Tumkur: ಪ್ರತಿಯೊಬ್ಬ ವ್ಯಕ್ತಿಯೂ ತಾನು ವಾಸಿಸುವ ಮನೆ, ಸುತ್ತಮುತ್ತಲಿನ ಪರಿಸರ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಶುಚಿತ್ವ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವ್ ಕುಮಾರ್ ತಿಳಿಸಿದರು.
ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸ್ವಚ್ಛತಾ ನಮ್ಮ ನ್ಯಾಯಾಲಯ-ಸ್ವಚ್ಛ ನ್ಯಾಯಾಲಯ ಕಾರ್ಯಕ್ರಮಕ್ಕೆ ನ್ಯಾಯಾಲಯ ಆವರಣ ಸ್ವತಃ ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇದೊಂದು ತಂಡಕಾರ್ಯವಾಗಿದ್ದು, ಸ್ವಚ್ಛಗೊಳಿಸಬೇಕೆಂಬ ಮನೋಭಾವದಿಂದ ಎಲ್ಲರೂ ಭಾಗವಹಿಸಿದಾಗ ಇಂತಹ ಕಾರ್ಯಗಳು ಯಶಸ್ವಿಯಾಗುತ್ತವೆ. ಜಿಲ್ಲೆಯ ಎಲ್ಲಾ ನಾಗರೀಕರು, ಅಧಿಕಾರಿಗಳು ಮತ್ತು ಸಾರ್ವಜನಿಕರು ತಾವು ವಾಸಿಸುತ್ತಿರುವ ಪ್ರದೇಶಗಳಲ್ಲಿರುವ ಶಾಲೆ, ಕಾಲೇಜು, ಆಸ್ಪತ್ರೆಗಳಂತಹ ಸಾರ್ವಜನಿಕ ಸ್ಥಳಗಳನ್ನು ಸಮುದಾಯ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಿದಾಗ ಊರು, ಪಟ್ಟಣ, ನಗರ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಲು ಸಾಧ್ಯವಾಗುತ್ತದೆ.
ಯಾವುದೇ ಒಂದು ಸಂಸ್ಥೆ ಅಥವಾ ಸಂಘಟನೆಗಳು ಸ್ವಚ್ಛಗೊಳಿಸಬೇಕೆಂಬ ಮನೋಭಾವ ತೊರೆದು ಭಾರತದ ಸ್ವಚ್ಛ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ದೇಶದ ಈ ಸಿದ್ಧಾಂತವನ್ನು ಯಶಸ್ವಿಗೊಳಿಸಿದಾಗ ವಿಶ್ವಗುರು ಸ್ಥಾನ ಗಳಿಸಲು ಸಾಧ್ಯವಾದೀತು ಅದಕ್ಕಾಗಿ ಪ್ರೇರಣೆ ಮೂಡಿಸಲು ಈ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ರಾಮಮೂರ್ತಿ, ದೊಡ್ಡಹನುಮಯ್ಯ, ಅಂಜನಮೂರ್ತಿ, ತಿಮ್ಮಕ್ಕ, ಪ್ರವೀಣ್, ನರಸಿಂಹಮೂರ್ತಿ, ಅಂಜನಮೂರ್ತಿ ಹಾಗೂ ರಂಗಸ್ವಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.