ಟಿ. ಸತೀಶ್ ಜವರೇಗೌಡ, ಮಂಡ್ಯ
ಮಳೆಗಾಲ ಶುರುವಾಯಿತು
ಹೃದಯ ತವಕಿಸಿದೆ
ಕಾಗದದ ದೋಣಿ ತೇಲಿ ಬಿಡಲು
ಬರಡು ಮಣ್ಣು ಮೈನೆರೆಯಿತು
ರಾತ್ರಿ ಸುರಿದ ಮಳೆಗೆ
ಹದವಾಗಿದೆ ಹಸಿರಿಗೆ ಉಸಿರಾಗಲು
ಇರುಳೆಲ್ಲ ಸುರಿದ ರಚ್ಚೆಮಳೆ
ಮಿಂದೆದ್ದ ಮರದೆಲೆಗಳು
ತೊಟ್ಟಿಕ್ಕಿಸುತ್ತಿವೆ ತಂಪಾಮೃತ
ಅವಳ ಬೆಂಕಿಯುರಿಯ ನೋಟಕ್ಕೆ
ಹಟ್ಟಿಯ ಸೂರಿನ
ಮಳೆ ನೀರ ಹನಿಗಳು ಬೆವರಿವೆ
ಜಮಾಯಿಸಿದವು ನೀಲಾಗಸದಲ್ಲಿ
ಸಾಗರ ಧರಿಸಿದ ಮೋಡಗಳು
ತಿಪ್ಪೆಯ ಶಿಖರದಲ್ಲಿ ರೋಮಾಂಚನ
ಸಂಜೆ ಸುರಿದ ಮಾಮೇರಿ ಮಳೆಗೆ
ತಿಪ್ಪೆಗುಂಡಿಯಲುಕ್ಕಿದ ನೀರು
ಕಪ್ಪೆಗಳ ಭಾರೀ ಜಾತ್ರೆ ಮೌನಭಂಗುರ
ಇರುಳ ಕೊಳಲಿನಲೊಮ್ಮಿದೆ
ಮಳೆಯ ಹಾಡು
ನೆಲದೆದೆಯಲಿ ಹಸಿರಂಕುರ
ಹೊರಗೆ ಜಡಿಮಳೆಯ ಅಬ್ಬರ
ತೋಯ್ದ ಹೃದಯದೊಳಗೆ
ನೆನಪಿನ ಪರಿಮಳದ ಘಮಲು
ಮಳೆಕೋಗಿಲೆ ಹಾಡಿಗೆ ಪುಳಕಗೊಂಡ
ಹಗೇವುನೊಳಗಿನ ಬೀಜಗಳಿಗೆ
ಜಗದ ಹಸಿವಿಗೆ ಅನ್ನವಾಗುವ ತವಕ