Publicstory. in
ತುಮಕೂರು: ಜಿಲ್ಲೆಯ ಪಾಲಿನ ಬಾಕಿ ಉಳಿಸಿಕೊಂಡಿರುವ ಹೇಮಾವತಿ ನೀರನ್ನು ಕೂಡಲೇ ಹರಿಸಲು ಕ್ರಮ ಕೈಗೊಳ್ಳಬೇಕು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಬಿ.ಸುರೇಶ ಗೌಡ ಸಲಹೆ ನೀಡಿದ್ದಾರೆ.
ಗೊರೂರು ಜಲಾಶಯದಲ್ಲಿ ಇನ್ನೂ 7 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹವಿದೆ. ಇದು ತುಮೂರು ಪಾಲಿನ ನೀರು ಆಗಿದೆ. ಈ ನೀರನ್ನು ಕೂಡಲೇ ತುಮಕೂರಿಗೆ ಬಿಡಬೇಕು ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಅಷ್ಟೇ ಅಲ್ಲದೇ ಅಂತರ್ಜಲದ ಕುಸಿತದ ಕಾರಣ ರೈತರು ಬೀದಿಗೆ ಬೀಳುತ್ತಿದ್ದಾರೆ. ಹೀಗಾಗಿ ತುಮಕೂರು ಪಾಲಿನ ನೀರನ್ನು ಕೂಡಲೇ ಹರಿಸಬೇಕು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರೊಂದಿಗೆ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.
ಕಳೆದ ಜಲಾಶಯದಲ್ಲಿ ನೀರಿದ್ದರೂ ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳನ್ನು ತುಂಬಿಸಿಕೊಳ್ಳುವಲ್ಲಿ ಶಾಸಕ ಬಿ.ಸಿ.ಗೌರಿಶಂಕರ್ ವಿಫಲರಾದರು. ಸರ್ಕಾರದ ಮೇಲೆ ಒತ್ತಡ ತರುವ ಬದಲಿಗೆ ಮೌನವಹಿಸಿದರು. ಇದರಿಂದಾಗಿ ಗ್ರಾಮಾಂತರ ಕ್ಷೇತ್ರದ ಕೆರೆಗಳು ಒಣಗಿ ನಿಂತಿವೆ. ಪ್ರಾಣಿ-ಪಕ್ಷಗಳಿಗೂ ಹನಿ ನೀರು ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.
ತುಮಕೂರು ಜಿಲ್ಲೆಗೆ ನೀರು ಹರಿಸಿದರೆ ಮೊದಲಿಗೆ ಗ್ರಾಮಾಂತರ ಕ್ಷೇತ್ರದ ಕೆರೆಗಳನ್ನು ತುಂಬಿಸಲು ಆಧ್ಯತೆ ನೀಡಬೇಕು. ಕರೊನಾ, ಬರಗಾಲದ ಕಾರಣ ಗ್ರಾಮಾಂತರ ಕ್ಷೇತ್ರದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ತುಮಕೂರು ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿಯನ್ನು ಆರಂಭಿಸಲಾಗಿದೆ. ಹೀಗಾಗಿ ತಕ್ಷಣವೇ ನೀರು ಹರಿಸಿಸಬೇಕು. ಒಂದು ತಿಂಗಳ ಕಾಲ ನೀರು ಹರಿಸಬೇಕು, ಮಳೆಗಾಲದೊಳಗೆ ಕಾಮಗಾರಿ ಮುಗಿಸಲು ಸಹ ಆದ್ಯತೆ ನೀಡಲಾಗುವುದು. ಕಾಲುವೆಯಲ್ಲಿ ಬೆಳೆದಿರುವ ಗಿಡಗಂಟೆ ತೆಗೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಡುವೆಯೂ ಕಾಲುವೆಯ ಆಧುನೀಕರಣಕ್ಕೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಣ ಬಿಡುಗಡೆಗೊಳಿಸಿದರು. ಕಾಮಗಾರಿ ಆಧುನೀಕರಣಗೊಂಡರೆ ಜಿಲ್ಲೆಗೆ ನೀರಿನ ಅನ್ಯಾಯ ತಪ್ಪಲಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಸಂಕಷ್ಟವೂ ನೀಗಲಿದೆ. ತುಮಕೂರು ಜಿಲ್ಲೆಯ ಜನರು ಮುಖ್ಯಮಂತ್ರಿಗೆ ಅಭಾರಿಯಾಗಿದ್ದೇವೆ ಎಂದು ಹೇಳಿದ್ದಾರೆ.