ತುಮಕೂರು:
ಜಿಲ್ಲೆಯ ಸಿರಾ ತಾಲ್ಲೂಕಿನ ಕಸಬಾ ಹೋಬಳಿಯ ಮಾಗೋಡು ಕಂಬದ ರಂಗನ ಹೂವಿನ ರಥೋತ್ಸವ ರಾಜ್ಯದಲ್ಲೇ ಪ್ರಸಿದ್ದಿ.
ಮಾಗೋಡು ರಂಗನ ಮಹಿಮೆ ಬಲ್ಲಿರೇನು?
ಮಾಗೋಡು ಸಿರಾ ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಶೇಷವಾಗಿ ಇದೊಂದು ಬುಡಕಟ್ಟು ಗ್ರಾಮ. ಆದರೂ ಐತಿಹಾಸಿಕವಾಗಿ , ಆಧ್ಯಾತ್ಮಿಕ ವಾಗಿ ಮಾಗೋಡು ರಾಜ್ಯದ ಒಳಗೂ ಹೊರಗೂ ಪ್ರಸಿದ್ದಿ. ಈ ಪ್ರಸಿದ್ದಿ ಇಲ್ಲಿನ ಆದಿದೈವ ಶ್ರೀರಂಗನಾಥನ ಕಾರಣದಿಂದ. ಮಾಗೋಡು ಕಂಬದ ರಂಗನಾಥ ಎಂದರೆ ಅದೊಂದು ಇಷ್ಟಾರ್ಥದ, ಬೇಕಾದ ಅನುಕೂಲಗಳನ್ನೆಲ್ಲಾ ಅನುಗ್ರಹಿಸುವ ದೈವ.
ಈ ರಂಗನಾಥ ಕಂಬದಲ್ಲಿ ಒಡಮೂಡಿದ ಕಾರಣಗಳಿಂದ ಕಂಬದರಂಗ, ಕಂಬದಯ್ಯ,ಕಂಬದ ರಂಗಣ್ಣ, ಕಂಬದರಂಗನಾಥ ಎಂದೆಲ್ಲಾ ಕರೆದು ಆರಾಧಿಸುವುದು ಇಲ್ಲಿನ ವಾಡಿಕೆ. ಈ ದೈವಕ್ಕೆ
ಹೂವೇ ಸರ್ವಸ್ವ. ಲಾರಿಗಟ್ಟಲೆ ಹೂವಿನ ಹಾರವನ್ನು ಶ್ರೀ ರಂಗನಾಥನತೇರಿಗೆ ಹಾಕುವುದು ವಾಡಿಕೆ ಮಾತ್ರವಲ್ಲ, ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಹರಕೆಯ ರೂಪದಲ್ಲಿ ಹೂವನ್ನು ಅರ್ಪಿಸುವುದು ಸಂಪ್ರದಾಯ. ಕಂಬದ ರೂಪದಲ್ಲಿ ಹೊರಬಂದ ಶ್ರೀ ಹರಿಯು ವೈಕುಂಠದಿಂದ ದರೆಗಿಳಿದು ಬಂದು ಭಕ್ತರ ಕಷ್ಟ ಹೀಡೇರಿಸುತ್ತಾನೆಂದು ಭಕ್ತರು ಭಕ್ತಿಯಿಂದ ಹೂ ಅರ್ಪಿಸುವುದು ವಾಡಿಕೆಯಾಗಿದೆ
ಕಂಬದ ರಂಗನನ್ನು ಕುರಿತು ಒಂದು ರಾತ್ರಿ ಪೂರಾ ಹಾಡಬಲ್ಲ ಜನಪದ ಕಾವ್ಯವೊಂದು ಕಾಡುಗೊಲ್ಲರ ಪರಂಪರೆಯಲ್ಲಿ ಬಳಕೆಯಲ್ಲಿದೆ. ಗಾಣೆಯನ್ನು ಊದಿಕೊಂಡು ಕಂಬದ ರಂಗನ ಪುರಾಣವನ್ನು ಭಯಭಕ್ತಿಯಿಂದ ಹಾಡಲಾಗುತ್ತದೆ. ರಂಗನಾಥನ ಒಕ್ಕಲುಗಳು ರಂಗನಾಥನ ಕಥೆಸೂಚಿಸುವ ಸಂಪ್ರದಾಯವೂ ಇದೆ. ಈ ಕಾವ್ಯದ ಪ್ರಕಾರ ಶ್ರೀ ಹರಿಯೇ ರಂಗನಾಥ. ಹಲವು ಅವತಾರ, ಸ್ಥಿತ್ಯಂರತಗಳಲ್ಲಿ ರಂಗನಾಥ ಪಶ್ಚಿಮದಿಂದ ಮಾಗೋಡುಗೆ ಬಂದನೆಂದೂ, ಹಲವು ಪವಾಡಗಳ ಮೂಲಕ ಮಾಗೋಡಿನ ದಿಣ್ಣೆಯಲ್ಲಿ ನೆಲೆಸಿ, ನಂತರ ಕಾಡುಗೊಲ್ಲರ ಹಟ್ಟಿಗೆ ಸ್ಥಳಾಂತರಗೊಂಡಿದ್ದಾನೆ ಎಂದು ಕಥೆ ತಿಳಿಸುತ್ತದೆ.
