ನವರಾತ್ರಿಯ ಈ ದಿನ ಚಂದ್ರಘಟ್ಟಾ ದೇವಿಯ ದಿನವಾಗಿದೆ. ಚಂದ್ರಘಟ್ಟಾ ದೇವಿಯು ಕಂದು ಬಣ್ಣದ ಪ್ರತೀಕವಾಗಿದೆ. ಕಷ್ಟಗಳನ್ನು ನಿವಾರಿಸುವ ದೇವತೆ. ಊದಾ ಬಣ್ಣದ ಪ್ರತೀಕವೇ ಶ್ರಮ ಜೀವಿಗಳು. ಶ್ರಮಜೀವಿಗಳ ಬದುಕನ್ನು ದೇವಿಯೊಂದಿಗೆ ಸಮೀಕರಿಸಿದ್ದಾರೆ ಈ ಕವನದಲ್ಲಿ ಡಾ. ರಜನಿಯವರು.
ಊದಾ ಬಣ್ಣ
***********
ಊದಾ ಬಣ್ಣವೋ, ಕಂದು ಬಣ್ಣವೋ
ಸ್ಲೇಟ್ ಬಣ್ಣವೋ,
ಬೂದಿ ಬಣ್ಣವೋ….
ಇದು ಪರಿಶ್ರಮದ ಸಂಕೇತವಂತೇ
ಅದಕ್ಕೆ ಇರಬೇಕು
ಕಬ್ಬಿಣ, ಸಲಾಕೆ, ಗುದ್ದಲಿ
ಗರಗಸ ಎಲ್ಲವೂ …
ಮೋಡ, ಚಂದಿರ
ಮಳೆ ಆಕಾಶ
ರಾತ್ರಿ ಸಮುದ್ರ…
ದೊಡ್ಡ ತಿಮಿಂಗಿಲ, ಆನೆ
ಸಣ್ಣ ಇಲಿ
ಕಿತ್ತು ತಿನ್ನುವ ತೋಳ
ಭಾವನೆಗಳ ಹಿಡಿತಕ್ಕೆ
ಬಣ್ಣವಿಲ್ಲದೇ
ತಟಸ್ಥವೇ ?
ಎಳೆಯದೆಲ್ಲಾ ಹಸಿರು
ವಯಸ್ಸಾಗಿದ್ದೆಲ್ಲಾ
ಊದಾ ಬಣ್ಣವೆ?
ನೆರೆತ ಕೂದಲು, ಒಣ ಹುಲ್ಲು
ಒಣಗಿದುದೆಲ್ಲಾ?
ಬೂದಿ ಮುಚ್ಚಿದ ಕೆಂಡವೇ?
ಆಗಾಗ ಸಿಡಿದು ಚಿಮ್ಮುವ
ಲಾವಾ ರಸವೇ ಆರಿ ..
ಹಿಡಿ ಬೂದಿ
ಹಣೆ ವಿಭೂತಿ
ಜೀವನ ಪರ್ಯಂತ ಪರಿಶ್ರಮಿಸಿ
ಆರುವಾಗ
ಹೊಗೆ
ಬೂದಿ
ಇದು ಸತ್ಯವೇ….
ಡಾII ರಜನಿ