ದೇವರಹಳ್ಳಿ ಧನಂಜಯ
ಒಲೆಯ ಓಕ್ಕುಳಿಂದ
ಮೇಲೇಳುತ್ತಿರುವ ಹೊಗೆ
ವಠಾರಕ್ಕೆಲ್ಲಾ ಪಸರಿಸಿದೆ
ಅವ್ವ’ನ ಒಡಲ ಧಗೆ.
ಒಲೆ ಬಾಯಿಗೆ
ಮೈಯೊಡ್ಡಿರುವ
ಪುಳ್ಳೆ ಕನಸುಗಳು
ಉರಿವ ನಾಲಗೆ ಚಾಚುತ್ತಿವೆ
ಮಗನ ಮುಂಜಾನೆಯ ಸ್ವಪ್ನ
ಹೊಗೆ ಮೆತ್ತಿ ಮುಕ್ಕಿರಿದಿದೆ
ಸ್ವಪ್ನ ಭಂಗಕೆ ಕೇಡಾಗಿ
ಎದ್ದು ಅಳುತಿದೆ ಕೂಸು
ಉರಿದು ಬುದಿಯಾಗುವ ಮುನ್ನ
ಕನಸುಗಳ ಕಟ್ಟಿ ಹಾಕುವ ಹಠ ಅವ್ವನಿಗೆ
ಅರಳುತ್ತವೆ ಅಂಗಳದಿ ರಂಗವಲ್ಲಿ
ನಿತ್ರಾಣದ ನಾಳೆಗಳಿಗೆ ಕಸುವು ತುಂಬುತ
ಎದ್ದಾಸಿಗೆ ಮೇಲೆ ಅತ್ತು ಸುಸ್ತಾಗಿ
ಅವ್ವನರಸಿ ಅಂಗಳಕೆ ಬಂದ
ಪಿಸಿರುಗಣ್ಣಿನ ಅರಸ
ಮೂಡುವ ರಂಗೋಲಿ ಕಂಡು ಬೆರಗಾದ.
ಬೆರಳ ಓಣಿಗುಂಟ ಓಡಿವೆ
ಅಪೂರ್ಣ ಕನಸ ರೇಖೆಗಳು
ಕನಸ ಚುಂಗು ಹಿಡಿದು
ಜೀಕಿವೆ ಮಗನ ಸ್ವಪ್ನಗಳು
ಕೆನ್ನಾಲಿಗೆ ರವದಿ ಕುದಿವ ಕಾಫಿಗೆ
ಎಚ್ಚರಗೊಂಡ ಗಂಡ
ತೊಳೆಯದ ಬಾಯಿ ಚಪ್ಪರಿಸಿದ
ಈಗ ಬೆಳಗಾಯಿತು.