ಮಾಗೋಡು ಕಂಬದ ರಂಗನಾಥನ ಮೂಲ ನೆಲೆ ಹಿರಿಯೂರು ತಾಲ್ಲೂಕಿನ ಬಬ್ಬೂರು. ಶ್ರೀ ಹರಿ ನಿದ್ರಾವಸ್ಥೆಯಲ್ಲಿ ಬಬ್ಬೂರಿನ ಚಿಟ್ಟಾಲದ ಮರದ ಮೇಲೆ ಸುಖನಿದ್ರೆ ಮಾಡುವಾಗ ಸಿಡಿಲು ಬಡಿಯುತ್ತದೆ. ಆಗ ಶ್ರೀ ಹರಿ ಉಕ್ಕಿನಪಾಳಿನ ರೂಪವಾಗಿ ಭೂಮಿಯನ್ನ ಸೇರುತ್ತಾನೆ. ಬಹಳ ವರ್ಷ ಕಾಲ ಭೂತಳದಲ್ಲಿದ್ದ ಶ್ರೀ ಹರಿ ಭೂಮಿಯಿಂದ ಹೊರಗೆ ಬರಲು ಸಂಕಲ್ಪಿಸುತ್ತಾನೆ.
ಈ ಜಮೀನಿನ ಒಡೆಯ ಬಬ್ಬೂರ ಗೌಡನ ಸೋದರರು, ಏಳು ಜೊತೆ ನೇಗಿಲು ಹೂಡಿ ಹೊಲ ಉಳುವಾಗ, ಮೂರು ಸುತ್ತಿಗೆ ಆ ಉಳುವ ಹೋರಿಗಳು, ಹೊಲ ಉಳುತ್ತಿದ್ದ ಏಳು ಜನ ಗೌಡನ ತಮ್ಮಂದಿರು #ಮೂರ್ಛೆ_ಹೋಗುತ್ತಾರೆ. ಬೇಸಾಯ ಮಾಡುತ್ತಿದ್ದ ತಮ್ಮ ಗಂಡಂದಿರಿಗೆ ಊಟ ತಂದ ಹೆಂಗಸರು ಮೂರ್ಛೆ ಹೋಗಿರುವ ಗಂಡಸರು ಮತ್ತು ಹೋರಿಗಳ ಸ್ಥಿತಿಯನ್ನು ಕಂಡು ಗಾಬರಿಯಾಗುತ್ತಾರೆ. ಅರಿವಾಗದೆ ಓಡೋಡಿ ಊರು ಸೇರುತ್ತಾರೆ.
