ರವಿಕುಮಾರ್ ಕಮ್ಮನಕೋಟೆ
ಬ್ಯುಸಿ ಲೈಫ್ ಶೆಡ್ಯೂಲ್ ನಡುವೆ ಮನಸ್ಸು ರೀಲಾಕ್ಸ್ ಮೂಡ್ನತ್ತ ವಾಲುವುದು ಸಹಜ. ಅದಕ್ಕಾಗಿಯೇ ರಿಸ್ಕ್ ಅನ್ನೋ ರಸ್ಕ್ ನಂತಹ ಬೆಟ್ಟದ ರಾತ್ರಿ ಚಾರಣಕ್ಕೆ ಗೆಳೆಯ ಮೊಸರುಕುಂಟೆ ಗಂಗಾಧರ್ ಜೊತೆ ಈ ವಿಚಾರ ಪ್ರಸ್ತಾಪ ಮಾಡಿದೆ.
ನಮ್ಮ ಪರಮ ಆತ್ಮಿಯರ ಜೊತೆ ಕಾಡು ಮೇಡು ಸುತ್ತಿದರೆ ಮರೆಯಲಾಗದ ನೆನಪು ಉಳಿಯುತ್ತೆ ಎಂಬ ಚರ್ಚೆಯಾಯಿತು. ಸರಿ ಯಾರ ಜೊತೆಗೆ ಹೋಗೋದು ಎಂಬುದು ಇಬ್ಬರಿಗೂ ಪ್ರಶ್ನೆ? ಸದಾ ಲವಲವಿಕೆಯಿಂದಿರುವ.. ಪ್ರಾಕೃತಿಕ ಸೊಬಗನ್ನು ಸದಾ ಆಹ್ವಾದಿಸುವ ದಿ ಫೇಮಸ್ ಭ್ರೂಣ ತಜ್ಞ ಡಾ.ಹೇಮಂತ್ ಸರ್ ತಕ್ಷಣಕ್ಕೆ ಸ್ಮೃತಿ ಪಟಲಕ್ಕೆ ಬಂದರು. ಅವರನ್ನು ವಿನಂತಿಸಿಕೊಂಡಾಗ ಅವರು ಸಂತೋಷದಿಂದ ಬರುವ ಒಪ್ಪಿಗೆಯನ್ನಿತ್ತರು.
ಶನಿವಾರ ರಾತ್ರಿ ಹೊರಡಲು ನಾವು ಸಿದ್ಧತೆ ಮಾಡಿಕೊಂಡೆವು. ಆ ಕಡೆ ಯಿಂದ ಡಾ. ಹೇಮಂತ್ ಸರ್ ಮತ್ತು ಅವರ ತಂಡ ನಮ್ಮ ಜೊತೆ ಗೂಡಿತ್ತು. ಅವರ ಕಾರಿನಲ್ಲಿಯೇ ಮಧುಗಿರಿಯ ಶ್ವಾಸಕೋಶದಂತಿರುವ ಕಮ್ಮನಕೊಟೆ ಕಡೆ ನಮ್ಮ ಪ್ರಯಾಣ ಸಾಗಿತು. ನಮ್ಮ ಮತ್ತು ಅವರ ಕುಶಲೋಪರಿ ಮಾತನಾಡುವ ಹೊತ್ತಿಗೆ ಕಮ್ಮನಕೋಟೆ ಹೆಬ್ಬಾಗಿಲನ್ನು ರೀಚ್ ಆದೆವು.
ಕಾರಿನಿಂದ ಇಳಿದು ಮೊದಲಿಗೆ ಹೋದದ್ದು ದನಕರುಗಳೇ ಸಂಪತ್ತಿನಂತೆ ತುಂಬಿರುವ ಮಾವನ ಮನೆಗೆ. ದನದ ಕರುಗಳು, ಬೆಕ್ಕಿನ ಮರಿಯನ್ನು ಮದ್ದಾಡಿದ ನಂತರ ಉಡುಬೆಟ್ಟದ ಕಡೆ ಕಾರಿನ ಟಯರ್ಗಳು ಮುಖ ಮಾಡಿದವು. ಎಕ್ಸ್ಯುವಿ 500 ಕಾರಿನ ಠೀವಿಯ ಚಲನೆ ನಿರಾಯಾಸವಾಗಿ ಗುಡ್ಡಗಳ ಮೇಲೆ ಹಾದುಹೋಗುವ ಡಾಂಬರು ರಸ್ತೆಯನ್ನೇರಿ ಆನೆಯ ಗಂಭೀರ ನಡಿಗೆಯಂತೆ ಸಾಗುತ್ತಿತ್ತು.
