ವಿಶೇಷ ವರದಿ:ಲಕ್ಷ್ಮಿಕಾಂತ ರಾಜ್
ಗುಬ್ಬಿ ತಾಲ್ಲೂಕಿನ ಚೇಳೂರು, ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಈ ಎರಡು ಕೇಂದ್ರಗಳಲ್ಲಿ ಯಾವುದನ್ನು ತಾಲ್ಲೂಕು ಕೇಂದ್ರವಾಗಿ ಮಾಡಬೇಕೆಂಬ ಬಗ್ಗೆ ಅಧ್ಯಯನಕ್ಕಾಗಿ 2009ರಲ್ಲೇ ಅಂದಿನ ರಾಜ್ಯ ಸರ್ಕಾರ ನಿವೃತ್ತ ಅಧಿಕಾರಿ ಎಂ.,ಬಿ.ಪ್ರಕಾಶ್ ಸಮಿತಿ ನೇಮಕ ಮಾಡಿತ್ತು. ಈ ಸಮಿತಿ ನೀಡಿದ ಶಿಫಾರಸು ಏಕ ಪಕ್ಷೀಯವಾಗಿತ್ತು. ಹೊಸ ಸಮಿತಿ ನೇಮಕ ಮಾಡುವ ಮೂಲಕ ಚೇಳೂರು ತಾಲ್ಲೂಕು ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂಬುದು ಈ ಭಾಗದ ಜನರ ಹಕ್ಕೊತ್ತಾಯವಾಗಿದೆ.
ಪ್ರಕಾಶ್ ಸಲಹಾ ಸಮಿತಿಯು ಪಕ್ಕದ ಕಳ್ಳಬೆಳ್ಳ ತಾಲ್ಲೂಕು ಕೇಂದ್ರವನ್ನಾಗಿಸಿ ಗುಬ್ಬಿಯ ಚೇಳೂರು ಹೋಬಳಿಯ ನಲ್ಲೂರು ಮತ್ತು ಅಂಕಸಂದ್ರ ಪಂಚಾಯಿತಿ ಹಾಗೂ ಹಾಗಲವಾಡಿ ಹೋಬಳಿಯನ್ನ ಕಳ್ಳಂಬೆಳ್ಳ ಉದ್ದೇಶಿತ ತಾಲ್ಲೂಕು ಕೇಂದ್ರವನ್ನಾಗಿಸಲು ಗುಬ್ಬಿ ತಾಲ್ಲೂಕಿನ ಈ ಮೇಲ್ಕಾಣಿಸಿದ ಭಾಗಗಳನ್ನ ಸೇರಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.
ಆ ಸಮಯದಲ್ಲಿ ಚೇಳೂರು ಹಾಗೂ ಹಾಗಲವಾಡಿ ಭಾಗದಲ್ಲಿ ವ್ಯಾಪಕ ವಿರೋಧ ಉಂಟಾದ ಹಿನ್ನೆಲೆಯಲ್ಲಿ ಪ್ರಕಾಶ್ ಸಮಿತಿಯು ಶಿಫಾರಸ್ಸು ಮಾಡಿದ್ದ ಕಳ್ಳಂಬೆಳ್ಳ ತಾಲ್ಲೂಕನ್ನ ಸರ್ಕಾರ ವರದಿಯಿಂದ ಕೈಬಿಡಲಾಯಿತು. ಇದಾದ ಬಳಿಕ ಚೇಳೂರು ತಾಲ್ಲೂಕು ಕೇಂದ್ರದ ಹೋರಾಟಕ್ಕೆ ಮಂಕು ಬಡಿಯಿತು ಎಂದು ನೆನಪಿಸಿಕೊಳ್ಳುತ್ತಾರೆ ಇಲ್ಲಿನ ಹಿರಿಯರು.
