- ವಿಶೇಷ ವರದಿ: ಲಕ್ಷ್ಮೀಕಾಂತರಾಜು ಎಂಜಿ,9844777110
ರಾಜ್ಯ ಸರ್ಕಾರ ಹೊಸ ತಾಲ್ಲೂಕುಗಳ ರಚನೆಗೆ ಮುಂದಾಗುತ್ತಿದ್ದಂತೆ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಕೇಂದ್ರ ಹೊಸ ತಾಲ್ಲೂಕು ಆಗಲಿದೆಯೇ ಎಂಬ ಆಸೆ ಚಿಗುರೊಡೆದಿದೆ.
ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಕೇಂದ್ರವು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ. ಇಲ್ಲಿ ನಡೆಯುವ ವಾಣಿಜ್ಯ ವ್ಯವಹಾರ ವಹಿವಾಟು ತಾಲ್ಲೂಕು ಕೇಂದ್ರ ಗುಬ್ಬಿಯಲ್ಲೂ ನಡೆಯುವುದಿಲ್ಲ. ಗುಬ್ಬಿ ಕೇಂದ್ರ ಸ್ಥಾನದಿಂದ ತಾಲ್ಲೂಕಿನ ಗಡಿ ಗ್ರಾಮಗಳಿಗೆ ಐವತ್ತು ಕಿಮೀ ದೂರವಿದೆ. ಇದರಿಂದ ಕೆಲಸ ಕಾರ್ಯಗಳಿಗೆ ಗುಬ್ಬಿ ಕಚೇರಿಗೆಳಿಗೆ ಹೋಗಿ ಬರಲು ಒಂದು ದಿನವೂ ಸಾಲದಾಗಿದೆ ಎನ್ನುತ್ತಾರೆ ಇಲ್ಲಿನ ಜನರು.
ಉದ್ದೇಶಿತ ಚೇಳೂರು ತಾಲ್ಲೂಕು ವ್ಯಾಪ್ತಿಗೆ ಸೇರಲಿರುವ ಹಾಗಲವಾಡಿ ಹೋಬಳಿ ಗುಬ್ಬಿ ತಾಲ್ಲೂಕಿನ ಬಹುದೊಡ್ಡ ಹೋಬಳಿಯಾಗಿದೆ. ಹಾಗಲವಾಡಿ ಹೋಬಳಿಯ ಭೌಗೋಳಿಕ ವಿಸ್ತಾರ ಎರೆಡು ಹೋಬಳಿಗೆ ಸಮವಾಗಿದೆ. ಈ ಹೋಬಳಿಯ ಗಡಿಗ್ರಾಮಗಳಾದ ಬೋಡತಿಮ್ಮನಹಳ್ಳಿ ಹಾಗೂ ಶಿವರಾಂಪುರ ಸೇರಿಸದಂತೆ ಅನೇಕ ಗ್ರಾಮಗಳು ಪ್ರಸ್ತುತ ತಾಲ್ಲೂಕಿನ ಕೇಂದ್ರದಿಂದ ಐವತ್ತು ಕಿಮೀ ಅಂತರವಿದ್ದು, ಈ ಭಾಗದ ಗ್ರಾಮಸ್ಥರು ಗುಬ್ಬಿಗೆ ಕೆಲಸ ಕಾರ್ಯಗಳಿಗೆ ಬಂದು ಹೋಗಲು ಕಷ್ಟಕರ.
ಕಡಿಮೆ ಅಂತರದಲ್ಲಿ ಸಾರ್ವಜನಿಕರಿಗೆ ಆಡಳಿತ ಅನುಕೂಲ ಸಿಗುವ ದೃಷ್ಟಿಯಲ್ಲಿ ಈಗಾಗಲೇ ರಾಜ್ಯದಲ್ಲಿ ಹಲವು ಪಟ್ಟಣಗಳನ್ನ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳನ್ನಾಗಿ ಮಾಡಲಾಗಿದೆ. ಈಗಾಗಲೇ ತಾಲ್ಲೂಕು ಕೇಂದ್ರವಾಗಿ ಬಡ್ತಿ ಪಡೆದಿರುವ ಪಟ್ಟಗಳ ಮಾನದಂಡ ನೋಡಿದಾಗ ಅದಕ್ಕಿಂತ ಹೆಚ್ಚು ಅರ್ಹತೆಗಳನ್ನ ಚೇಳೂರು ಹೊಂದಿದೆ.
ಚೇಳೂರಿನಲ್ಲಿ ಈಗಾಗಲೇ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯೂ ಇದ್ದು ರೈತರು ಇದನ್ನೇ ಬಳಸಿಕೊಳ್ಳುತ್ತಿದ್ದಾರೆ. ಕೊಬ್ಬರಿ ವಹಿವಾಟಿನಲ್ಲಿ ತಿಪಟೂರು ನಂತರದ ಸ್ಥಾನ ಚೇಳೂರು ಆಗಿದೆ. ಅಡಕೆ ವ್ಯಾಪಾರದಲ್ಲಿ ಚೇಳೂರು ಇಡೀ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿದ್ದು ಬಹುದೊಡ್ಡ ವಹಿವಾಟು ನಡೆಯುತ್ತಿದೆ. ಇನ್ನು ಹಣ್ಣುಗಳಾದ ಹಲಸು ಮತ್ತು ಮಾವಿನ ಹಣ್ಣುಗಳ ವ್ಯಾಪಾರಕ್ಕೆ ಚೇಳೂರು ಹೆಸರುವಾಸಿಯಾಗಿದ್ದು ಇಡೀ ದೇಶದಲ್ಲಿಯೇ ಹೆಸರು ಮಾಡಿರುವ ಸಿದ್ದು ಹಲಸು ತಳಿ ಚೇಳೂರಿನದ್ದಾಗಿರುವುದು ವಿಶೇಷ.
