ತುರುವೇಕೆರೆ : ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ರಾಹುಲ್ ಗಾಂಧಿಯವರು ಏ.25ರೊಳಗೆ ತುರುವೇಕೆರೆಗೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ತಿಳಿಸಿದರು.
ಪಟ್ಟಣದ ಬೆಮೆಲ್ ಕಾಂತರಾಜು ಕಚೇರಿಯಲ್ಲಿ ನಡೆದ ಮಾಯಸಂದ್ರ ಹೋಬಳಿ ಮತ್ತು ದಬ್ಬೇಘಟ್ಟ ಹೋಬಳಿಯ ನೂರಾರು ಕಾರ್ಯಕರ್ತರು ಜೆಡಿಎಸ್ ಮತ್ತು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುರುವೇಕೆರೆ ಮೂಲಕ ಹಾಯ್ದು ಹೋಗಿದ್ದ ರಾಹುಲ್ ಗಾಂಧಿಯವರ ಭಾರತ್ ಜೋಡೋಯಾತ್ರೆ ಯಶಸ್ವಿಯಾಗಿದೆ. ಸಾವಿರಾರು ಜನ ಈ ಯಾತ್ರೆಯಲ್ಲಿ ಭಾಗವಹಿಸಿದ್ದು, ಇದನ್ನು ಮನಗಂಡ ರಾಹುಲ್ ಗಾಂಧಿ ಅವರು ಪುನಃ ಈ ಕ್ಷೇತ್ರಕ್ಕೆ ಬಂದು ನನ್ನ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಈ ಪ್ರಚಾರದಲ್ಲಿ ಸು 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದ್ದು, ತುರುವೇಕೆರೆಯಲ್ಲೂ ಸಹ ಕಾಂಗ್ರೆಸ್ ಪಕ್ಷ ಜಯಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ನಾಯಕರುಗಳಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗು ಜಮೀರ್ ಅಹಮದ್ ಕ್ಷೇತ್ರಕ್ಕೆ ಆಗಮಿಸಲಿದ್ದು ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್ ಮಾತನಾಡಿ, ಮಾಯಸಂದ್ರ ಹೋಬಳಿಯ ಅಜ್ಜೇನಹಳ್ಳಿ, ನಾಗೇಗೌಡನ ಬ್ಯಾಲ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಯುವಕರು ಕಾಂಗ್ರೆಸ್ ಪಕ್ಷದ ತತ್ವಗಳಿಗೆ ಪ್ರೇರಿತರಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ನಾಗೇಶ್, ಗೋಣಿತುಮಕೂರು ಲಕ್ಷ್ಮೀಕಾಂತ್, ನಂಜುಂಡಪ್ಪ, ಮುತ್ತುಗದಹಳ್ಳಿ ಕೆಂಪರಾಜ್, ಕೋಳಾಲ ಕೆ.ಎಂ. ನಾಗರಾಜ್, ಗುರುದತ್, ದಂಡಿನಶಿವರ ಕುಮಾರ್, ಲಕ್ಷ್ಮಿದೇವಮ್ಮ, ಸೈಯದ್ ಯುನಸ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.