ದೇವರಹಳ್ಳಿ ಧನಂಜಯ
ಬಾಳ ಬಾನಲಿ ತೇಲಿದ
ಹೊಳೆವ ಚಂದಿರ
ಸಾವಿರ ಚೂರು
ಅಂತರಂಗದ
ಒಡೆದ ಕನ್ನಡಿಯೊಳಗೆ.
ತಿಳಿನೀಲಿ ಆಗಸ
ತೇಲುವ ಮೋಡಗಳು
ಹೊತ್ತು ತರುತ್ತವೆ
ಬಾಲ್ಯದ ಹಳೆ ನೆನಪುಗಳ
ನನ್ನೆದೆಯ ಒಳಗೆ ರಾಡಿ ಕದಡಿ
ಮನೆಮಂದಿಯೆಲ್ಲಾ
ಹಿಟ್ಟುoಡು ಬುಡ್ಡಿದುಂಬಿ
ಅಂಗಳದಿ ಮೈಚಾಚಿ
ಆಕಾಶಕ್ಕೆ ಮುಖಮಾಡಿದಾಗ
ಹೊಳೆವ ನಕ್ಷತ್ರಗಳಲ್ಲಿ
ಬೇರೆತುಹೋದ ಭಾವ.
ಕಾಲ ಸರಿಯುತ್ತಿದೆ
ಒಂದೊಂದಾಗಿ ಕರಗುತ್ತಿವೆ
ನಕ್ಷತ್ರಗಳು ಸಂಬಂಧಗಳು
ಬಾಲ್ಯದ ಮಧುರ ಕ್ಷಣಗಳು
ಗೂಬೆ ಕಣ್ಣುಗಳ ತೊಟ್ಟು
ಕತ್ತಲ ಕಾಯುತ್ತಿರುವೆ
ಜಾರಿ ಬೀಳುತ್ತಿರುವ ಉಲ್ಕೆ
ನನ್ನನ್ನ ನನಗೆ
ನಾನಾಗೆ ತೋರಿಸಿದ
ಶುದ್ಧ ಕನ್ನಡಿಗೆ
ಕವಣೆ ಕಲ್ಲುಬೀಸಿದ
ಕಾಣದ ಕೈಗಳು ನೂರಾರು.
ದೂರಿಗೆ ಸಿಕ್ಕುತ್ತಿಲ್ಲ ಯಾರೂ
ನಾನೀಗ ಕಳೆದು ಹೋಗಿದ್ದೇನೆ
ಅಂತರಂಗದ ಕನ್ನಡಿ ಇಣುಕಿದಾಗೆಲ್ಲ
ಕಣ್ಣು ಕಟ್ಟುತ್ತಿವೆ
ನಾನಿಲ್ಲದ ನಾನಲ್ಲಾದ
ನನ್ನ ಅಸಂಖ್ಯ ಮುಖಗಳು
ಕಣ್ಣು ಚುಚ್ಚುವ ಕನ್ನಡಿ ಚೂರುಗಳು.