ಹಿರಿಯ ಗೌಡನಿಗೆ ಸಂಗತಿ ತಿಳಿದು, ಊರ ಪ್ರಮುಖರೊಂದಿಗೆ ಆತನೂ ಧಾವಿಸಿ ಬರುತ್ತಾನೆ. ಪರಿಸ್ಥಿತಿ ಕಂಡ ಗೌಡ ಎದೆ ಬಡಿದುಕೊಂಡು ರೋಧಿಸುತ್ತಾನೆ. ಗ್ರಾಮಸ್ಥರು ಪರಿಸ್ಥಿತಿ ಕಂಡು ಕಂಗಾಲಾಗುತ್ತಾರೆ. ಒಮ್ಮೆಗೆ ಏಳು ಜನರೂ, ಹದಿನಾಲ್ಕು ಹೋರಿಗಳು ಮರಣ ಹೊಂದಿರುವುದು ಆಶ್ಚರ್ಯಕರವಾಗಿ ಕಂಡುಬರುತ್ತದೆ. ಇದೊಂದು ದೈವ ಪ್ರೇರಣೆ ಅಥವಾ ಪ್ರೇತ ಚೇಷ್ಟೆ ಇರಬೇಕೆಂದು ಭಾವಿಸುತ್ತಾರೆ.
ಆ ಜಮೀನುನಲ್ಲಿದ್ದ ಆಲದ ಮರದ ಕಡೆ ಗೌಡ ಕೈಮುಗಿದು ಆಕಾಶದೇವ, ಭೂಮಿತಾಯಿ ಕಾರಣವಿಲ್ಲದೆ ಅಣ್ಣತಮ್ಮಂದಿರು, ನನ್ನ ಬಸವಣ್ಣನ ರೂಪದ ಹೋರಿಗಳು ಸಾಯಲು ಕಾರಣವೇನಪ್ಪ? ನನ್ನಿಂದ ಅಪರಾಧವಾಗಿದ್ದರೆ ತಪ್ಪುಕಾಣಿದರೆ ಒಪ್ಪಿಸುತ್ತೇನೆ. ನನ್ನ ತಮ್ಮಂದಿರಿಗೆ ಜೀವಧಾನ ಮಾಡು ದೇವ ಎಂದು ಪ್ರಾರ್ಥಿಸುತ್ತಾನೆ. ಆಗ ಅದೇ ಆಲದ ಮರದಿಂದ ಅಶರೀರವಾಣಿಯೊಂದು ನುಡಿಯುತ್ತದೆ. ನಿನ್ನ ಈ ಎರೆ ಹೊಲದಲ್ಲಿ ಶ್ರೀ ಹರಿ ಬರಸಿಡಿಲಿಗೆ ಸಿಕ್ಕಿ ಉಕ್ಕಿನ ಪಾಳಾಗಿ ಭೂಮಿ ಸೇರಿದ್ದಾನೆ. ಈಗ ನಿನ್ನ ಹೋರಿಗಳಾದ ದೊಡ್ಡಬೆಳ್ಳಿ, ಚಿಕ್ಕಬೆಳ್ಳಿಯರ ಮುಂದಿನ ನೇಗಿಲ ಕುಳಕ್ಕೆ ಉಕ್ಕಿನ ಪಾಳು ಸಿಕ್ಕಿದೆ. ಈಗ ಸ್ವಾಮಿ ಭೂಮಿಯಿಂದ ಹೊರಗೆ ಬಂದು ಲೋಕೋದ್ದೋರಾ ಮಾಡಬೇಕಿದೆ. ಆದ್ದರಿಂದ ಭೂಮಿಯ ಒಳಗೆ ಸೇರಿರುವ ಉಕ್ಕಿನ ಪಾಳನ್ನು ತೆಗೆಸಿ ಅದರಿಂದ ಗರುಡುಗಂಬ ಮಾಡಿಸಿ,ಮಡಿದ ನಿನ್ನ ಸೋದರರೆಲ್ಲರನ್ನೂ ಶ್ರೀ ಹರಿಯು ಬದುಕಿಸುತ್ತಾನೆ ಎಂದು ನುಡಿಯುತ್ತದೆ.