ಅಷ್ಟೊತ್ತಿಗೆ ಕತ್ತಲಾಗಿದ್ದರೂ ಆಗಸದಲ್ಲಿನ ಸಂಜೆಯ ಬೆಳಕಿನ ಮುಸುಕು ಆರಿರಲಿಲ್ಲ. ಗಗನವನ್ನು ಚುಂಬಿಸುವಂತೆ ಕಾಣುವ ಎತ್ತರದ ಬೆಟ್ಟಗಳು ಕಮ್ಮನಕೋಟೆಗೆ ನಿರ್ಮಿಸಲಾದ ಸ್ವರ್ಣ ಗೋಪುರಗಳಂತೆ ಕಾಣುತ್ತಿದ್ದವು. ಘಾಟ್ ಪ್ರದೇಶದಂತೆ ಇದ್ದ ಹಾದಿಯಲ್ಲಿ ಸಾಗುವಾಗಂತೂ ಕವಳಿಸಂದಿ ಕಾಡಿನ ತಣ್ಣನೆಯ ಗಾಳಿ ಮೈ ಸೋಕಿದಾಗ ರೋಮಾಂಚನ.
ಜೀರ್ಜಿಂಬೆಯಂತೆ ಕರುವುಗಳನ್ನು ದಾಟಿ ಉಡಬೆಟ್ಟದ ಮಾರಮ್ಮ ದೇವಸ್ಥಾನದ ಪಕ್ಕದಲ್ಲಿ ಕಾರು ಬಂದು ನಿಂತಿತು.
ಟ್ರಕಿಂಗ್ ಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬೆಟ್ಟ ಹತ್ತಲು ಹೊರಟೇ ಬಿಟ್ಟೆವು. ಕಡಿದಾದ ಬಂಡೆಗಳನ್ನು ಏರಿ ಹತ್ತುವುದೇ ಒಂದ್ ಟಾಸ್ಕ್. ಸದಾ ಅರಗಿನ ಅರಮನೆಯಲ್ಲಿರುವ ವೈದ್ಯರು ನಮಗಿಂತಲೂ ಉತ್ಸುಕರಾಗಿ ಬೆಟ್ಟ ಏರುವುದು ನೋಡಿದರೆ ನಿಜಕ್ಕೂ ಅಚ್ಚರಿ ಎನಿಸಿತು.
ಟೆಂಟ್ ಗಳು ಹಾಗೂ ಆಹಾರ ಸಾಮಾಗ್ರಿಗಳು, ಬಿಂದಿಗೆಯಲ್ಲಿ ನೀರನ್ನು ಹೊತ್ತು ಹೋದದ್ದು ದೇಹಕ್ಕೆ ದಣಿವಾದರೂ ಮನಸ್ಸಿಗೆ ಉಲ್ಲಾಸ ತಂದುಕೊಟ್ಟಿತು.
ಡಾಕ್ಟರ್ ಗಳು, ನಮ್ಮೂರ ಪಾಕೃತಿಕ ಸೌಂದರ್ಯವನ್ನು ನೋಡಿ ಆಗಸದತ್ತ ಕೈಚಾಚಿ ಸಂತಸದ ನಗೆ ಕೂಗುವಾಗ ಕಮ್ಮನಕೋಟೆ ಪ್ರಾಕೃತಿಕ ಸೊಬಗಿಗೆ ಗರ್ವ ಹುಟ್ಟಿಸಿರಬಹುದು. ಇಲ್ಲವೇ ನಿಸರ್ಗವೇ ಹಳ್ಳಗಳ ರೂಪದಲ್ಲಿ ನಾಚಿ ನೀರಾಗಿರಬಹುದು ಎನಿಸತೊಡಗಿತು.
ಮುತ್ತಿನಂತಹ ಮಿರುಗುವ ನಕ್ಷತ್ರ ಪುಂಜಗಳು ಆಕಾಶಕ್ಕೆ ತಲೆ ಎತ್ತಿ ನೋಡಿದರೆ ಮದುವೆಯ ದಿಬ್ಬಣದಲ್ಲಿ ಕಾಣುವ ಸಾಲು ಸಾಲು ದೀಪಗಳಂತೆ ಕಪ್ಪು ಮೋಡಗಳ ನಡುವೆ ಗೋಚರಿಸುತ್ತಿದ್ದವು. ಎತ್ತಿದ ಕತ್ತನ್ನು ಭೂಮಿಯ ಕಡೆ ತಿರುಗಿಸಿದಾಗ ರಾತ್ರಿ ಹೊತ್ತಿನಲ್ಲಿ ಬೆಳಗುತ್ತಿದ್ದ ಊರ ಬೀದಿ ದೀಪಗಳು ಎರಡು ಸಾವಿರ ಅಡಿಗೂ ಎತ್ತರದಿಂದ ನೋಡಿದರೆ ಅಲ್ಲಲ್ಲೆ ಸಣ್ಣ ದ್ವೀಪಗಳಂತೆ ಕಾಣದೆ ಇರುತ್ತವೆಯೇ?
