ತುಮಕೂರು : ಜಗತ್ತಿನ ಸಮಗ್ರ ಲಲಿತ ಕಲೆಗಳ ತವರುಮನೆಯೇ ಸಾಹಿತ್ಯ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವಾಗ ಪದವಿಯ ಮೂರು ಮತ್ತು ನಾಲ್ಕನೇ ಸೆಮಿಸ್ಟರ್ ನಲ್ಲಿ ಈ ಬಾರಿ ಲಲಿತಕಲೆಯನ್ನು ಮುಕ್ತ ಆಯ್ಕೆಯ ಪತ್ರಿಕೆಯಾಗಿ ನಿಗದಿಗೊಳಿಸಲಾಗಿದೆ.
ಹಾಗಾಗಿ ಕನ್ನಡ/ಇಂಗ್ಲಿಷ್ ಇತ್ಯಾದಿ ಸಾಹಿತ್ಯಕ ಪಠ್ಯಗಳಿಗೆ ಅವಕಾಶ ಇಲ್ಲ ಎಂಬ ಧೋರಣೆ ಅಧಿಕಾರಿ ವಲಯದಲ್ಲಿ ಇದ್ದಂತಿದೆ. ಇದರ ಬಗ್ಗೆ ಎಲ್ಲಾ ಭಾಷಾ ಅಧ್ಯಾಪಕರು ಎಚ್ಚರಗೊಳ್ಳಬೇಕು.
ಇಲ್ಲವಾದರೆ ಕಾರ್ಯಭಾರಕ್ಕೆ ಕುತ್ತು ಬಂದು ಎಷ್ಟೋ ಅಧ್ಯಾಪಕರ ಕೆಲಸ ನಷ್ಟ ಆಗುವ ಸಾಧ್ಯತೆ ಇದೆ. ಫೈನ್ ಆರ್ಟ್ಸ್ ವಿಷಯದಲ್ಲಿ ಸಾಹಿತ್ಯ ಪಠ್ಯ ಇರಲೇಬೇಕೆಂಬುದು ಎಲ್ಲಾ ಅಧ್ಯಾಪಕರ ಗಟ್ಟಿ ಧ್ವನಿಯಾಗಬೇಕಿದೆ ಎಂದು ತುಮಕೂರು ವಿವಿ ಪದವಿ ಮಟ್ಟದ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ ಶೆಟ್ಟಿ ಹೇಳಿದರು.
ತುಮಕೂರು ವಿವಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಗಂಣದಲ್ಲಿ ವಿವಿ ಪ್ರಸಾರಾಂಗ ಹಾಗೂ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ವತಿಯಿಂದ ಆಯೋಜಿಸಿದ್ದ ರಾಷ್ಟೀಯ ಶಿಕ್ಷಣ ನೀತಿ-೨೦೨೦ರ ಪ್ರಕಾರ ಪದವಿ ತರಗತಿಗಳಿಗೆ ಸಿದ್ಧಪಡಿಸಲಾದ ಹದಿನೆಂಟು ಕನ್ನಡ ಪಠ್ಯಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಎಂತಹ ಕೋಲಾಹಲ ಎದ್ದಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಶೈಕ್ಷಣಿಕ ವಿಷಯದಲ್ಲಿ ಪಕ್ಷ ರಾಜಕೀಯವೂ ಕೂಡ ಬೆಸೆದುಕೊಂಡ ಸನ್ನಿವೇಶದಲ್ಲಿ ನಾವಿದ್ದೇವೆ.
ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇವರೆಡೂ ನಮ್ಮಲ್ಲಿ ಗಂಭೀರ ವಿಷಯವಾಗದೆ, ಆದ್ಯತೆಯ ವಿಷಯವಾಗದೆ ಇರುವುದರಿಂದ ಇಂತಹ ಅಪಸವ್ಯಗಳು ನಮ್ಮಲ್ಲಿ ಸಂಭವಿಸುತ್ತವೆ. ಈ ಅರಿವಿನ ಹಿನ್ನೆಲೆಯಲ್ಲಿ ಇಲ್ಲಿಯ ಸಾಹಿತ್ಯ ಪಠ್ಯಗಳನ್ನು ಸಾಂಸ್ಕೃತಿಕ ಪಠ್ಯಗಳನ್ನಾಗಿ ನಾವು ರೂಪಿಸಿದ್ದೇವೆ. ಹಾಗಾಗಿ ಇದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸರಿಯಾದ ಕ್ರಮದಲ್ಲಿ ಅರ್ಥ ಮಾಡಿಕೊಂಡ ಪಠ್ಯಗಳಾಗಿವೆ ಎಂದರು.
ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ನಿರ್ಮಲ್ ರಾಜು ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ವಿಚಾರಗಳನ್ನು ಕಲಿತು ಅರಿತುಕೊಳ್ಳಬೇಕು. ಕನ್ನಡ ಭಾಷೆಯಲ್ಲಿ ಓದಿದ ವಿದ್ಯಾರ್ಥಿಗಳು ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಕನ್ನಡದಲ್ಲಿ ಅಭ್ಯಾಸ ಮಾಡುವವರ ಸಂಖ್ಯೆಯು ಕಮ್ಮಿಯಾಗುತ್ತಿದೆ. ವಿದ್ಯಾರ್ಥಿಗಳು ಆಧುನಿಕ ದೃಷ್ಟಿಕೋನಗಳಲ್ಲಿ ಆಲೋಚಿಸಿ, ಅಧ್ಯಯನ ಮಾಡುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ರಾಷ್ಟೀಯ ಶಿಕ್ಷಣ ನೀತಿಗೆ ಸಂಬಂಧಿದಂತೆ ಪಠ್ಯಪುಸ್ತಕಗಳ ತಯಾರಿ ತುಂಬಾ ಅಚ್ಚುಕಟ್ಟಾಗಿ ನಡೆದಿದೆ. ಪರಿಕಲ್ಪನೆಗಳ ಅಡಿಯಲ್ಲಿ ಪಠ್ಯಪುಸ್ತಕಗಳ ಜೋಡಣೆ ಅತಿಮುಖ್ಯ. ಭಾಷಾ ಸಾಹಿತ್ಯದ ಬೆಳವಣಿಗೆಯಲ್ಲಿ ಅಧ್ಯಾಪಕರು ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ.ಬೆಳೆಕೆರೆ ಲಿಂಗರಾಜಯ್ಯ, ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ, ಪಠ್ಯಪುಸ್ತಕಗಳ ಸಂಪಾದಕರಾದ ಡಾ.ಡಿ ಶಿವನಂಜಯ್ಯ, ಡಾ.ಓ.ನಾಗರಾಜು, ಡಾ.ಗಂಗಾಧರಯ್ಯ ಪಿ, ಡಾ. ಬಾಳಪ್ಪ, ಡಾ.ಶಿವಲಿಂಗಮೂರ್ತಿ, ಅಜಿತ್ ಕುಮಾರ್, ಡಾ.ಗೋವಿಂದರಾಯ, ಡಾ.ರೇಣುಕಾಪ್ರಸಾದ್, ಡಾ.ಶಿವಣ್ಣ ಮತ್ತು ಡಾ.ಗೀತಾವಸಂತ ಹಾಜರಿದ್ದರು.