ಶಿಕ್ಷಕರ ದಿನಾಚರಣೆ ಅಂಗವಾಗಿ ಕವಯತ್ರಿ ಡಾ. ರಜನಿ ಅವರು ಗುರುಗಳ ಕಷ್ಟಸುಖವನ್ನು ಈ ಕವನದಲ್ಲಿ ತೆರೆದಿಟ್ಟಿದ್ದಾರೆ.
ಗುರುಗಳು ಆಗುವುದು ಸುಲಭವಲ್ಲ
ತಾವೂ ದಿನಾ ಓದಬೇಕು
ಏನೇ ದುಃಖ ದುಮ್ಮಾನ ಇದ್ದರೂ
ಮುಖದಲ್ಲಿ ನಗು ತುಂಬಿರಬೇಕು
ಅರಿಯಲಾಗದವರಿಗೂ
ಅರಿವು ಮೂಡಿಸಬೇಕು
ಅಡ್ಡದಾರಿ ಹಿಡಿದವರಿಗೆ
ಸರಿ ದಾರಿ ತೋರಿಸಬೇಕು
ಅದೇ ಅದೇ ಪಾಠವಿದ್ದರೂ
ಹೊಸತನವಿರಬೇಕು
ತುಂಟರನ್ನೂ
ಮಕ್ಕಳಂತೆ ಸಾವರಿಸಬೇಕು
ನಾಳೆಯ ಪಾಠವ ಇಂದೇ
ತಲೆಗೆ ಮೆತ್ತಿಕೊಳ್ಳಬೇಕು
ಮಕ್ಕಳ ಜೊತೆಗೆ ಅವರ
ಹೆತ್ತವರಿಗೂ ಕಿವಿಯಾಗಬೇಕು
ಬಿತ್ತಿದ ಅಕ್ಷರ ಮೊಳೆತು ಮರವಾಗಿ
ಹೃದಯ ತುಂಬಿ ಬರಬೇಕು
ನಮ್ಮ ಗುರುಗಳು ಎನ್ನಲು
ಸೈರಣೆ ಗುರುವಾಗಬೇಕು
ಸೈರಣೆ
ಸುಲಭದ್ದಲ್ಲ.