ಬೆಟ್ಟ ಏರಿ ದಣಿದಿದ್ದ ನಮಗೆ ಒಂದು ಗುಂಪು ಒಣ ಸೌದೆಯನ್ನು ತಂದು ಪೈರ್ ಕ್ಯಾಂಪ್ ಹಾಕಿದ್ದು ಚಳಿ ಹವೆಗೆ ಮೈ ಕಾವೇರಿಸಿತು. ಮತ್ತೊಂದು ತಂಡವು ನಾಲ್ಕು ಕಲ್ಲುಗಳನ್ನು ಜೋಡಿಸಿ ಅಡುಗೆಗೆ ತಯಾರಿ ನಡೆಸಿತು.
ಅಸಂಖ್ಯಾತ ಮಾತುಗಳು ಮುಗಿಯುವ ವೇಳೆಗೆ ಹಸಿ ಟೊಮ್ಯಾಟೊ ಗೊಜ್ಜು , ನಾಟಿ ಕೋಳಿ ಸಾರು, ಮುದ್ದೆ , ಅನ್ನವನ್ನು ಅಡಿಕೆ ಪಟ್ಟೆ ಎಲೆಯಲ್ಲಿ ಹಾಕಿಕೊಂಡು ಸಂತೃಪ್ತವಾಗಿ ಹಸಿವನ್ನು ನೀಗಿಸಿಕೊಂಡೆವು. ಜಾನಪದ ಹಾಡುಗಳನ್ನು ಹಾಡುತ್ತ ರಾತ್ರಿ ಎರಡು ಗಂಟೆವರೆಗೂ ವಿರಮಿಸಿ ತಮ್ಮ ಟೆಂಟುಗಳಲ್ಲಿ ಮಲಗಿಕೊಂಡರು .
ನಾನು ಮತ್ತು ಸ್ನೇಹಿತ ಗಂಗಾಧರ್ ಬೆಂಕಿಯ ಕಡೆ ಪಾದಗಳನ್ನು ಹಾಕಿ ಬೆಚ್ಚನೆ ಮಲಗಿರುವಾಗ ಕರಡಿ ಮರಿಗಳ ಕೂಗು ಕೇಳಿಸಿತು. ಆಗ ಓಹ್.. ನಾವು ಕಾಡಿನಲ್ಲಿರುವ ಸಂಗತಿ ಮತ್ತೊಮ್ಮೆ ಪ್ರಜ್ಞೆಗೆ ಬಂತು. ಒಂದು ಕ್ಷಣ ಜೀವ ದಂಗಾಯಿತು ಆದರೂ ಅಷ್ಟೇನೂ ಭಯವಾಗಲಿಲ್ಲ.
ಬೆಳಗ್ಗೆಯಾದರೂ ಕೆಂಡ ಉರಿಯುತ್ತಲೇ ಇತ್ತು. ಸೂರ್ಯೋದಯ ವಾಗತೊಡಗಿದಾಗ ಎಲ್ಲರೂ ಸೂರ್ಯನ ಎದುರಿಗೆ ಮುಖಮಾಡಿ ನಿಂತೆವು. ಬಿಸಿಲು ನೆತ್ತಿಗೇರುವ ಹೊತ್ತಿಗೆ ಬೆಟ್ಟವಿಳಿದು ಕಮ್ಮನಕೋಟೆ ಫಾಲ್ಸ್ಗೆ ತೆರಳಿದೆವು.
ನೀರಿನಲ್ಲಿ ಮಿಂದು ಶಾಂತಕ್ಕ ಅತ್ತಿಗೆ ಮಾಡಿದ್ದ ಚಿತ್ರನ್ನದ ಜೊತೆಗೆ ಕಾಫಿ ಕುಡಿದು ಎಕ್ಸ್ಯುವಿ ರಥವನ್ನೇರಿ ತಮ್ಮ ತಮ್ಮ ಊರುಗಳ ಕಡೆ ಮುಖ ಮಾಡಿದೆವು. ಭಾಸ್ಕರನು ಅಷ್ಟೊತ್ತಿಗೆ ಭಾನುವಾರಕ್ಕೆ ಶುಭ ಹಾರೈಸಿ ಸುಂದರ ಸೋಮವಾರಕ್ಕೆ ಮತ್ತೆ ಬರಲು ಹಾತೊರೆಯುತ್ತಿದ್ದ.
ಗುಂಡಾದ ಭೂಮಿಲಿ ಎಂದಾದರೊಂದು ದಿನ ಮತ್ತೆ ಸಿಕ್ಕೆ ಸಿಗುತ್ತೇವೆ ಎಂದು ಬೆಂಗಳೂರಿನಿಂದ ಬಂದಿದ್ದ ಡಾ . ಹೇಮಂತ್ ಸರ್ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ಹೇಳಿ ವಿಕ್ ಎಂಡ್ ಟ್ರಕಿಂಗ್ ಮುಕ್ತಾಯ ಮಾಡಿದವು.