ಇಂದು ನವರಾತ್ರಿಯ ನಾಲ್ಕನೇ ದಿನ. ನವರಾತ್ರಿ ಎಂದರೆ ನವ ದುರ್ಗೆಯರ ಹಬ್ಬ. ಒಬ್ಬೊಬ್ಬ ದುರ್ಗೆಯೂ ಒಂದೊಂದು ಬಣ್ಣದ ಸಂಕೇತ. ಒಂದೊಂದು ಬಣ್ಣವೂ ಒದೊಂದರ ಸಂಕೇತ. ಹೀಗೆ ಬಣ್ಣಗಳ, ಮಾತೆಯರ ಸಂಕೇತವನ್ನು ಪ್ರಕೃತಿ, ಮಾನವನ ಬದುಕಿನೊಂದಿಗೆ ಬೆಸೆದು ಕಟ್ಟುತ್ತಿರುವ ಕವನಗಳೇ ನವರಾತ್ರಿ ಕವನಗಳು. ಇದೊಂದು ಅದ್ಯಾತ್ಮ ಸಾಹಿತ್ಯದ ಹೊಸ ಪ್ರಯೋಗ ಮಾಡಿದವರು ಡಾ. ರಜನಿ ಅವರು.
ಇದು ಅವರ ನಾಲ್ಕನೇ ಕವಿತೆ. ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವತೆಯನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವತೆ ಕೇಸರಿ ಬಣ್ಣದ ಪ್ರತೀಕ. ಕೇಸರಿ ಬಣ್ಣವು ಶಕ್ತಿ ಮತ್ತು ಸಂತೋಷವನ್ನು ತೋರಿಸುತ್ತದೆ. ಅಂದ ಹಾಗೆ ಕೂಷ್ಮಾಂಡ ದೇವಿಗೆ ಎಂಟು ಕೈಗಳು.
ಕಿತ್ತಳೆ
****
ಹಳದಿ ಕೆಂಪು
ಹದವಾಗಿ ಬೆರೆಸಿ
ಆದ ಬಣ್ಣವೋ…
ಅದಾವ ಊಹೆ ನಿನ್ನದು?
ಇಷ್ಟು ಬಣ್ಣಗಳ
ಸರದಾರ…
ಸಮುದ್ರದ ನೀಲಿಯೊಳಗೆ
ಕಡು ಕಿತ್ತಳೆ
ಮೀನುಗಳು…
ಆಕಾಶದ ನೀಲಿಯಲ್ಲಿ
ಕಿತ್ತಳೆ , ಹಳದಿ, ಕೆಂಪು
ರಂಗಿನಾಟ ..
ಎರಡು ಬಾರಿ ದಿನಕ್ಕೆ
ಹಚ್ಚ ಹಸಿರ ಗಿಡದಲ್ಲಿ
ಕಿತ್ತಳೆ ಹೂವು
ಹಣ್ಣುಗಳು…
ಅತಿ ಮಾಗಿ ಕೆಂಪಾಗುವ
ಮುನ್ನ ತುಸು
ಮಾಗಿದ ಬಣ್ಣವೆ?…
ತ್ಯಾಗದ ಸಂಕೇತವೇ?
ವಿರಕ್ತಿಯ
ಕುರುಹೇ ?…
ಬಿರು ಬೇಸಿಗೆಯ
ಹಣ್ಣುಗಳಿಗೆಲ್ಲಾ
ಇದೇ ಬಣ್ಣವೇ ?…
ಕಣ್ಣಿಗೆ ಹಿತ
ರೋಗಗಳಿಗೆ
ನಿಯಂತ್ರಣವೇ?…
ಬಂಡಾರ ತಿಲಕ
ಕೇಸರಿ ಹಣೆ
ಬಟ್ಟು …
ಹಸಿರಲ್ಲಿ, ನೀಲಿಯಲ್ಲಿ
ತಕ್ಷಣ ಕಿತ್ತಳೆ..
ನಿನ್ನ ಕುಂಚ ದಾಟವೇ?…
ಊಹಾತೀತ ಬಣ್ಣಗಳ
ಜೀವ ಸೃಷ್ಟಿಗಳ
ನೇಯ್ದ ಕಲಾಕಾರನೇ…
ಒಂದೊಂದು ಬಣ್ಣಕ್ಕೂ
ಒಂದೊಂದು
ಬೆರಗು…
ಅಷ್ಟು ಬಣ್ಣಗಳ
ನಿನ್ನ ಚಿತ್ರಪಟಕ್ಕೆ
ಶರಣು…
ಡಾII ರಜನಿ