ಉಜ್ಜಜ್ಜಿ ರಾಜಣ್ಣ
ಮಾಂಸ ಅಥವಾ ಬಾಡು ಬಾಯಿಕೆಟ್ಟರೆ ಬೊಗಸಿಕೊಂಡು ತಿನ್ನುವುದು ಭಾರತೀಯರಿಗೆ ರೂಡಿ.
ಕಾಯಿಲೆಯಾದರೆ,ತಿಂಗಳಾನುಗಟ್ಟಲೆ ಹಾಸಿಗೆ ಹಿಡಿದರೆ ಹೇಳಿ ಕಳಿಸುತ್ತಾರೆ ಬಂದು ನೋಡಿಕೊಂಡು ಹೋಗಿ ಎಂದು.
ಕೈಕಾಲುಗಳು ಆಡಲ್ಲ, ಆಗಲೇ ತಿರುಗಾಡಲ್ಲ, ಇನ್ನೇನು ಮಾತೇ ನಿಂತೋಗಿವೆ, ಮಾತು ತೊದಲುಟ್ಟಿವೆ, ಹೇಳಕಾಗಲ್ಲ ಅತ್ತಲರೇಯಾ, ಇತ್ತಲಗೇನು ಗಮನವೇ ಇಲ್ಲ, ಹೇಳಕಾಗಲ್ಲ ಯಾವುದುಕೂ ಇದ್ದಂಗೆಯಾ ಬಂದು ನೋಡ್ಕಂಡು ಹೋಗಿ ಎಂಬ ವರ್ತಮಾನ ಕಾಯಿಲೆ ಬಿದ್ದವರ ಕುರುತು ಬಂದಾಗಲೆಲ್ಲಾ , ಆಗಾದು ಹೋಗಾದು ಹೊಂಚಿಕೊಂಡು ಹಿಂದುಗುಟೆಯಾ ಯಾಟೆನೋ, ಹುಂಜುನ್ನೇ ಹಿಡಕಂಡು ಸಂಬಂಧಿಕರು ನೆಂಟರ ಮನೆ ಹಾದಿ ಹಿಡಿಯುತ್ತಿದ್ದರು.
ಹಾಕೊ ಪೈರು, ಬಿತ್ತೋ ಹದ ಇರಲಿ, ಹದ ಹಾರುತ್ತೆ ಬಿತ್ತನೆ ಹಿಂದಾಗುತ್ತೆ, ನಾಟಿ ಮಾಡೋದು ತಡವಾಗುತ್ತೆ ಎಂದು ಯಾವುದನ್ನೂ ಲೆಕ್ಕಿಸದೆ ಹೊರಟು ನಡೆಯುತಿದ್ದರು. ಹೋಗುಬೇಕು ಮೈ ತಿಕ್ಕಿ ಕಾಯಿಸಿ ನೀರೊಯ್ದು ಮಾಡಿ ಉಣ್ಣಾಕಿಕ್ಕಿ ಆನುಪಾನು ನೋಡಿ ಮಾತಾಡಿಸ್ಕಂದು ಹಿಂತಿರುಗುವುದು ಕಡ್ಡಾಯವಾದ ನಡೆ ಆಗಿತ್ತು.
ದೇಶದ ಊರು ದೇವರುಗಳು ಅವು ಬಿಡಿ ಸೀ ಊಟ ಸೀಪ್ರು ತಿಂದು ಬದುಕಿದವೇ ಅಲ್ಲ. ಇವೋ ಬಾಬಿಟ್ಟು ತುಟಿ ಎರಡು ಮಾಡಿದ್ರುವೇ ಬಾಡನ್ನೇ ಕೇಳುತ್ತವೆ. ಇವು ಎರಡು ಕಾಲಿಂದು ಕೇಳೋದು ಅಪುರೂಪ.
