ತುರುವೇಕೆರೆ: ನ್ಯಾಯಾಕಾಂಕ್ಷಿಯ ಮನಸ್ಸಾಕ್ಷಿಯ ಉಳಿವು ಮತ್ತು ಕಾನೂನಿನ ಅರಿವು ಎರಡೂ ಸಾಧ್ಯವಾದಾಗಲಷ್ಟೇ ಅವನಿಗೆ ನ್ಯಾಯ ಸಿಗುತ್ತದೆ. ಇದಕ್ಕೆ ಮಾಧ್ಯಮವಾಗಿ ನ್ಯಾಯಾಲಯದಲ್ಲಿ ಮಾತೃಭಾಷೆಯಾದ ಕನ್ನಡದ ಬಳಕೆ ಮಾತ್ರವೇ ಅನಿವಾರ್ಯ ಮಾರ್ಗ ಎಂದು ಹಿರಿಯಶ್ರೇಣಿ ನ್ಯಾಯಾಧೀಶ ಪಿ.ಎಂ.ಬಾಲಸುಬ್ರಹ್ಮಣಿ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕ, ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಸಂಯುಕ್ತವಾಗಿ ಏರ್ಪಡಿಸಿದ್ದ ‘ನ್ಯಾಯಾಂಗದಲ್ಲಿ ಕನ್ನಡ ಬಳಕೆ ಮತ್ತು ಕಾನೂನು ಅರಿವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ ವಿವಿಧ ಭಾಷೆಗಳ ನಡುವೆ ಸಂವಹನದ ಕೊರತೆ ಉಂಟಾದಾಗ ಮಾತ್ರ ಉನ್ನತ ಶ್ರೇಣಿಯ ನ್ಯಾಯಾಲಯಗಳಲ್ಲಿ ಆಂಗ್ಲಭಾಷೆಯನ್ನು ಬಳಸಲಾಗುತ್ತಿದೆ. ಆದರೆ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಬಹುತೇಕ ಕನ್ನಡವನ್ನೇ ಬಳಸಲಾಗುತ್ತಿದೆ. ನಾನು ನನ್ನ ಪೂರಾ ವ್ಯಾಸಂಗವನ್ನು ಕನ್ನಡ ಶಾಲೆಯಲ್ಲೇ ಮಾಡಿದ್ದು, ನ್ಯಾಯಾಲಯ ಕಲಾಪಗಳನ್ನು ಕನ್ನಡದಲ್ಲೇ ನಡೆಸಿ ತೀರ್ಪನ್ನು ಸಹ ಕನ್ನಡದಲ್ಲೇ ನೀಡುತ್ತಿದ್ದೇನೆ. ಆರ್ಥಿಕವಾಗಿ ಹಿಂದುಳಿದವರು ಮತ್ತು ಮಹಿಳೆಯರು ಉಚಿತ ಕಾನೂನಿನ ನೆರವು ಪಡೆಯಬಹುದು ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ವಕೀಲ ಎಸ್.ಕೆ. ಉಮೇಶ್ ‘ ಬೇರೆ ಇಲಾಖೆಗಳಂತೆ ನ್ಯಾಯಾಲಯಗಳಲ್ಲೂ ಕನ್ನಡ ಬಳಕೆ ಕಡ್ಡಾಯವಾಗಬೇಕು. ನ್ಯಾಯಾಲಯಗಳಿಗೆ ಕನ್ನಡವನ್ನು ವ್ಯವಹಾರಿಕ ಭಾಷೆಯಾಗಿ ಬಳಸುವ ಇಚ್ಛಾಶಕ್ತಿ ಇದೆ. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳು ಹಾಗೂ ಶೀಘ್ರಲಿಪಿಕಾರರ ಕೊರತೆಯಿಂದ ಇದು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಇದರಿಂದ ಕಕ್ಷಿದಾರರು ಮತ್ತು ನ್ಯಾಯಾಲಯಗಳ ಮಧ್ಯೆ ಸಂಪರ್ಕ ಸಂಹವನದ ಕೊರತೆಯಾಗಿ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ಎಂದರು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಆನಂದವಾಡೇಕರ್ ಅವರಿಗೆ ಹೃದಯಸ್ಪರ್ಶಿ ಸನ್ಮಾನ ನೀಡಿ ಬೀಳ್ಕೊಡಲಾಯಿತು. ಆನಂದವಾಡೇಕರ್ ತಮ್ಮ ವೃತ್ತಿಜೀವನದ ಸಾರ್ಥಕ ಕ್ಷಣಗಳನ್ನು ಭಾವನಾತ್ಮಕವಾಗಿ ಹಂಚಿಕೊಂಡರು. ನ್ಯಾಯಾಲಯ ಕಲಾಪಗಳಲ್ಲಿ ವೃತ್ತಿಯುದ್ದಕ್ಕೂ ಕನ್ನಡವನ್ನೇ ಬಳಸುತ್ತಾ ಬಂದಿರುವ ವಕೀಲ ಎಸ್.ಕೆ.ಉಮೇಶ್ ಅವರನ್ನು ಸನ್ಮಾನಿಸಲಾಯಿತು.
ಕಸಾಪ ನಗರ ಘಟಕದ ಅಧ್ಯಕ್ಷ ವಿ.ಎನ್.ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಪಿ.ರಾಜು, ಗಂಗರಂಗಯ್ಯ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಕೆ.ಎಸ್.ನಾಗರಾಜಪ್ಪ ಸ್ವಾಗತಿಸಿದರು. ತುಕಾರಾಮ್ ವಂದಿಸಿದರು. ಕನ್ನಡ ಉಪನ್ಯಾಸಕ ಪ್ರಕಾಶ್ ನಿರೂಪಿಸಿದರು.