ತುಮಕೂರು: ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹುನ್ನಾರದ ವಿರುದ್ಧ ಕುಣಿಗಲ್ ಜನರು, ಜನಪ್ರತಿನಿಧಿಗಳು, ವಿವಿ ಧ ಸಂಘ ಸಂಸ್ಥೆಗಳು, ವಕೀಲರು ಬುಧವಾರ ಕುಣಿಗಲ್ ಬಂದ್ ನಲ್ಲಿ ತೋರಿದ ಒಗ್ಗಟ್ಟು, ಶಕ್ತಿ ಪ್ರದರ್ಶನ, ಕೋಪ ಜಿಲ್ಲೆಯ ಶಾಸಕರು, ಸಂಸದರುಗಳಿಗೆ ಕಣ್ತೆರೆಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಕುಣಿಗಲ್ ತಾಲ್ಲೂಕಿನ ಜನರ ಭಾವನೆಗಳಿಗೆ ಬೆಲೆ ನೀಡಬೇಕು.
ಮಂಡ್ಯ, ರಾಮನಗರ ಜಿಲ್ಲೆಗಳಿಗೆ ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗುವ ಹುನ್ನಾರ ಮೊದಲಿನಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇದಕ್ಕೆ ಜಿಲ್ಲೆಯಲ್ಲಿನ ಒಡಕಿನ ರಾಜಕಾರಣ ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದೆ ಎಂದು ಹೇಳಲೇಬೇಕಾಗುತ್ತದೆ.
ತುಮಕೂರು ಹೇಮಾವತಿ ನಾಲೆ, ನಾಗಮಂಗಲ ಹೇಮಾವತಿ ನಾಲೆ ಸೇರ 24.5 ಟಿಎಂಸಿ ಅಡಿ ಹೇಮಾವತಿ ನೀರನ್ನು ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಆದರೆ ಈ ಎರಡೂ ನಾಲೆಗಳಲ್ಲಿ ತುಮಕೂರು ನಾಲೆಗೆ ಎಷ್ಟು ನೀರು ಹಂಚಿಕೆ ಮಾಡಲಾಗಿದೆ ಎಂಬುದನ್ನು ಎಲ್ಲೂ ಸ್ಪಷ್ಟವಾಗಿ ಹೇಳಿಲ್ಲ.
ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರು ಸರಿಯಾಗಿ ಹರಿಯುತ್ತಿಲ್ಲ ಎಂಬುದನ್ನು ಯಾರೂ ಬೇಕಾದರೂ ಹೇಳಬಲ್ಲರು. ತುಮಕೂರು ಜಿಲ್ಲೆಯ ನೀರಿನ ಮೇಲೆ ಕಣ್ಣು ಹಾಕಿದವರೇ ಹೆಚ್ಚು, ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ದಾಬಸಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು ಹಂಚಿಕೆ ಮಾಡಲಾಗಿದೆ.
ದಾಬಸಪೇಟೆ ಕೈಗಾರಿಕೆಗಳಿಗೆ ತುಮಕೂರು ನೀರಿನ ಹಂಚಿಕೆಯ ಸರ್ಕಾರದ ಆದೇಶವನ್ನು ಈಗಿನ ಬಿಜೆಪಿ ಸರ್ಕಾರ ವಾಪಸ್ ಪಡೆಯುವಂತೆ ಜಿಲ್ಲೆಯ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರು ಹಕ್ಕೊತ್ತಾಯ ಮಂಡಿಸಬೇಕು. ಇದಕ್ಕೆ ಬಿಜೆಪಿ ಶಾಸಕರು ನೇತೃತ್ವ ವಹಿಸಬೇಕು.
ಇನ್ನೂ ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹೋಗುವ ವಿಷಯುವನ್ನು ಸೂಕ್ಷ್ಮವಾಗಿ ಗಮನಿಸಬೇಕು. ತಾಲ್ಲೂಕಿನ ರೈತರ ಅಹವಾಲುಗಳಿಗೆ ಸರ್ಕಾರ ಕಿವಿಯಾಗಬೇಕು. ಅಲ್ಲಿನ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲ ಪಕ್ಷಗಳು ಶಾಸಕರು, ಸಂಸದರು ತುಟಿ ಬಿಚ್ಚಿ ಮಾತನಾಡಬೇಕಾಗಿದೆ.
ಜಿಲ್ಲೆಯಲ್ಲಿ ಎರಡು ದಶಕಗಳಿಂದ ನೀರಿನ ರಾಜಕಾರಣ ನಡೆಯುತ್ತಿದೆ. ನೀರಿನ ಹೆಸರಿನಲ್ಲಿ ರಾಜಕಾರಣ ಮಾಡುವುದು ತಪ್ಪಬೇಕು.
ರಾಜಕಾರಣಕ್ಕಿಂತಲೂ ಜಿಲ್ಲೆಯ ರೈತರ ಕಷ್ಟಗಳನ್ನು ಬಗೆಹರಿಸುವತ್ತ ಗಮನ ಕೊಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ,
ಜಿಲ್ಲೆಗೆ ಹೇಮಾವತಿ, ಭದ್ರಾ, ಭದ್ರಾ ಮೇಲ್ದಂಡೆ, ಎತ್ತಿನಹೊಳೆಯಿಂದ ಮತ್ತಷ್ಟು ನೀರನ್ನು ತರುವ ಕಡೆಗೆ ಚಿಂತನ ಮಂಥನ ನಡೆಯಬೇಕು.
ಹೇಮಾವತಿಯಿಂದ ಕೈಗಾರಿಕೆಗೆ ಹಂಚಿಕೆಯಾಗಿರುವ ನೀರನ್ನು ಕಡಿತಗೊಳಿಸಿ ಅದನ್ನು ರೈತರಿಗೆ ನೀಡುವ ಕಡೆಯೂ ಗಮನ ಹರಿಸಬೇಕು. ತುಮಕೂರು ನಗರ, ಶಿರಾ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ನೀಡುವ ಸಂಬಂಧ ಗಟ್ಟಿ ದ್ವನಿ ಮೊಳಗಬೇಕಾಗಿದೆ.