ಗದಿಗೆ ಬಿಟ್ಟು ಮ್ಯಾಗೆ ಎದ್ದು ಆಚೆ ಹೊರಟರೆ ನಾಲ್ಕು ಕಾಲಿಂದೇ ಬೇಕು ಅಷ್ಟು ಬಾಯಿ ಕೆಟ್ಟವು ನಮ್ಮ ಕುಲ ದೈವಗಳು. ಅವು ಕೂತರೂ, ನಿಂತರೂ ಮರಿ ಕೇಳ್ತವೆ. ಕಷ್ಟ ಹೊಡ್ಕ ಎಂದರೆ ಮರಿ ಬಿಡು ನಿನ್ನ ಉದಿಯೊಳಿಗೆ ನನ್ನ ಅರಿಕೆ ಕುರಿ ಬೆಳಿಲಿ ಆಮೇಲೆ ಕಷ್ಡ ನೋಡಾನ ಅಂದು ಬಾಯಿ ಬಿಟ್ಟೇ ಕೇಳುವಂತಹ ದೇವರುಗಳು ದೇಶದ ಉದ್ದಗಲಕ್ಕೂ ಇವೆ.
ಒಲೆ ಕೊಯ್ದು ಗುಂಡು ಹೂಡಿ ಹೊಚ್ಚಿದು ಒಲೆ ಹಾರದಂಗೆ ಗುಡಿಗುಳು ಮುಂದೆ ನಿತ್ಯವೂ ಬಾಡು ಬೇಯುತ್ತಿರುತ್ತೆ. ಬಾರತೀಯರಿಗೆ ದೈವಾನುಗ್ರಹವಾಗುವುದೇ ಬಾಡಿನ ಮೂಲಕ. ಭಾರತೀಯರು ದೇವ್ರು ಮಾಡೋಕೆ ದೇಶದ ಆಡುಕುರಿ ಸಂತೆಗಳೇ ಸಾಲ್ದು. ಕುರಿಹಟ್ಡಿಲಿ ಬೆಳಿಯೋ ಆಡುಕುರಿ ಗಳೆಲ್ಲಾ ಅರಿಕೆಗೇ ಸಾಲ್ದು.
ತಿನ್ನುಣ್ಣೋ ಜಾತಿಗರೇ ಇರುವ ಭಾರತದಲ್ಲಿ ಮಾಂಸದ ತುಂಡುಗಳನ್ನು ಎಡೆ ಮಾಡದೆ ದೇವರ ಕಾರ್ಯಗಳು ಮುಗಿಯಲಾರವು. ಗ್ರಾಮದೇವತೆ, ಹೊರಗಲಗುಡಿ, ಬೂತನಗುಡಿ, ಹಳ್ಳದ ಮಾಟಪ್ಪ, ಕೋಡಿ ಹಳ್ಳ, ಗಂಗಾ ಪೂಜೆ, ಹೊಲ್ದದೇವ್ರು, ದೆವ್ವನ್ನು ಹಿಡಿಯೋದು, ಮಾಟ್ಗ ಕೀಳೋದು ಅರಿಕೆ ತೀರುಸೋದು, ಮಂಡೆ ಕೊಡೋದು ಒಸಗೆ ಮಾಡೋದು, ಸೂತ್ಕ ಕಳಕೊಳೋದು, ತಿಥಿ, ಬೀಗರು ಊಟ, ಬೇಜಾರಾದಾಗಲೂ ಇಲ್ಲಿ ಬಾಡು ತಿನ್ನದೆಯಾ……
ಸಾಮಾನ್ಯವಾಗಿ ಸಾಂಪ್ರದಾಯಿಕ ಆಚರಣೆಗಳೆಲ್ಲವೂ ಮಾಂಸಾಹಾರ ಹೊರತುಪಡಿಸಿ ಯಾವುವೂ ನಡೆಯಲಾರವು. ಆದರೆ ಇದಕ್ಕೆ ಪ್ರತಿಯಾಗಿ ವಿರುದ್ಧವಾದ ಆಹಾರ ರಾಜಕಾರಣ ನಡೆಯುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದು ಪಶುಪಾಲನಾ ಸಮುದಾಯಗಳಿಗೆ ಹೊಡೆತ. ನಮ್ಮ ದೇಶದಲ್ಲಿ ನಮ್ಮ ಆಹಾರ ಪದ್ದತಿಯನ್ನು ಬಳಸಿಕೊಂಡು ಧಾರ್ಮಿಕ ಅಸಹಿಷ್ಣತೆ ಬೆಳೆಸುತ್ತಿರುವುದು ದುರಂತ.