ಗೌಡನ ಉದಾಸೀನತೆ, ತೊಳಲಾಟದ ನಡುವೆ ಒಬ್ಬ ವಿಕಾರ ರೂಪದ #ಕೊರವಂಜಿಯು ಅಲ್ಲಿಗೆ ಬಂದು, ಅಶರೀರವಾಣಿಯ ಹೇಳಿಕೆಯನ್ನ ಮುಂದುವರೆಸುವಂತ್ತೆ ಹೇಳಿ ಈ ನೆಲದಲ್ಲಿರುವ ಶ್ರೀ ಹರಿಯು ಹೊರಗೆ ಬರುವ ಅವತಾರ ಇದು. ಈಗ ನಿನ್ನ ಮನೆಯ ಒಂದು ಹಿಡಿ ಹೊನ್ನು ತೆಗೆದುಕೊಂಡು ಹೋಗಿ ಹಿರಿಯೂರು ಪೇಟೆಯಿಂದ ಒಂದು ಹಿಡಿ ಮಣ್ಣು ತರಬೇಕು. ತಂದ ಮಣ್ಣನ್ನು ಮಡಿದವರಿಗೆ ಮುಟ್ಟಿಸಬೇಕು. ಆಗ ಎಲ್ಲರೂ ಮೇಲೇಳುತ್ತಾರೆ. ಎಂದಾಗ ಗೌಡ ಆ ಕೆಲಸಕ್ಕೆ ಮುಂದಾಗುತ್ತಾನೆ.
ಆದರೆ ಹೊನ್ನಿಗೆ ಬದಲಾಗಿ ಮಣ್ಣು ಕೊಡುವುದು ಚೋದ್ಯವಾಗಿ ಎಲ್ಲರೂ ಹಿಂಜರಿಯುತ್ತಾರೆ. ಆದರೂ ಪರಿಶ್ರಮದಿಂದ ಮಣ್ಣನ್ನ ತಂದ ಗೌಡ ತಮ್ಮಂದಿರಿಗೆ ಮುಟ್ಟಿಸಿದಾಗ ಅವರೆಲ್ಲರೂ ಎದ್ದು ಕುಳಿತುಕೊಳ್ಳುತ್ತಾರೆ.
ನಂತರ ಕೊರವಂಜಿಯ ಹೇಳಿಕೆಯಂತೆ ಭೂಮಿಯಲ್ಲಿದ್ದ ಉಕ್ಕಿನ ಪಾಳನ್ನು ಹೊರತೆಗೆದು ಗರುಡಗಂಬವನ್ನು ಮಾಡಿಕೊಡುವಂತೆ ಹಲವಾರು ಬಡಗಿಯರನ್ನು ಕೇಳಿಕೊಳ್ಳುತ್ತಾರೆ. ಒಬ್ಬರು ತಯಾರಿಸಿಕೊಡಲು ಮುಂದೆ ಬಾರದೆ ಇದ್ದಾಗ ಕೂನಿಕೆರೆ ಹನುಮಂತ ಎಂಬ ಬಡಗಿ ಗರುಡಗಂಬ ಮಾಡಿಕೊಡಲು ಒಪ್ಪುತ್ತಾನೆ. ಆದರೂ ಗೌಡರ ಮೇಲಿನ ಕೋಪದಿಂದ ಬಹಳಷ್ಟು ದಿನಗಳ ಕಾಲ ಗರುಡಗಂಬ ಮಾಡಲು ಸತಾಯಿಸಿ ಕೊನೆಗೆ ಕಂಬ ತಯಾರಿಸಿ ತನ್ನ ಮನೆಯ ಉಚ್ಛೆಗುಂಡಿಯ ಬದಿಗಿಡುತ್ತಾನೆ.
ಇದರಿಂದ ಕೆರಳಿದ ಶ್ರೀ ಹರಿ, ಬಡಗಿಯ ಮಡದಿ ಮಕ್ಕಳನ್ಮು ಸಾಯಿಸುವುದಲ್ಲದೆ ಅವನ ಕಣ್ಣು ಕಾಣದಂತೆ ಮಾಡುತ್ತಾನೆ. ಸತ್ತ ಮಡದಿ ಮಕ್ಕಳು ಕಪ್ಪೆಯಾಗಿ ಕೂಗಿ ಹರಿಯ ಕೃಪೆ ಎಂದು ಸಾರುತ್ತವೆ. ಈ ವೇಳೆಗೆ ಬಬ್ಬೂರ ಗೌಡನು ಬಂದು ಗರುಡಗಂಬ ಇಟ್ಟ ಸ್ಥಳವನ್ನು ಕಂಡು ಮರುಗುತ್ತಾನೆ. ಜೊತೆಗೆ ಗರುಡಗಂಬವನ್ನು ಶಾಸ್ತ್ರೋಕ್ತವಾಗಿ ಬಬ್ಬೂರ ಮುಂಭಾಗದ ಚಿಟ್ಟಾಲದಮರದ ಬುಡದಲ್ಲಿ ಪ್ರತಿಷ್ಠಾಪಿಸುತ್ತಾನೆ ಮಾತ್ರವಲ್ಲ ದುರಂಹಕಾರಿ ಬಡಗಿ ಹನುಮಂತನನ್ನು ಆಹುತಿ ಕೊಡುತ್ತಾನೆ. ಇದು ರಂಗನಾಥ ರೂಪುಗೊಂಡ ಮೊದಲಹಂತ.