ಸಲಹಾ ಸಮಿತಿಯು ಶಿಫಾರಸ್ಸು ಮಾಡಿದ್ದ ಕಳ್ಳಂಬೆಳ್ಳವು ಶಿರಾ ತಾಲ್ಲೂಕು ಕೇಂದ್ರದಿಂದ ಕೇವಲ ಹತ್ತು ಕಿಮೀ ಅಂತರ ಇದ್ದು ಇದೊಂದು ಉದ್ದೇಶಿತ ಪೂರಿತ ಶಿಫಾರಸು ಆಗಿತ್ತು. ನಿಜ ಅರ್ಥದಲ್ಲಿ ಚೇಳೂರನ್ನು ತಾಲ್ಲೂಕು ಮಾಡುವುದೇ ಸರಿಯಾಗಿದೆ. ಇದು ವೈಜ್ಞಾನಿಕವೂ ಆಗಿದೆ ಎಂದು ಇಲ್ಲಿನ ಹಿರಿಯರೊಬ್ಬರು ತಿಳಿಸಿದರು.
ಹಾಗೆ ನೋಡಿದರೆ ಕಳ್ಳಂಬೆಳ್ಳ ಗ್ರಾಮಕ್ಕಿಂತ ಚೇಳೂರು ತಾಲ್ಲೂಕು ಕೇಂದ್ರವಾಗಲು ಹೆಚ್ಚು ಅರ್ಹತೆ ಹೊಂದಿದೆ. ಚೇಳೂರಿನಲ್ಲಿ ಶಿಕ್ಷಣ ಕ್ಷೇತ್ರವೂ ಮುಂದುವರೆದಿದೆ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ,ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಸರ್ಕಾರಿ ಮತ್ತು ಖಾಸಗಿ ಪಿಯು ಕಾಲೇಜುಗಳು ಮತ್ತು ಖಾಸಗಿ ಐಟಿಐ ಹಾಗೂ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗಳ ಜೊತೆಗೆ ತಾಲ್ಲೂಕು ಮಟ್ಟದಂತೆ ಪ್ರತಿಷ್ಟಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿವೆ. ಆದ್ದರಿಂದ ಎಲ್ಲ ರೀತಿಯಿಂದಲೂ ಚೇಳೂರು ತಾಲ್ಲೂಕು ಕೇಂದ್ರವಾಗಿಸಲು ಅರ್ಹತೆ ಎನ್ನುತ್ತಾರೆ ಚೇಳೂರು ಭಾಗದ ಮುಖಂಡರುಗಳು.
ಹಾಗಲವಾಡಿಯಿಂದ ಗುಬ್ಬಿಯು ನಲವತ್ತೈದು ಕಿಮೀ ಅಂತರವಿದ್ದು ತಾಲ್ಲೂಕು ಕಚೇರಿಗಳಿಗೆ ಹೋಗಿಬರಲು ಒಂದು ದಿನವೇ ಬೇಕಾಗಿದ್ದು ನಮ್ಮ ಸಮೀಪದ ಚೇಳೂರು ತಾಲ್ಲೂಕು ಕೇಂದ್ರವಾದರೆ ನಮಗೆ ಎಲ್ಲ ರೀತಿಯಿಂದಲೂ ಅನುಕೂಲವಾಗುತ್ತದೆ.
ಶಿವರಾಜು,ಹಾಗಲವಾಡಿ
ಚೇಳೂರು ತಾಲ್ಲೂಕು ಆಗುವದಾದರೆ ನೆರೆಯ ಶಿರಾ ತಾಲ್ಲೂಕಿನ ಗೋಪಾಲದೇವರಹಳ್ಳಿ ಪಂಚಾಯತಿಯು ಶಿರಾಕ್ಕೆ ದೂರವಿದ್ದು ಈ ಪಂಚಾಯತಿಯನ್ನ ಚೇಳೂರು ತಾಲ್ಲೂಕಿಗೆ ಸೇರ್ಪಡೆಯಾಗಲು ವೈಜ್ಞಾನಿಕವಾಗಿದ್ದು ಅಲ್ಲಿನ ಜನರು ಈ ಕುರಿತು ಆಸಕ್ತಿದಾಯಕವಾಗಿದ್ದಾರೆ
ಕಿರಣ್ ಕುಮಾರ್,ಬಿಜ್ಜನಬೆಳ್ಳ ಶಿರಾ ತಾಲ್ಲೂಕು