಯವನ್ನು ತುಂಬಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್. ಕಾಮಾಕ್ಷಿ ಮಾತನಾಡಿ, ಇಂತಹ ಕಾರ್ಯಕ್ರಮ ಪರೀಕ್ಷೆಗೆ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಬಹಳ ಅತ್ಯಮೂಲವಾದದ್ದು. ಮಕ್ಕಳಲ್ಲಿ ಶಕ್ತಿಯ ಜೊತೆಗೆ ಆಸಕ್ತಿಯೂ ಇರಬೇಕು ಎಂದು ಕಿವಿ ಮಾತು ಹೇಳಿದರು.

ವಿದ್ಯಾರ್ಥಿಗಳಲ್ಲಿ ಒಳ್ಳೆಯ ಅಭ್ಯಾಸ ಹಾಗೂ ಹವ್ಯಾಸಗಳು ಇರಬೇಕು. ಕಲಿಕೆಯಲ್ಲಿ ನಿರಂತರವಾಗಿ ಮಕ್ಕಳು ಅಭ್ಯಾಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಗುರುವಿನ ಗುಲಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ವೇದವಾಕ್ಯದಂತೆ ವಿದ್ಯಾರ್ಥಿಗಳು ಶಿಕ್ಷಕರು ಬೋಧಿಸುವ ವಿಷಯವನ್ನು ನೆನಪಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಮಾತನಾಡಿ, ಕಲಿಕೆಯಲ್ಲಿ ಅತೀ ಹಿಂದುಳಿದಿರುವ ಮಕ್ಕಳನ್ನು ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಮಾಡಬೇಕು. ಶೈಕ್ಷಣಿಕವಾಗಿ ಹಿಂದುಳಿದಿರುವ ಮಕ್ಕಳನ್ನು ಮುಂದೆತರುವುದು ಈ ಕಾರ್ಯಾಗಾರದ ಮೂಲ ಉದ್ದೇಶ ಎಂದರು.

Comment here