ಸಾಮಾನ್ಯವಾಗಿ ನಮ್ಮ ಜನಪದ ದೈವಗಳೂ ಕೂಡ ವಿಶಿಷ್ಠ ಪರಂಪರೆಯಂತೆ ತನ್ನ ವಕ್ಕಲರನ್ನು ವೃದ್ದಿಸುವುದು. ಈ ಮೂಲಕ ತಮ್ಮ ಮಹಿಮೆ, ಮಹತ್ವ ಸಾರುವುದು ಕಂಡುಬರುತ್ತದೆ. ಅದರಂತೆಯೇ ಬಬ್ಬೂರಿನಲ್ಲಿ ಕಂಬದ ರೂಪ ಪಡೆದ ರಂಗನಾಥ, ಅಲ್ಲಿಂದ ಹೊರಡುವಾಗ ದಾಸರಚನ್ನಪ್ಪ ಎಂಬ ಕಾಡುಗೊಲ್ಲರ ಹುಡುಗನಲ್ಲಿ ಪ್ರವೇಶ ಪಡೆಯುವುದುಕೊಂಡು ತನ್ನ ಬೇಕು ಬೇಕಾದವುಗಳನ್ನೆಲ್ಲಾ ಪೂರೈಸಿಕೊಳ್ಳುತ್ತಾನೆ.
ಈ ದಾಸರಚನ್ನಪ್ಪ ಎಂಬ ಕಾಡಗೊಲ್ಲರ ಹುಡುಗನನ್ನು ರಂಗನಾಥನ ದೈವತ್ವದಲ್ಲಿ ಪಕ್ವವಾಗುತ್ತ, ಜಾಣನಾಗುತ್ತ ರಂಗನಾಥನ ಹಲವು ರೂಪ, ಪವಾಡಗಳನ್ನು ಈತನ ಮೂಲಕ ಪ್ರಕಟಿಸುವುದು ಈ ಕಾವ್ಯದ ವಿಶೇಷ. ದಾಸರಚನ್ನಪ್ಪ ಘೂರಪಾತಮ್ಮ ಎಂಬ ಮಹಿಳೆಯನ್ನು ವಿವಾಹವಾಗುವುದು ಆಕೆಗೂ ಅನಾರೋಗ್ಯ ಹೋಗಿ ಪಕ್ವವಾಗುವುದು ರಂಗನಾಥನ ಕೃಪೆಯಿಂದಲೇ.
ಒಟ್ಟು ರಂಗನಾಥನ ಪವಾಡ ದಾಸರಚನ್ನಪ್ಪ – ಘೂರಪಾತಮ್ಮ ಇವರ ಮೂಲಕವಾಗುತ್ತದೆ ಮಾತ್ರವಲ್ಲ ಈ ಮೂಲಕ ಚಟುವಟಿಕೆಗಳಿಗೂ ಕಾಡುಗೊಲ್ಲರ ಸಂಪ್ರದಾಯ , ನಂಬಿಕೆ ಮತ್ತು ಆಚರಣೆಗೆ ಪೂರಕವಾಗಿ ನಡೆಯುವುದು ಮತ್ತೊಂದು ವಿಶೇಷ. ಹಾಗಾಗಿಯೇ ಆರಂಭಿಕ ಹಂತದಲ್ಲಿ ಈ ದೈವದ ಭಕ್ತರು ಕಾಡುಗೊಲ್ಲರು ಅಧಿಕ. ನಂತರ ವಿಶೇಷ ಪವಾಡ, ಕಷ್ಟಪರಿಹಾರಗಳ ಮೂಲಕ ಅನೇಕ ಮನೆತನಗಳು ವಿಸ್ತಾರವಾದ ಪ್ರಸಂಗವೂ ನಡೆಯುತ್ತದೆ.