ಒಂದು ಕಡೆ ಅಸಹಿಷ್ಣತೆ ಬೆಳೆಯುತ್ತಿದೆ ಇನ್ನೊಂದು ಕಡೆ ಎಲ್ಲಾ ಕಾರ್ಣೀಕಗಳಿಗೂ ಬೇಕಾದಷ್ಟು ಪ್ರಮಾಣದಲ್ಲಿ ಮಾಂಸಾಹಾರ ಬೆಳೆದು ಕೊಡುವವರ Economy ನಷ್ಟದಲ್ಲಿದೆ.
ರಾಗಿ ಮುದ್ದೆ ನಾಟಿ ಕೋಳಿ ಸಾರು ಉಂಡು ಲೋಕಸಭೆಗೆ ವಿಧಾನಸಭೆಗೆ ಹೋಗಿ ಜನಪ್ರಿಯ ರಾದವರು ರಾಗಿ ಮತ್ತು ನಾಟಿ ಕೋಳಿ ಮೌಲ್ಯವರ್ಧನೆ ಬಗ್ಗೆ ಎಂದೂ ಮಾತನಾಡುವ ಗೋಜಿಗೇ ಹೋಗಲಿಲ್ಲ.
ಊಟ ಮಾಡೋದು ರಾಗಿಮುದ್ದೆ ಮಾತಾಡೋದು ಕೊಬ್ಬರಿ, ಅಡಿಕೆ, ಕಬ್ಬು, ಭತ್ತ. ದಿನಾಲೂವೆ ಇವುರು ತಿನ್ನೋದೇನು ಮಾತಾಡೋದೇನು? ಮಾಂಸ ಬೇಯಿದಿದ್ದರೆ ದೇವರ ಕೆಲಸಗಳೇ ಕಳೆಗಟ್ಟಲ್ಲ. ದೇವಾಲಯ, ದೇವ್ರು ಮಾಡಿರೋ ಜಾಗಕ್ಕೆ ಹೋಗಿ ನೋಡಿದ್ರುರೆ ಚರ್ಮವಾ ನಾಯಿ, ನರಿ ಹದ್ದು, ಕಾಗೆ ಎಳ್ದಾಡ್ಕಂಡು ತಿನ್ನುತ್ತಿರುತ್ತವೆ.
ಕೋರಿ ಧ್ವಜ ಎತ್ತಿ ಕರುಗಲ್ಲಿಗೆ ಕ್ವಾಸೆ ಕೊಯ್ದು ಕಟ್ಟೀಮನಿಗಳ ದೇವರು ಮಾಡುವಂತಹ ಆಡುಕುರಿ ಗಾಯಿಗಳ ದೇಶ ನಮ್ದು.
ಜಗತ್ತಿನಲ್ಲಿ ಚರ್ಮೋದ್ಯಮವನ್ನು ಲಾಭದಾಯಕವಾಗಿ ಉಪಯೋಗಿಸಿಕೊಳ್ಳಲು ಜಾಗತಿಕ ಮಾರುಕಟ್ಟೆಯಲ್ಲಿ ಅವಕಾಶ ಇದ್ದರೂ ಬಹುಪಯೋಗಿ ಚರ್ಮವನ್ನು ಬಿಸಾಡಲಾಗುತ್ತಿದೆ. ಪ್ರಧಾನ ಆಹಾರ ತಳಿ ಆಡು, ಕುರಿ, ಎಮ್ಮೆ, ದನ ದೇಶದ ಆಹಾರ ರಾಜಕಾರಣಕ್ಕೆ ಗುರಿಯಾಗಿ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡಿವೆ.
ಉಜ್ಜಜ್ಜಿ ರಾಜಣ್ಣ
Mobile: 9 4 4 8 7 4 7 3 6 0