ತುಮಕೂರು: ನಾವೆಲ್ಲಾ ವಿಶ್ವಮಾನವರಾಗೋಣ
ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿರುವ ಕೇಳು ಮಗುವೆ ಕಥೆಯಾ ಸರಣಿಯ ಕಾರ‍್ಯಕ್ರಮ-೬ ತುಮಕೂರು ದೋಭಿಘಾಟ್ ನಲ್ಲಿರುವ ಶಾರದಾ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆಯಿತು.
ಸಂಘದ ಉಪಾಧ್ಯಕ್ಷೆ ಪ್ರೇಮಾ ಮಲ್ಲಣ್ಣ, ಕುವೆಂಪುರವರ ಕರಿಸಿದ್ದ ಕಥನಕಾವ್ಯವನ್ನು ಮಕ್ಕಳಿಗೆ ಕಥೆಯಾಗಿಸಿ ಹೇಳಿದರು. ಪ್ರಕೃತಿಯ ಜೊತೆಯಲ್ಲಿ ಬದುಕಿದಾಗ ಬದುಕು ಸಹಜವಾಗಿ ಇರುತ್ತದೆ ಎಂದು ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜುರ ಮಾತನಾಡಿ, ಕುವೆಂಪು ಬದುಕು ಬರಹದ ಬಗ್ಗೆ ಮಕ್ಕಳಿಗೆ ಹೇಳಿದರು. ಕುವೆಂಪು ೧೧೫ನೇ ಜನ್ಮದಿನಾಚರಣೆ ಹಾಗೂ ಅವರ ಕೃತಿ ಶ್ರೀರಾಮಾಯಣ ದರ್ಶನಂಗೆ ಜ್ಞಾನಪೀಠ ಪ್ರಶಸ್ತಿ ಬಂದು ಐವತ್ತು ವರ್ಷಗಳಾದ ಸಂದರ್ಭದಲ್ಲಿ ಕಥೆ ಹೇಳುವ ಕಾರ‍್ಯಕ್ರಮದಲ್ಲಿ ಕುವೆಂಪು ಕಥೆಗಳನ್ನೇ ಆರಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಕುವೆಂಪು ತಾಯಿಯ ತವರು ಹಿರೇಕೂಡಿಗೆಯಲ್ಲಿ ಜನಿಸಿ, ಕುಪ್ಪಳಿಯಲ್ಲಿ ಬೆಳೆದು ತೀರ್ಥಹಳ್ಳಿ, ಶಿವಮೊಗ್ಗ ಮೈಸೂರಿನಲ್ಲಿ ವಿಧ್ಯಾಭ್ಯಾಸ ಪಡೆದ ಅವರ ಬದುಕು, ಬರಹ ಒಂದು ಮಹಾಯಾನ ಇದ್ದಂತೆ ಎಂದರು.
ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಕುವೆಂಪು ಚಿಂತನೆಗಳನ್ನು ಮೈಗೂಡಿಸಿಕೊಂಡು ವಿಶ್ವಮಾನವರಾಗೋಣ ಎಂದು ತಿಳಿಸಿದರು .
ಅತಿಥಿಯಾಗಿ ಆಗಮಿಸಿದ್ದ ಉಮಾದೇವಿ ಗ್ಯಾರಳ್ಳ ಕರಿಸಿದ್ದ ಕಥನ ಕಾವ್ಯವನ್ನು ವಾಚಿಸಿದರು. ನಗರ ಕೇಂದ್ರ ಗ್ರಂಥಾಲಯದಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾದ ಓದುವ ವ್ಯವಸ್ಥೆ ಇದ್ದು, ಅಲ್ಲಿಗೆ ಭೇಟಿಕೊಟ್ಟು ಓದುವಂತೆ ,ಮತ್ತು ಕಥೆ ಕವನಗಳನ್ನೂ ರಚಿಸುವಂತೆ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷೆ ಸಿ.ಎ.ಇಂದಿರಾ ಉಪಸ್ಥಿತರಿದ್ದರು.