ಕಾಯುವುದು ಎಂದರೆ ಸುಮ್ಮನಲ್ಲ. ಕಾದಿದ್ದು ಏಕೆ? ಕಾದ ನಂತರ ಬಂದದ್ದು ಏನು? ಕಾಯುವುದು ಜಡತ್ವ ವಲ್ಲ. ಎಲ್ಲ ಚೇತನಗಳೂ ಒಟ್ಟಾಗಿ ಬಯಸಿದ ಫಲಿತಾಂಶವನ್ನು ಉಂಟು ಮಾಡಲು ಯೋಜಿಸುವ ಹುನ್ನಾರ ಕಾಯುವುದು. ಕಾಯುವುದು ಎಂದರೆ ತಪಸ್ಸು. ಕಾಯುವುದಕ್ಕೂ ಸಂಕ್ರಾಂತಿಗೂ ಏನೊ ನಂಟು. ಕಾದುವುದು ಎಂದರೆ ಯುದ್ಧ. ಒಬ್ಬೊಬ್ಬರೂ ಒಂದೊಂದಕ್ಕೆ ಕಾಯತ್ತಾರೆ. ಕಾಯುವುದು ಎಂದರೆ ಕಾದು ಪಡೆಯುವುದು ಎಂಬ ಅರ್ಥವನ್ನು ಡಾ. ರಜನಿ ಅವರ ಈ ಕವನ ನೀಡುತ್ತದೆ.
ಕಾಯುವುದು
**********
ಶರಶಯ್ಯೆಯಲಿ
ಉತ್ತರಾಯಣಕ್ಕೆ ಕಾದ
ಇಚ್ಛಾ ಮರಣಿ….
ಭೀಷ್ಮನಿಗೆ ಸಾವು
ತರಲು ಕಾದ
ಅಂಬಾ…
ಉತ್ತರಕ್ಕೆ ಪಯಣಿಸಲು
ಆರು ತಿಂಗಳು ಕಾದ
ಆದಿತ್ಯ …
ನೆಟ್ಟು ಫಸಲು
ಕಣ ಮಾಡಲು ಅರ್ಧ ವರ್ಷ
ಕಾದ ರೈತ …
ಹೊಸ ಮನೆಯಲಿ
ಹಾಲು
ಉಕ್ಕುವುದನ್ನೇ ಕಾದ ಒಡತಿ …
ಗಟ್ಟಿ ಮೊಸರಿಗಾಗಿ ಹಾಲು
ಕೆನೆ ಗಟ್ಟಿಸಲು
ಕಾದ ಸೊಸೆ …
ಪಟಕ್ಕೆ ಸೂತ್ರ
ಅಪ್ಪ ಹಾಕಿ ಕೊಡಲಿ
ಎಂದು ಕಾದ ಮಗ…
ಗಾಳಿ ಬಂದು
ಗೋತ ಹೊಡೆದ ಪಟ
ನೆಟ್ಟಗಾಗಲಿ ಎಂದು ಕಾದ
ಗೆಳೆಯರು…
ರಂಗೋಲಿ ಬಿಡಲು
ಸಗಣಿ ಸಾರಿಸಿದ
ನೆಲ ಹದವಾಗಿ ಒಣಗಲು
ಕಾದು …
ಸಾವಿರ ಕಾಲಿನ ಜಡೆ
ಹಾಕಲಿ ಎಂದು
ಕಾದ ಮಗಳು…
ಪಕ್ಕದ ಮನೆಯವರು
ಅವರೇ ಬರುತ್ತಾರ
ಎಳ್ಳು ಕೂಡಲು ಎಂದು ಕಾದು ..
ಪಾಕ ಸರಿ ಬಂತಾ
ಎಂದು ಕಾದು
ಸಕ್ಕರೆ ಅಚ್ಚಿಗೆ….
ಕಬ್ಬು ಸೀಳಿ
ಯಾವಾಗ ಕೊಡುತ್ತದೆ
ತಾತ ಎಂದು ಕಾದ
ಮೊಮ್ಮಗ …
ಕಾದರೆ ಬಾರದು
ಕಾದಬೇಕು…
ಒಳಗಿನ ತುಡಿತ
ಬೇಕಾದ್ದನ್ನು
ಪಡೆಯಲು…
ಕಾಯುವುದು
ಎಂದರೆ
ಸುಮ್ಮನಲ್ಲ…..
ಡಾII ರಜನಿ