ತುಮಕೂರು: ಸಾವೇ ಸರ್ವಾಧಿಕಾರಿ, ಸಾವೇ ನೀನೇಕೆ ಸಾಯುವುದಿಲ್ಲ ಎಂದು ನಾನು ಬಹುಕಾಲ ಪ್ರಶ್ನಿಸಿಕೊಂಡಿದ್ದೇನೆ ಎಂದು ನಾಡೋಜ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಹಮ್ಮಿಕೊಂಡಿದ್ದ ಕವಿ ಕೆ.ಬಿ.ಸಿದ್ದಯ್ಯ ಕಾವ್ಯ ಗೌರವ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆ.ಬಿ.ಸಿದ್ದಯ್ಯಅವರಿಗೆ ಅಪಘಾತವಾದಾಗ ನಾನು ಶಿವಮೊಗ್ಗದ ಸಿನಿಮಾ ಚಿತ್ರೀಕರಣದಲ್ಲಿದ್ದೆ. ಅವರನ್ನು ನೋಡಬೇಕು ಎನ್ನುವ ಹೊತ್ತಿಗೆ ಅವರು ನಿಧನರಾಗಿದ್ದಾರೆ ಎಂಬ ಸುದ್ಧಿ ಬಂತು. ಕಳೆದ ಒಂದು ತಿಂಗಳಲ್ಲಿ ನಾಲ್ವರು ಸಾಹಿತಿಗಳನ್ನು ಕಳೆದುಕೊಂಡಿದ್ದೇವೆ. ಅದರಲ್ಲಿ ಚನ್ನಣ್ಣ ವಾಲೀಕರ್ ಕೂಡ ಒಬ್ಬರಾಗಿದ್ದಾರೆ ಎಂದರು.
ನನಗೂ ಕೆ.ಬಿ.ಸಿದ್ದಯ್ಯ ಅವರಿಗೂ ಅಷ್ಟೇನೂ ಒಡನಾಟವಿರಲಿಲ್ಲ. ಬಹಿರಂಗದ ಗೆಳೆಯರಾಗಿರಲಿಲ್ಲ. ಬಹಿರಂಗದ ಗೆಳೆಯರು ಬೇಗ ಮುನ್ನೆಲೆಗೆ ಬರುತ್ತಾರೆ. ಆದರೆ ನಾನು ಅಂತರಂಗದ ಗೆಳೆಯ. ಹಾಗಾಗಿ ಹೆಚ್ಚು ಪರಿಚಿತನಲ್ಲ. ಅಂದರೆ ಅವರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದಲ್ಲ ಎಂದರು.
ತುಮಕೂರು ಆರ್ಟ್ಸ್ ಕಾಲೇಜಿಗೆ ನಾನು ಹೊಸದಾಗಿ ಅಧ್ಯಾಪಕನಾಗಿ ಬಂದಾಗ ಕೆ.ಬಿ.ಸಿದ್ದಯ್ಯ ನನ್ನ ವಿದ್ಯಾರ್ಥಿ. ನಾನು ಕೆಲವು ತಿಂಗಳು ಅವರಿಗೆ ಪಾಠ ಮಾಡಿದ್ದೇನೆ. ಅದು ಬಿಟ್ಟರೆ ಬಂಡಾಯ ಸಾಹಿತ್ಯ ಸಂಘಟನೆ ಸ್ಥಾಪನೆಯಾದಾಗ ನಾನು ರಾಜ್ಯ ಸಂಚಾಲಕನಾಗಿದ್ದೆ. ಕೆ.ಬಿ.ಸಿದ್ದಯ್ಯ ತುಮಕೂರು ಜಿಲ್ಲಾ ಸಂಚಾಲಕರಾಗಿದ್ದರು. ಹಾಗಾಗಿ ಸಂಘಟನೆಯ ಮೂಲಕ ಪರಿಚಿತರಾಗಿದ್ದರು. ಇದೇ ಕಾರಣಕ್ಕಾಗಿಯೇ ಬಂಡಾಯ ಸಾಹಿತ್ಯ ಸಂಘಟನೆಯ ಮೂಲಕ ಕೆ.ಬಿ.ಸಿದ್ದಯ್ಯನವರಿಗೆ ಕಾವ್ಯ ಗೌರವವನ್ನು ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
:ಕೆ.ಬಿ.ಸಿದ್ದಯ್ಯ ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ಬಂದು ಸಭಿಕರಾಗಿ ಕುಳಿತುಕೊಳ್ಳುವುದು ತುಂಬಾ ಅಪರೂಪ ಎಂದು ನನ್ನ ಗೆಳೆಯರು ಹೇಳುತ್ತಿರುತ್ತಾರೆ. ಆದರೆ ನಾನು ಇದೇ ಸಭಾಂಗಣದಲ್ಲಿ ನಡೆದ ಮೂರು ಸಮಾರಂಭಗಳಲ್ಲಿ ಸಭಿಕರಾಗಿ ಬಂದು ಕುಳಿತಿದ್ದಾರೆ. ಹೀಗಾಗಿಯೇ ಸಿದ್ದಯ್ಯ ಬಂದಿರುವುದು ತುಮಕೂರು ಬಂದಂತೆ ಎಂದು ಸಭೆಯಲ್ಲೇ ಹೇಳುತ್ತಿದ್ದೆ ಎಂದು ಸ್ಮರಿಸಿಕೊಂಡರು.
ಹಿಂದೆ ದೇವರಾಜ ಅರಸು ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಕೊಡುವ ಪದ್ದತಿ ಇತ್ತು. ಆಗ ಗ್ರಾಮ ಗ್ರಾಮಗಳಿಗೆ ಹೋಗಿ ದಲಿತ ಕೇರಿಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದ ಶಿವಾಜಿ ಕಾರ್ಣಿಕರ್ ಅವರನ್ನು ಗುರುತಿಸಿದ್ದೆವು. ಅವರು ಚೆಡ್ಡಿಯಲ್ಲಿದ್ದರು. ಚಡ್ಡಿ ಅಂದರೆ ಈಗ ಬೇರೆ ಅರ್ಥ ಇದೆ. ಅಂತಹವರ ಆಯ್ಕೆಯನ್ನು ಕೇವಲ 13 ನಿಮಿಷದಲ್ಲಿ ಮಾಡಿದ್ದೆವು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಪ್ರಶಸ್ತಿಯನ್ನು ವಿತರಣೆ ಮಾಡಿದ್ದರು. ಮತ್ತೊಂದು ಘಟನೆಯೆಂದರೆ ಕೋಣಂದೂರು ಲಿಂಗಪ್ಪ ಅವರಿಗೆ ಪ್ರಶಸ್ತಿಯನ್ನು ನೀಡಿದೆವು. ಅದಕ್ಕೆ ಕೆ.ಬಿ.ಸಿದ್ದಯ್ಯ ಕೂಡ ಸಮ್ಮತಿ ಸುಚಿಸಿದ್ದರು. ಪ್ರಶಸ್ತಿ ಸಮಾರಂಭದಲ್ಲಿ ಸ್ವತಃ ಯು.ಆರ್.ಅನಂತಮೂರ್ತಿ ಸಭಿಕರಾಗಿ ಬಂದು ಕೂತಿದ್ದರು. ಆಯ್ಕೆ ಸಮಿತಿಯಿಂದ ಕೆ.ಬಿ.ಸಿದ್ದಯ್ಯ ಕೂಡ ಬಂದಿದ್ದರು ಎಂದು ಸ್ಮರಿಸಿದರು.