ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಸ್ಕಂದ ಷಷ್ಠಿ ಪ್ರಯುಕ್ತ ಸೋಮವಾರ ಅಲಂಕಾರಾದಿ ವಿಶೇಷ ಪೂಜೆ ಸಾಂಗೋಪಾಂಗವಾಗಿ ನಡೆಯಿತು.
ಪಟ್ಟಣದ ಸಂತಾನ ವೇಣುಗೋಪಾಲಸ್ವಾಮಿ ದೇಗುಲದ ಆವರಣದಲ್ಲಿರುವ ಸುಬ್ರಹ್ಮಣ್ಯಸ್ವಾಮಿ ದೇಗುಲ, ತಾಲ್ಲೂಕಿನ ಕಣಿವೇನಹಳ್ಳಿ ಗೇಟ್ ಬಳಿಯ ಅಭಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸಿ ದರ್ಶನ ಪಡೆದರು.
ಅಂತ್ಯ ಸುಬ್ರಹ್ಮಣ್ಯ ಎಂದು ಪ್ರಸಿದ್ಧಿಯಾಗಿರುವ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಬೆಳಗಿನ ಜಾವದಿಂದ ಏಕಾದಶ ರುಧ್ರಾಭಿಷೇಕ, ಸಹಸ್ರನಾಮಾರ್ಚನೆ, ಪ್ರಾಕಾರ ಉತ್ಸವಾದಿಗಳನ್ನು ನಡೆಸಲಾಯಿತು.
ಅನ್ನದ ರಾಶಿಯ ಮೇಲೆ ಉತ್ಸವ ಮೂರ್ತಿಯನ್ನು ಇರಿಸಿ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ದೇಗುಲ ಪ್ರಾಂಗಣ, ಅರಳೀ ಮರದ ಕೆಳಗೆ ಪ್ರತಿಷ್ಠಾಪಿಸಿರುವ ನಾಗರ ವಿಗ್ರಹಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು.