ಶ್ರೀಕಾಂತ್ ಕೆಳಹಟ್ಟಿ
Tipturu: ಇಲ್ಲಿನ ಕೊನೇಹಳ್ಳಿ ಸಮೀಪದ ಅಮೃತ್ ಮಹಲ್ ಕಾವಲಿನಲ್ಲಿ ಯಾವುದೇ ಅನುಮತಿ ಪಡೆಯದೇ ಏಕಾಏಕಿ ನಾಲಾ ಕಾಮಗಾರಿ ಆರಂಭಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಅಮೃತ್ ಮಹಲ್ ಕಾವಲ್ ನಲ್ಲಿ ನಡೆದಿರುವ ಕಾಮಗಾರಿ
ಹಸಿರು ಪೀಠ, ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘಿಸಲಾಗಿದೆ. ಕಾಮಗಾರಿ ಮುನ್ನ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯಲಾಗಿಲ್ಲ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಜಾಹೀರಾತು
ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಸಚಿವ ಮಾಧುಸ್ವಾಮಿ, ಶಾಸಕ ಬಿ.ಸಿ.ನಾಗೇಶ್, ಅವರುಗಳ ನೇತೃತ್ವದಲ್ಲಿ ಇಲ್ಲಿ ನಾಲಾ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಯೋಜನೆಯ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿದೆ. ಕಾಮಗಾರಿಗಳು ನಡೆಯುವ ಪ್ರದೇಶದಲ್ಲಿ ಅರಣ್ಯ ವಯಲಗಳಿದ್ದು ಅಲ್ಲಿ ಕಾಮಗಾರಿ ಮಾಡಲು ಪರಿಸರ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಅರಣ್ಯದಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ಸುಪ್ರೀಂಕೋರ್ಟ್ ಹಸಿರುಪೀಠ ಆದೇಶ ನೀಡಿದೆ. ಪರಿಸರ ಇಲಾಖೆಯು ಹಲವು ನಿಯಮಗಳನ್ನು ರೂಪಿಸಿದೆ. ಆದರೆ ಗುತ್ತಿಗೆದಾರರು ಈ ಎಲ್ಲಾ ನಿಯಮಗಳನ್ನು ಗಾಳಿ ತೂರಿ ಕಾಮಗಾರಿ ನಡೆಸುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ಎನ್ನುತ್ತಾರೆ ಹೋರಾಟಗಾರರು.
ಕೇಂದ್ರದಲ್ಲಿರುವ ಅಮೃತ್ ಮಹಲ್ ತಳಿಗಳು
ಸಕಲೇಶಪುರದಿಂದ ಎತ್ತಿನಹೊಳೆ ನಾಲಾ ಕಾಮಗಾರಿ ಆರಂಭವಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನಾಲೆ ನಿರ್ಮಾಣ ಕಾಮಗಾರಿ ನಿರಂತರವಾಗಿ ನಡೆಯುತ್ತಲೆ ಇದೆ. ತಾಲೂಕಿನ ಕೊನೆಹಳ್ಳಿ ಸಮೀಪದ ಅಮೃತ್ ಮಹಲ್ ಕಾವಲ್ ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ನಾಲೆ ಹಾದುಹೋಗುತ್ತಿದೆ. ಇಲ್ಲಿ ಕಾನೂನು ಉಲ್ಲಂಘಿಸಿ ನಾಲೆ ನಿರ್ಮಿಸುವ ಕೆಲಸ ನಡೆಯುತ್ತಿದೆ.
ಅಮೃತ್ ಮಹಲ್ ಕಾವಲ್ ನಲ್ಲಿ ಕರ್ನಾಟಕ ಪಶು ವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೇರಿದ ದೇಶೀಯ ಅಮೃತ್ ಮಹಲ್ ತಳಿ ರಾಸುಗಳ ಅಭಿವೃದ್ಧಿಗೆ ಸಂಬಂಧಿಸಿದ ಜಾನುವಾರು ಸಂಶೋಧನಾ ಮತ್ತು ಮಾಹಿತಿ ಕೇಂದ್ರವಿದೆ.
ಕಾಮಗಾರಿ ನಿಲ್ಲಿಸುವಂತೆ ವಿ.ವಿ. ಬರೆದಿರುವ ಪತ್ರ
ಅಮೃತ್ ಮಹಲ್ ರಾಸುಗಳ ಮೇವಿಗಾಗಿ ಈ ಪ್ರದೇಶವನ್ನು ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ನಾಲಾ ಕಾಮಗಾರಿ ಆರಂಭಿಸುವ ಮೊದಲು ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿವಿಯಿಂದ ಅನುಮತಿ ಪಡೆಯುವಂತೆ ಸೂಚಿಸಲಾಗಿತ್ತು.
ಆದರೆ ಗುತ್ತಿಗೆದಾರರು ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲೇ ವಿಶ್ವವಿದ್ಯಾಲಯದ ಷರತ್ತುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಕಾಮಗಾರಿ ಕೈಗೊಂಡಿದ್ದಾರೆ. ಕಾವಲು ಭೂಮಿಯನ್ನು ಪರಭಾರೆ ಮಾಡಬಾರದು ಹಾಗು ಯಾವುದೇ ಕಾಮಗಾರಿ ನಡೆಸಬಾರದು ಎಂದು ಹೈಕೋರ್ಟ್ ಆದೇಶಗಳನ್ನು ನೀಡಿದೆ. ಕೋರ್ಟ್ ಆದೇಶಗಳಿಗೂ ಗುತ್ತಿಗೆದಾರರು ಕಿಮ್ಮತ್ತು ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಮೃತ್ ಮಹಲ್ ಕಾವಲ್ ಅರಣ್ಯ ಪ್ರದೇಶದ ಸುಮಾರು 82 ಎಕರೆಯಲ್ಲಿ ಸುಮಾರು 2 ಕಿಲೋ ಮೀಟರ್ ನಾಲೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಮುಖ್ಯವಾದ ಸಂಗತಿ ಎಂದರೆ ಎತ್ತಿನಹೊಳೆ ಯೋಜನೆಗೆ ತಿಪಟೂರು ತಾಲೂಕಿನಲ್ಲಿ ಹೆಚ್ಚು ಮಂದಿ ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಸುಮಾರು 1103 ಎಕರೆ ಭೂಮಿಯಲ್ಲಿ 53 ಕಿಲೋ ಮೀಟರ್ ಉದ್ದದ ನಾಲೆ ಕಾಮಗಾರಿ ನಡೆಯಲಿದೆ. ಆದರೂ ರೈತರ ಭೂಮಿಗೆ ವೈಜ್ಞಾನಿಕ ಮತ್ತು ಮಾರುಕಟ್ಟೆ ಬೆಲೆಯನ್ನು ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ.
ರಾಜ್ಯದ ಕೆಲವೇ ಹುಲ್ಲುಗಾವಲುಗಳ ಪೈಕಿ ತಿಪಟೂರು ಗಡಿಭಾಗದಲ್ಲಿರುವ ಕೊನೆಹಳ್ಳಿಯ ಅಮೃತ್ ಮಹಲ್ ಕಾವಲ್ ಕೂಡ ಒಂದು. ಇಂತಹ ಪ್ರದೇಶದಲ್ಲಿ ಅಮೃತ್ ಮಹಲ್ ರಾಸುಗಳ ಸಂತಾನೋತ್ಪತ್ತಿ ಕೇಂದ್ರವಿದ್ದು ನಾಲೆ ನಿರ್ಮಾಣದಿಂದ ಈ ಕೇಂದ್ರ ಮತ್ತು ಹುಲ್ಲುಗಾವಲಿಗೆ ಧಕ್ಕೆ ಆಗಲಿದೆ. ಕರ್ನಾಟಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರು ಎತ್ತಿನಹೊಳೆ ಯೋಜನೆಯ ಕಾರ್ಯಪಾಲಕ ಅಭಿಯಂತರರಿಗೆ ಪತ್ರವನ್ನು ಬರೆದಿದ್ದು ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಂಡ ನಂತರವಷ್ಟೆ ಕಾಮಗಾರಿ ಕೈಗೊಳ್ಳಬೇಕೆಂದು ಗಂಭೀರವಾಗಿ ಸೂಚನೆ ನೀಡಿದ್ದರೂ ಸಹ ಅದನ್ನು ಲೆಕ್ಕಿಸದೆ ಎತ್ತಿನಹೊಳೆ ಅಭಿಯಂತರರು ಕಾಮಗಾರಿ ಮುಂದುವರಿಸಿದ್ದಾರೆ.
ನಮ್ಮ ಸೂಚನೆಯ ನಡುವೆಯೂ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಸಲು ವಿ.ವಿ. ಒಪ್ಪಿಗೆ ನೀಡಿಲ್ಲ. ಗುತ್ತಿಗೆದಾರರು ದಬ್ಬಾಳಿಕೆಯಿಂದ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ವಿ.ವಿ. ಕುಲಸಚಿವರಿಗೆ ಮಾಹಿತಿ ನೀಡಿದ್ದೇನೆ. ಬೀದರ್ ನಲ್ಲಿ ಕೃಷಿ ಮೇಳ ನಡೆಯಲಿದ್ದು, ಅದರ ಆಯೋಜನೆಯಲ್ಲಿ ಅವರು ನಿರತರಾಗಿದ್ದಾರೆ.ಮೇಳ ಮುಗಿದ ಕೂಡಲೇ ಈ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥ ಡಾ.ರುದ್ರಸ್ವಾಮಿ publicstory. in ಗೆ ತಿಳಿದರು.
ಎತ್ತಿನಹೊಳೆಯಲ್ಲಿ ತಾಲ್ಲೂಕಿಗೆ ನೀರು ಹಂಚಿಕೆಯಾಗದ ಹೊರತು ತಾಲ್ಲೂಕಿನಲ್ಲಿ ಕಾಮಗಾರಿ ನಡೆಯಲು ಬಿಡುವುದಿಲ್ಲ. ರೈತರ ಭೂಮಿಯಾಗಲೀ, ಸರ್ಕಾರಿ ಭೂಮಿಯಾಗಲೀ ನೆಲದ ಕಾನೂನಿಗೆ ಗೌರವ ಕೊಟ್ಟು ಕೆಲಸ ಆರಂಭಿಸಬೇಕು ಎಂದು ತಿಪಟೂರು ಎತ್ತಿನಹೊಳೆ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ದೇವರಾಜ್ ತಿಮ್ಲಾಪುರ ತಿಳಿಸಿದರು.