ದೇವರಹಳ್ಳಿ ಧನಂಜಯ
ಬೇಲಿ ತುಂಬ ಬೆಳಕ ಹೂ
ಬಳ್ಳಿ ತಬ್ಬಿ ಬೆಳೆದಿವೆ
ಆಕಾಶದ ಹಾಲ ಬೆಳಕ
ನೆಲದ ತುಂಬ ಹರಡಿವೆ
ಹಸಿರ ತೊಟ್ಟ ಭೂರಮೆಗೆ
ಮಲ್ಲೆ ದಂಡೆ ಮುಡಿಸಿವೆ
ಧರಣಿ ತುಂಬಾ ಬೆಳಕ ಹಬ್ಬ
ಸಾಲುದೀಪ ಬೆಳಗಿವೆ.
ಆಕಾಶದ ವೈಭವವ
ನೆಲಕೆ ತಂದು ಚೆಲ್ಲಿವೆ
ಮಣ್ಣ ಕಣಕಣದಲ್ಲೂ
ಚೈತನ್ಯವ ತುಂಬಿವೆ
ಕೈಗೆಟುಕದ ಚಂದ್ರಸಂಗ
ನಮಗೆ ಬೇಡ ಎಂದಿವೆ
ನಡೆದವರ ಕಣ್ಣ ಲಾಂದ್ರ
ನಮ್ಮ ಚಂದ್ರ ಎಂದಿವೆ
ಒಳ ತಿಮಿರಿಗೆ ಕಿಚ್ಚು ಹಚ್ಚಿ
ದೇಹ ಪಂಜು ಮಾಡಿವೆ
ಬೇಗುದಿಯ ಬೆಳಕಮಾಡ್ವ
ಹೊಸ ಪಾಠವ ಕಲಿಸಿವೆ.
ಕತ್ತಲೆಯ ಕಣ್ಣುಕುಕ್ಕಿ
ಮಿಂಚುಹುಳು ಮಿನುಗಿವೆ
ಹೊಳೆಯುತಿರುವ ತಾರೆಗಳಿಗೆ
ಸವಾಲು ನಾವು ಎಂದಿವೆ.