ಪಶುಪಾಲಕರಾಗಿ ಪಶುಪತಿ ಶಿವನ ಆರಾಧಕರಾಗಿ ಸರ್ಪ, ಕಲ್ಲು (ಶಿವರೂಪ), ಮರ( ಕೊಳಲು) ಮುಂತಾದ ಆರಾಧನೆ – ಆಚರಣೆಯ ಮೂಲಕ ವಿಭೂತಿ ಧಾರಣೆ (ಸುಟ್ಟು ಭಸ್ಮ) ಕಾಡುಗೊಲ್ಲರು, ಜುಂಜಪ್ಪ, ಈರಣ್ಣ, ನಾಗಪ್ಪ, ಚಿತ್ತಪ್ಪ, ಉತ್ತಪ್ಪ, ವೀರನಾಗ ,ಕರಿಯಣ್ಣ, ಚಿಕ್ಕಣ್ಣ, ದೊಡ್ಡಪ್ಪ ಈ ಮುಂತಾದ ದ್ರಾವಿಡ ಸಂಸ್ಕೃತಿಯ, ಕಾಡುಗೊಲ್ಲರು ಶೈವ ಸಂಸ್ಕೃತಿಯ ಆರಾಧಕರು. ರಂಗನಾಥನ ಅವತಾರಗಳೊಂದಿಗೆ ತಳಕು ಹಾಕಿಕೊಂಡಂತೆ ಶೈವತನದೊಂದಿಗೆ ವೈಷ್ಣವ ರೂಪಕ್ಕೆ ನಾಮಧಾರಿಯಾಗಿ ಪರಿವರ್ತನೆ ಹೊಂದಿದ ಖಚಿತ, ಐತಿಹಾಸಿಕ ದಾಖಲೆ, ವಿವರಗಳು ಲಭ್ಯವಾಗುವುದು. ಮಾಗೋಡು ರಂಗನಾಥನ ಕಾವ್ಯದಿಂದಲೇ!
ಹಾಗಾಗಿ ಮಾಗೋಡು ರಂಗನ ಸಂಪ್ರದಾಯ ಹಲವು ಚಾರಿತ್ರಿಕ ಅಧ್ಯಯನದ ಮಾದರಿಯೂ ಆಗಿದೆ, ರಂಗನಾಥನಿಗೆ ಹರಕೆ ಹೂವಿನ ರೂಪದಲ್ಲಿ ಭಾವರೂಪ ಪಡೆದಿರುವುದು ಮತ್ತೊಂದು ವಿಶೇಷ. ರಂಗನಾಥನಿಗೆ ಪ್ರಿಯವಾದದ್ದು ಭಕ್ತರ ಅರ್ಪಣೆ, ಕನಕ, ಧನಧಾನ್ಯಗಳಿಗಿಂತ ಹೂವೇ ಹೆಚ್ಚು.! ಹಾಗಾಗಿ ಸಾಂಕೇತಿಕ ಆಚರಣೆಗಳು ಜನಪದರು ರೂಡಿಸಿಕೊಂಡ ಬಗೆಯನ್ನು ಈ ಕಥನ ಸ್ಪಷ್ಟವಾಗಿ ಪ್ರಕಟಿಸುತ್ತದೆ.
ರಂಗನಾಥನ ಕಥಾ ವಿವರಣೆಯ ಒಳಗೆ ಪೌರಾಣಿಕ ಆಶಯಗಳಂತೆಯೇ ಸಿರಾ, ಹಿರಿಯೂರು, ಮೇಲುಕುಂಟೆ, ಕಂಪನಿ ಸರ್ಕಾರ, ಜಮೀನು ಹಂಚಿಕೆ, ಮಾನ್ಯತೆ, ನೀರಾವರಿ ಈ ಎಲ್ಲಾ ವಿವರಗಳೂ ಬಂದು ಭೂಕೊಳ್ಳೆ, ಘಾತುಕತನ, ಪಶುಪಾಲನೆ, ಆ ಸಂಬಂದಿ ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆ ಮಾಡುತ್ತಾ ಹಿರಿಯೂರು ಭಾಗದಿಂದ ಸಿರಾದ ಮಾಗೋಡಿಗೆ ಬರಲು ಕಾರಣ. ಪ್ರೇರಣೆ ಈ ಎಲ್ಲಾ ಅಂಶಗಳನ್ನು ರಂಗನಾಥನ ಕಥೆ ವಿವರಿಸುತ್ತದೆ.
