ದೇವರಹಳ್ಳಿ ಧನಂಜಯ
ಕ್ಷಮಿಸಿಬಿಡು ಪ್ರಭುವೇ
ದೀಪ ಎಂಬುದು ಮೌಢ್ಯ ಅಜ್ಞಾನ
ಅಂಧಕಾರ ತೊಲಗಿಸುವ ಬೆಳಕು
ಅಂದು ಕೊಂಡಿದ್ದಕ್ಕೆ.
ಬೆಳಗುವ ದೀಪವನ್ನು ಮೌಢ್ಯ ಬಿತ್ತನೆಗೆ
ಬಳಸಬಹುದು ಎಂಬುದನ್ನು ಊಹಿಸದೇ ಇದ್ದದ್ದಕ್ಕೆ
ಕ್ಷಮಿಸಿಬಿಡು ಪ್ರಭುವೇ
ಎಲ್ಲರ ಒಳಿತಿಗಾಗಿ
ಸರ್ವಶಕ್ತನಲ್ಲಿ ದಿನವೂ
ಪ್ರಾರ್ಥಿಸಿಕೊಂಡದ್ದಕ್ಕೆ.
ಸಹಬಾಳ್ವೆಯ
ಕನಸು ಕಂಡಿದ್ದಕ್ಕೆ
ಹೊಳೆವ ದೀಪದಲ್ಲಿ ಶ್ರಮಿಕರ
ಕನಸು ಬೆಳಗುವುದ ಕಂಡದ್ದಕ್ಕೆ
ಕ್ಷಮಿಸಿಬಿಡು ಪ್ರಭುವೇ
ದಿನವಿಡೀ ದುಡಿದು
ಗೂಡು ಸೇರುವ ಹಕ್ಕಿಗಳಂತೆ
ಮನೆಗೆ ಮರಳಿದ್ದಕ್ಕೆ
ಗೋಧೂಳಿಯಲ್ಲಿ
ನಿಮ್ಮ ಆಣತಿ ಇಲ್ಲದೆ
ಪ್ರತಿದಿನ ಹಣತೆ ಹಚ್ಚಿದ್ದಕ್ಕೆ.
ಹಣತೆ ಅಚ್ಚುವುದು ಸಂಸ್ಕಾರ
ಅಂದುಕೊಂಡಿದ್ದಕ್ಕೆ
ಕ್ಷಮಿಸಿಬಿಡು ಪ್ರಭುವೇ
ಆಯ್ಕೆಯ ಮೂಲಕವೇ
ನಿಮಗೆ ಶಕ್ತಿ ತುಂಬಿದ್ದೇವೆ
ಅಂದು ಕೊಂಡಿದ್ದಕ್ಕೆ
ನಿಮ್ಮ ಶಕ್ತಿ
ನಮ್ಮ ಒಳಿತಿಗೆ ಎಂದು
ನಂಬಿ ಕೊಂಡಿದ್ದಕ್ಕೆ
ಮೌಢದ ಬಟ್ಟೆಯಲ್ಲಿ
ಕಣ್ಣು ಕಟ್ಟಿಕೊಂಡಿರುವ
ಧೃತರಾಷ್ಟ್ರನಿಗೆ
ರಾಷ್ಟ್ರ ಒಪ್ಪಿಸಿದ್ದಕ್ಕೆ
ಕ್ಷಮಿಸಿಬಿಡು ಪ್ರ ಭುವೇ
ಕತ್ತಲಲ್ಲೂ ಕಾಣುವ
ಆಳ್ವಿಕೆಯ ಹುಳುಕುಗಳನ್ನು
ಬೆಳಕಲ್ಲು ಕಾಣದೆ ಹೋಗಿದ್ದಕ್ಕೆ
ಭ್ರಮೆಯ ಬೆಳಕಲ್ಲಿ
ಕತ್ತಲ ಸತ್ಯಗಳ ಮರೆಮಾಚು ತಿರುವ
ನಿಜ ಮುಖವ
ಅರಿಯದೇ ಕುರುಡಾಗಿದ್ದಕ್ಕೆ.
ಕ್ಷಮಿಸಿಬಿಡು ಪ್ರಭುವೇ
ದುಡಿಯುವವರ ಕಿಸೆಯಲ್ಲಿ
ನೀನಿಟ್ಟ ಅಜ್ಞಾತ ಕತ್ತರಿಯ
ನೋಡದೆ ಹೋಗಿದ್ದಕ್ಕೆ
ಭ್ರಮೆಯ ಬ್ರಹ್ಮ
ರಕ್ಷಣೆಗೆ ಬರಲಾರ ಎಂಬ
ಕಟು ಸತ್ಯ
ಅರಿಯದೆ ಹೋಗಿದ್ದಕ್ಕೆ
ದೇವರಹಳ್ಳಿ ಧನಂಜಯ