ಜಪಾನ್‌ನಲ್ಲಿ ಚೆರ್ರಿ ಹೂವುಗಳು ಜೀವನದ ಭಾಗ . ಚೆರ್ರಿ ಹೂ ಗಳನ್ನು ಆಸ್ವಾದಿಸುವ ಬಗೆಯ ಬಗ್ಗೆ ಒಂದು ಸಂಪ್ರದಾಯವೇ ಇದೆ. ಜೊತೆಗೆ ಜೀವನದ ಅಲ್ಪಕಾಲಿಕ ಸ್ವಭಾವಕ್ಕೆ ನಿರಂತರ ರೂಪಕವಾಗಿದೆ,ಹೂವುಗಳ ಅಸ್ಥಿರತೆ, ಅಂದವಾದ ಸೌಂದರ್ಯ ಮತ್ತು ಚಂಚಲತೆ . . ಬೆಂಗಳೂರಿನಲ್ಲೂ ಚೆರ್ರಿ ಹೂಗಳನ್ನು ಆಸ್ವಾದಿಸಬಹುದು. ಇದು cherry blossom ಕಾಲ.ಚೆರ್ರಿ ಮರದ ಕೆಳಗೆ ಪ್ರಿಯತಮೆ …ಓದಿ ಡಾll ರಜನಿಯವರ ಕಣ್ಣಲ್ಲಿ.
ಚೆರ್ರಿ ಹೂಗಳು
***********
ವಸಂತದ ತನಕ
ಕಾಯುತ್ತಿಯಲ್ಲಾ
ಎಲ್ಲಿ ಅಡಗಿಸಿಟ್ಟಿದ್ದೆ ?
ಒಟ್ಟಿಗೆ ಅರಳುವೆಯಲ್ಲಾ.
ದಾರಿ ಪಕ್ಕದಲ್ಲೇ , ಕೆರೆ
ಮಗ್ಗುಲಲ್ಲೇ ಅರಳಿ ನಿಂತೆಯಲ್ಲಾ
ನಾಚಿಕೆ ಇಲ್ಲದೆ.
ಅದೆಷ್ಟು ಬಣ್ಣ ?
ಬದಲಾಗುವ ನಿನ್ನ
ಮುಖಾರವಿಂದದಂತೆ.
ಗಾಳಿಗೆ ತುಸುವೇ
ಅಲ್ಲಾಡುವ ಪಕಳೆಗಳು..
ನಿನ್ನ ಅಧರದ ಹಾಗೆ.
ನೋಡಿ ನೋಡಿ
ಸೋಲಬೇಕು..
ನಿನ್ನ ಕುಡಿ ನೋಟದಂತೆ.
ಮೆಲ್ಲಗೆ ಘಮ್ಮನೆ
ನಿನ್ನಡಿಯಲ್ಲಿ ನಡೆಯಬೇಕು…
ತೋಕದಂತೆ.
ಬಿದ್ದ ಹೂಗಳ
ಆಯಬಹುದು …
ನೀನು ಕೃಪೆ ತೋರಿದ
ಪ್ರೀತಿಯಂತೆ.
ಹೋಗೆ ಬಿಡುವೆ
ಎಂದಾಗ ಹೃದಯ
ಹಿಂಡಿದ ಹಾಗೆ…
ಒಣಗಿ ಉದುರೇ ಬಿಡುವೆಯಲ್ಲಾ.
ಇಳಿ ಸಂಜೆಯಲ್ಲಿ
ನಿನ್ನ ಕಣ್ಣುಗಳ ಹೊಳಪಿನಲ್ಲಿ…
ಮಕರಂದದ
ಮತ್ತು.
ಹೊಯ್ದ ಮಳೆಗೆ
ನೆನೆದ ಮಣ್ಣಿನ ವಾಸನೆ ..
ಉದುರಿದ ಚೆರ್ರಿ ಹೂವಿನ ಹಾಸಿಗೆ
ನಿನ್ನ ಅಂಗೈ ಬಿಸಿ …
ತಡವಾದ ಚಂದಿರ
ದೇವಲೋಕದ ದೀಪ…
ನಿನ್ನಂತೆ ಸದ್ದಿಲ್ಲದೆ
ಗೊತ್ತಾಗದಂತೆ ಅರಳಿ
ಚೆರ್ರಿ ಹೂವಿನ ಮರದ ಕೆಳಗೆ
ಕದ್ದ ಮುತ್ತು..
ನಿನ್ನ ಮುಂಗುರುಳಿಗೆ
ಸಿಕ್ಕಿ ಹಾಕಿಕೊಂಡ ಹೂವು.
ನಿನಗೂ ಅದೇ
ತಾನೇ ಬೇಕು
ಅರಳಿ ಉದುರಿದ್ದಕ್ಕೆ
ಸಾರ್ಥಕವಾಗಿ ?
ಡಾII ರಜನಿ
As beautiful as Cherry blossom 🌸🌸🌸