ಕೃಷಿ,ವಾಣಿಜ್ಯ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಗುಬ್ಬಿ ತಾಲ್ಲೂಕಿನ ಚೇಳೂರು ತಾಲ್ಲೂಕು ಕೇಂದ್ರವಾಗಲು ಎಲ್ಲ ರೀತಿಯಿಂದಲೂ ಅರ್ಹತೆ ಇದೆ.
ಹಾಗಲವಾಡಿ,ಚೇಳೂರು ,ನಿಟ್ಟೂರು ಹೋಬಳಿಯ ಕೆಲ ಪಂಚಾಯ್ತಿಗಳು ಮಳೆ ಕೊರತೆಯಿಂದ ತೀರಾ ಹಿಂದುಳಿದಿದ್ದು ಅಭಿವೃದ್ದಿ ಹೊಂದುವ ದೃಷ್ಟಿಯಿಂದ ಚೇಳೂರು,ಹಾಗಲವಾಡಿ ಹೋಬಳಿಗಳ ಜತೆಗೆ ನಿಟ್ಟೂರು ಹೋಬಳಿಯ ಕೆಲ ಪಂಚಾಯ್ತಿಗಳನ್ನ ಸೇರಿಸಿ ಚೇಳೂರನ್ನ ತಾಲ್ಲೂಕು ಕೇಂದ್ರವನ್ನಾಗಿ ಮಾಡಿದರೆ ಈ ಭಾಗ ಅಭಿವೃದ್ಧಿಯಾಗುವುದರಲ್ಲಿ ಅನುಮಾನವಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಲಿ ಎಂಬುದೇ ಈ ಭಾಗದ ರೈತರ ಒತ್ತಾಯವಾಗಿದೆ.
ಚೇಳೂರು ಇತಿಹಾಸ ಪ್ರಸಿದ್ಧವೂ ಹೌದು. ಇಲ್ಲಿನ ಶ್ರೀಮರಳು ಬಸವೇಶ್ವರ ಸ್ವಾಮಿ ದೇವಾಲಯವಿದೆ. ಜಾನುವಾರುಗಳು ಕಡಿಮೆಯಾಗುತ್ತಿರುವ ಈ ಕಾಲಮಾನದಲ್ಲೂ ವರ್ಷಕ್ಕೊಮ್ಮೆ ನಡೆಯುವ ಮರಳುಬಸವೇಶ್ವರ ಸ್ವಾಮಿಯ ಜಾತ್ರೆಯಲ್ಲಿ ಭಾರೀ ದನಗಳ ಜಾತ್ರೆ ನಡೆಯತ್ತದೆ. ಇಲ್ಲಿ ಎತ್ತುಗಳನ್ನ ಕೊಳ್ಳಲು ದೂರದ ಬಿಜಾಪುರ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ರೈತರು ಬರುವುದು ವಿಶೇಷ.
ಚೇಳೂರಿನ ಕುರಿತು ಮತ್ತೊಂದು ದಂತ ಕತೆಯೆಂದರೆ ಇಲ್ಲಿನ ಮರಳುಬಸವೇಶ್ವರ ಸ್ವಾಮಿಯು ಘರ್ಜಿಸಿ,ಚೇಳೂರು ಬಾವಿಯು ತುಂಬಿ ಹರಿದು ಇಲ್ಲಿನ ಊರು ಬಾಗಿಲಲ್ಲಿ ಕೆತ್ತಿರುವ ಕಲ್ಲು ಕೋಳಿಯು ಕೂಗಿದರೆ ಪ್ರಪಂಚ ಪ್ರಳಯವಾಗುತ್ತದೆ ಎಂಬುದು ಇಲ್ಲಿ ಹಿಂದಿನಿಂದ ಕೇಳಿ ಬರುತ್ತಿರುವ ದಂತ ಕತೆಯಾಗಿದೆ.
ಚೇಳೂರಿನಲ್ಲಿ ಈಗಾಗಲೇ ಪೊಲೀಸ್ ಠಾಣೆ ಹಾಗೂ ಹಾಗಲವಾಡಿಯಲ್ಲಿ ಉಪ ಠಾಣೆ ಹೊಂದಿದ್ದು ಮೈಸೂರಿನಿಂದ ಉತ್ತರ ಭಾರತಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಚೇಳೂರು ಪಟ್ಟಣವಿರುವ ಕಾರಣ, ಸಮೂಹ ಸಾರಿಗೆ ವ್ಯವಸ್ಥೆಗೆ ಅನುಕೂಲವಿದೆ.
ಹತ್ತು ವರ್ಷಗಳ ಹಿಂದೆಯೇ ಚೇಳೂರು ತಾಲ್ಲೂಕು ಕೇದ್ರ ಮಾಡಲು ಆಗ್ರಹಿಸಿ ಹೋರಾಟ ಮಾಡಲಾಗಿತ್ತು. ಕಳೆದ ವರ್ಷವೂ ಚೇಳೂರು ಪಟ್ಟಣವನ್ನ ತಾಲ್ಲೂಕು ಕೇಂದ್ರ ಮಾಡಲು ಆಗ್ರಹಿಸಿ ಚೇಳೂರು ಬಂದ್ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಚೇಳೂರು ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಸರ್ಕಾರ ಘೋಷಿಷಬೇಕಾಗಿದೆ
ಕಾರ್ತಿಕ್, ಅಧ್ಯಕ್ಷರು ಜಯಕರ್ನಾಟಕ ಸೇನೆ,ಚೇಳೂರು