Publicstory
ಬೆಂಗಳೂರು: ಸುಮಾರು ನಾಲ್ಕು ದಶಕಗಳ ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಠವಾದ ಛಾಪನ್ನು ಪ್ರೊ.ವೈ.ಎಸ್.ಸಿದ್ದೇಗೌಡರವರು ಮೂಡಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಅವರ ಪಾತ್ರ ಅಪಾರವಾದುದಾಗಿದೆ.ಸದಾ ಕ್ರಿಯಾಶೀಲತೆಯ ಪ್ರತೀಕವಾಗಿರುವ ಇವರ ಸೇವೆಯನ್ನು ಕರ್ನಾಟಕ ಸರ್ಕಾರ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು.ಪ್ರೊ.ವೈ.ಎಸ್.ಸಿದ್ದೇಗೌಡ ಶಿಕ್ಷಣ ಕ್ಷೇತ್ರದ ನಿಜದ ಸಾರಥಿ ಎಂದು ಖ್ಯಾತ ಸಂಸ್ಕೃತಿ ಚಿಂತಕರು ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಮಲ್ಲೇಪುರಂ ಜಿ ವೆಂಕಟೇಶರವರು ಹೇಳಿದರು.
ನಗರದ ಪ್ರೊ.ಸಿದ್ದೇಗೌಡ ಸ್ನೇಹ ಬಳಗ, ಈಳ್ಳೇವು ಪ್ರಕಾಶನ ತುಮಕೂರು ,ವಚನಮಂಟಪ ಮಸ್ಕತ್, ಅಮೇರಿಕಾದ ನ್ಯಾಶುವೇಲ್ ಕನ್ನಡ ಕೂಟ ಸಹಯೋಗದಲ್ಲಿ ಆಯೋಜಿಸಿದ ಪ್ರೊ.ವೈ.ಎಸ್. ಸಿದ್ದೇಗೌಡರವರ ಅಭಿನಂದನಾ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ: ಬಹು ಆಯಾಮ ಕುರಿತು ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಪ್ರೊ.ವೈ.ಎಸ್.ಸಿದ್ದೇಗೌಡರವರು ವೃತ್ತಿಯ ಉದ್ದಕ್ಕೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಬೆಳೆದವರು ಎಂದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಉತ್ತಮವಾದ ಬೌದ್ಧಿಕ ವಾತಾವರಣ ಉಂಟು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕುರಿತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ವಿಶ್ವವಿದ್ಯಾಲಯಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಬೇಟಿ ನೀಡಿ ಅದರ ವೈಶಿಷ್ಟ್ಯತೆಯನ್ನು ಸಮರ್ಥವಾಗಿ ಪರಿಚಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ರಾಷ್ಟ್ರೀಯ ಮೌಲ್ಯಾಂಕ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕರಾದ ಡಾ.ಎಸ್. ಸಿ.ಶರ್ಮರವರು ಶಿಕ್ಷಣವು ಪ್ರಯೋಗಿಕ ನೆಲೆಯಲ್ಲಿ ಸಾಗಬೇಕು. ಯಾವುದೇ ವ್ಯಕ್ತಿ ಬದ್ಧತೆಯಿಂದ ಕರ್ತವ್ಯ ಪಾಲನೆ ಮಾಡಿದಾಗ ಸಮಾಜ ಆತನನ್ನು ಸ್ಮರಿಸುತ್ತದೆ. ಈ ಸ್ಮರಣೆಗೆ ಪ್ರೊ.ವೈ.ಎಸ್. ಸಿದ್ದೇಗೌಡರವರು ಉತ್ತಮ ನಿದರ್ಶನ ಎಂದರು.
ನಂತರ ಮಾತನಾಡಿದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶಿಕ್ಷಣ ತಜ್ಞ ,ನಾಡೋಜ ಶ್ರೀ ವೂಡೇ ಪಿ ಕೃಷ್ಣರವರು ರಾಷ್ಟ್ರೀಯ ಶಿಕ್ಷಣ ನೀತಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ.ನೈತಿಕ ವ್ಯಕ್ತಿತ್ವವಿಲ್ಲದ ವ್ಯಕ್ತಿಯಿಂದ ಸಮಾಜದಲ್ಲಿ ಏನನ್ನೂ ಉತ್ತಮವಾದುದನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಶಿಕ್ಷಣ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತದೆ. ಪ್ರೊ.ವೈ.ಎಸ್.ಸಿದ್ದೇಗೌಡರ ಶೈಕ್ಷಣಿಕ ಸೇವೆ ಅನುಕರಣೀಯವಾಗಿದೆ ಎಂದರು.
ಇದನ್ನು ಓದಿ https://publicstory.in/sufiya-law-collage-students-get-rank/
ಈ ಕಾರ್ಯಕ್ರಮದಲ್ಲಿ ಅಮೇರಿಕಾದ ನ್ಯಾಶುವೇಲ್ ಕನ್ನಡ ಕೂಟದ ಅಧ್ಯಕ್ಷರಾದ ಡಾ.ನಿಟ್ಟೂರು ರಾಮಪ್ರಸಾದ್,ಪ್ರೊ.ವೈ.ಎಸ್. ಸಿದ್ದೇಗೌಡರವರ ಪುತ್ರ ದರ್ಶನ್ ವೈ.ಎಸ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶ್ರೀನಿವಾಸ ಬಳ್ಳಿ,ತುಮಕೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳಾದ ಪ್ರೊ.ಸುದರ್ಶನ್ ರೆಡ್ಡಿ ಮುಂತಾದವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪ್ರೊ.ವೈ.ಎಸ್. ಸಿದ್ದೇಗೌಡ ಮತ್ತು ಶ್ರೀಮತಿ ಪ್ರೊ.ಆಶಾ ಎಂ.ವಿ ದಂಪತಿಗಳನ್ನು ಅವರ ಅಪಾರ ಸಂಖ್ಯೆಯಲ್ಲಿರುವ ಸ್ನೇಹ ಬಳಗ ಅಭಿನಂದಿಸಿತು.
ಕಾರ್ಯಕ್ರಮವನ್ನು ಡಾ.ಪ್ರಿಯಾಂಕ ಎಂ.ಜಿ ಅವರು ನಿರೂಪಿಸಿದರು. ವಿಮರ್ಶಕ ಡಾ. ಡಿ.ಸಿ.ಚಿತ್ರಲಿಂಗಯ್ಯ ಸ್ವಾಗತಿಸಿದರು. ಡಾ.ಸಚಿನ್ ವಂದಿಸಿದರು.