ಮಾಗೋಡು ರಂಗನಾಥ ಇಂದು ತನ್ನ ಜನಪ್ರಿಯತೆ, ಭಕ್ತರಪಾಲನೆ, ಸುಖ ಸಂಮೃದ್ದಿ ಸಂತಾನಪೀಡೆ ಪಿಶಾಚಿಗಳಿಂದ ಪಾರು ಮಾಡುವ ದೈವತ್ವದ ಸ್ವರೂಪ ಪಡೆದಿದೆ. ಆರಂಭಕ್ಕೆ ಕಾಡುಗೊಲ್ಲರ ಹುಲ್ಲುಗುಡಿಸಲಿನ ಕುಟೀರದಲ್ಲಿದ್ದ ಈ ದೇವಾಲಯ ಸಾಕಷ್ಟು ಅಭಿವೃದ್ಧಿ ಪಡೆಯುತಿದೆ ಭವ್ಯವಾದ ಸುಂದರ ದೇವಾಲಯದ ದ್ವಾರ ನಿರ್ಮಾಣವಾಗಿದೆ. ಯಾತ್ರಿನಿವಾಸ ಅನ್ನಛತ್ರಗಳು ನಿರ್ಮಾಣವಾಗಿವೆ. ಪ್ರತಿವರ್ಷ ಮಾಘ ಮಾಸ ತಿಂಗಳಲ್ಲಿ ಒಂದು ವಾರದ ಕಾಲ ಬೃಹತ್ ಜಾತ್ರೆ ನಡೆಯುತ್ತದೆ. ಜಲಧಿ, ಆ ನಂತರ ನಡೆಯುವ ಬೃಹತ್ ಹೂವಿನ ತೇರು ನಾಡಪ್ರಸಿದ್ದಿ. ಆರೇಳು ಲಕ್ಷ ಭಕ್ತರು ಹೂವಿನ ತೇರಿಗೆ ಸೇರುತ್ತಾರೆ. ಆಂದ್ರಪ್ರದೇಶ, ತಮಿಳುನಾಡಿನ ಮುಂತಾದ ಭಕ್ತರು ಅಧಿಕ ಸಂಖ್ಯೆಯಲ್ಲಿ ಇರುತ್ತಾರೆ.
ಕಾಡುಗೊಲ್ಲರ ಈ ಪುಟ್ಟ ಹಟ್ಟಿ ಮಾಗೋಡು ಜಾತ್ರಾ ದಿನಗಳಲ್ಲಿ ಜನಾಕರ್ಷಣೀಯ, ಜನಜಂಗುಳಿಯ,ಕೇಂದ್ರವಾಗಿಯೂ ಮೈದುಂಬಿಕೊಳ್ಳುತ್ತದೆ. ಸಿರಾ – ಮಧುಗಿರಿ ರಸ್ತೆಯಲ್ಲಿ ಸಿರಾದಿಂದ 8ಕಿಮೀ ಕ್ರಮಿಸಿ ಎಡಕ್ಕೆ ತಿರುಗಿದರೆ ಮಾಗೋಡು ಕಮಾನು ದೇವಾಲಯದತ್ತ ಆಹ್ವಾನಿಸುತ್ತದೆ. ಅಲ್ಲಿಂದ 2 km ಸಾಗಿದರೆ ದೇವಾಲಯ ಸಿಗುತ್ತದೆ. ಬಸ್ ಸೌಲಭ್ಯ ಆಟೋ ಸೌಲಭ್ಯವಿದೆ. ಪ್ರತಿ ದಿನ ಮತ್ತು ಪ್ರತಿ ಶನಿವಾರ ಅಮವಾಸ್ಯೆ ಮತ್ತು ಹುಣ್ಣುಮೆ ದಿನಗಳೊಂದು ಬೆಳಿಗ್ಗೆಯಿಂದ ಅರ್ಧರಾತ್ರಿಯತನಕ ಬಿಡುವಿಲ್ಲದೆ ಪೂಜಾಕಾರ್ಯವು ನಡೆಯುತ್ತದೆ.