ದೇವರಹಳ್ಳಿ ಧನಂಜಯ
ಜಗತ್ತಿಗೆ ಗಾಢ ನಿದ್ರೆ
ಎಚ್ಚರ ತಪ್ಪಿದ ಜನಸ್ತೋಮ
ಕೊನೆಯಿಲ್ಲದ ಕನಸ ಕನವರಿಕೆ
ಚಿರ ಎಚ್ಚರದ ನನಸಿಗೆ
ಚಡಪಡಿಸಿದ ಕೇವಲ ಪುರುಷ.
ಕತ್ತಲ ಆಗಸದಿ ಶಶಿ ತೇಲಿದಂತೆ
ಒಳ ಬಾನು ಬೆಳಗಿತು
ಅರಿವ ಚಂದಿರ ಮೂಡಿ
ಬುದ್ಧನ ಹಗುರ ಹೆಜ್ಜೆಗಳು
ಕೊನೆಯಿಲ್ಲದ ಕತ್ತಲ ದಾಟುವ
ಕನಸ ಹೊತ್ತು ನಡೆದಿವೆ.
ನೆಲಬಾನು ತಬ್ಬಿರುವ
ಆಕಾಶಕ್ಕೆ ತೋಳು ಚಾಚಿರುವ
ಮರದ ಬುಡ ಅವನಿಗೆ ಅಮ್ಮನ ಮಡಿಲು.
ಇಲ್ಲಿಗೆ ಬರುವ ಮುನ್ನತನ್ನೊಳಗೆ
ಕಾಲು,ಕಾಲ ಸವೆದಿವೆ
ಕುಳಿತಲ್ಲೇ ಎಷ್ಟು ನಡೆದಿರಬಹುದು!
ವಿಶ್ರಾಂತಿ ತೆಗೆದುಕೋ ಮಗುವೇ
ಕೋಡು ಕುರುಡುಗಳ ಹೊತ್ತು
ಬಹಳ ಧಣಿದಿರುವೆ
ನಿನ್ನಂತೆಯೇ ನಾನೂ
ನಿಂತಲ್ಲೇ ನಡೆಯುತ್ತಿರುವೆ
ಅನುಭೂತಿ ಗೊಂಡಿತು ಮರ
ಅವನಿಗೋ ಕಾಲ ಬೇರಾಗಿಸುವ ಬಯಕೆ
ಬೇರ ಕಾಲಾಗಿಸುವ ತವಕ ಅರಳಿಮರಕೆ
ಒಳಗಣ್ಣು ಮುಚ್ಚಿಬಿಟ್ಟೀತೆಂಬ ಭಯ ಇಬ್ಬರಿಗೂ
ಸಾಗುತ್ತಲೇ ಇವೆ ನಿದ್ರೆ ಇಲ್ಲದ ರಾತ್ರಿಗಳು
ಛಲ ಬಿಡದ ಮರದ ಚಿಗುರಿನಲಿ
ಬುದ್ಧ ಮತ್ತೆ ಮತ್ತೆ ಮೂಡುತ್ತಿದ್ದಾನೆ.