ತುಮಕೂರಿನ ಸುಫಿಯಾ ಕಾನೂನು ಕಾಲೇಜಿನಲ್ಲಿ ಶುಕ್ರವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಅಭಿನಂದನಾ ಪತ್ರವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ರಮೇಶ್ ಅವರಿಗೆ ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ನೀಡಿದರು. ಎಚ್.ಎಂ.ಎಸ್, ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್, ಷಫಿ ಅಹ್ಮದ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಪತ್ರಕರ್ತ ಪಿ.ಡಿ.ಈರಣ್ಣ ಇದ್ದಾರೆ.
Publicstory
ತುಮಕೂರು: ಸಂವಿಧಾನದ ಕಾರಣದಿಂದಲೇ ಎಲ್ಲ ಜಾತಿ, ಜನಾಂಗ, ಧರ್ಮದ ಜನರಿಗೆ ಸ್ಥಾನಮಾನ ಸಿಗಲು ಕಾರಣವಾಗಿದೆ ಎಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಅವರು ಹೇಳಿದರು.
ನಗರ ಸುಫಿಯಾ ಕಾನೂನು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಚ್ಎಂಎಸ್ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್, ರಚನಾ ಸಮಿತಿಯ ಸದಸ್ಯರುಗಳೆಲ್ಲರೂ ದೊಡ್ಡ ಮಹನೀಯ, ಮೇಧಾವಿಗಳಾಗಿದ್ದರು. ಅವರುಗಳ ಅವಿರತಶ್ರಮದಿಂದ ಇಂಥ ಸಂವಿಧಾನ ಸಿಗಲು ಕಾರಣವಾಯಿತು. ಬಡವರು. ದಲಿತರು, ಹಿಂದುಳಿದವರು, ಎಲ್ಲ ಧರ್ಮೀಯರು ಇಂದು ಉನ್ನತ ಸ್ಥಾನಮಾನ ನೋಡಲು ಸಾಧ್ಯವಾಗಿದ್ದು ಸಂವಿಧಾನದ ಕಾರಣದಿಂದ ಎಂದು ಅವರು ಅಭಿಪ್ರಾಯಪಟ್ಟರು.
ಕಾನೂನು ಶಿಕ್ಷಣದಲ್ಲಿ ಸುಫಿಯಾ ಕಾಲೇಜಿನ ವಿಧಾರ್ಥಿಗಳ ಸಾಧನೆ ಅಚ್ಚರಿಯನ್ನುಂಟು ಮಾಡುತ್ತದೆ. ಇದಕ್ಕೆ ಕಾರಣ ಇಲ್ಲಿನ ಗುಣಮಟ್ಟದ ಶಿಕ್ಷಣವಾಗಿದೆ. ಕಾನೂನು ಕ್ಷೇತ್ರದಲ್ಲಿ ಇಂದು ಅಗಾಧ ಅವಕಾಶಗಳಿವೆ, ಕಠಿಣ ಪರಿಶ್ರಮದಿಂದ ದೊಡ್ಡ ಸಾಧಕರಾಗಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ತಾಂತ್ರಿಕ ಶಿಕ್ಷಣದ ಕಡೆ ವಿದ್ಯಾರ್ಥಿಗಳ ಒಲವು ಹೆಚ್ಚುತ್ತಿದೆ. ಕಲಾ ವಿಭಾಗದ ಕಡೆ ವಿದ್ಯಾರ್ಥಿಗಳ ಒಲವು ಹೆಚ್ಚಬೇಕು. ಕಾನೂನು ವಿದ್ಯಾರ್ಥಿಗಳು ಜನ ಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಕಾಲೇಜಿನ ಸಾಧನೆಗೆ ಮೆಚ್ಚುಗೆ ಸೂಚಿಸಿದ ನ್ಯಾಯಾಧೀಶರು
ಅತಿ ಕಡಿಮೆ ಅವಧಿಯಲ್ಲೇ ಕಾಲೇಜು ಉತ್ತಮ ಸಾಧನೆ ಮಾಡಿದೆ. ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಪಡೆದಿರುವ ಅಂಕಗಳು ನೋಡಿದರೆ ಎದೆತುಂಬಿ ಬರುತ್ತದೆ. ಇದೊಂದು ಅಗಾಧ ಸಾಧನೆಯೇ ಸರಿ ಎಂದು ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಮೆಚ್ಚುಗೆ ಸೂಚಿಸಿದರು.
ಕಾನೂನು ಸೇವಾ ಪ್ರಾಧಿಕಾರ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುವಿಕೆ ಖುದ್ದು ನೋಡಿದ್ದೇನೆ. ಅವರಲ್ಲಿನ ಶಿಸ್ತು, ಬುದ್ಧಿವಂತಿಕೆಯಿಂದ ವರ್ತಿಸುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾದ ಪತ್ರಕರ್ತ ಪಿ.ಡಿ.ಈರಣ್ಣ ಮಾತನಾಡಿ, “ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ನ್ಯಾಯ ಒದಗಿಸುವ ಶಕ್ತಿ ವಕೀಲರಿಗಿದೆ. ಕಾನೂನು ವಿದ್ಯಾರ್ಥಿಗಳು ಸಮಾಜಮುಖಿ ಗುಣವನ್ನು ಬೆಳೆಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಪರವಾಗಿ ಯಾವಾಗಲೂ ನಿಲ್ಲಬೇಕು ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ.ಎಸ್.ರಮೇಶ್ ಮಾತನಾಡಿ, ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆದವೇ ಜಾತಿ ವ್ಯವಸ್ಥೆ ಬಲಪಡಿಸುವ ಕೆಲಸ ಮಾಡುತ್ತಿರುವುದು ದುರಂತ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಎಚ್ಎಂಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್. ಷಫಿ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲ ಓಬಣ್ಣ ಇದ್ದರು. ಕಾನೂನು ವಿದ್ಯಾರ್ಥಿ ಚಿದಂಬರ ಸ್ವಾಗತಿಸಿದರು. ಸುಮಿತ್ರಾ ಮಾಲಿಪಾಟೀಲ, ಪ್ರಶಾಂತ್ ದಸೂಡಿ ಕಾರ್ಯಕ್ರಮ ನಿರೂಪಿಸಿದರು. ಸುವರ್ಣ ವಂದಿಸಿದರು.