ತುರುವೇಕೆರೆ: ಪಟ್ಟಣದ ಹಿರಿಯ ಪತ್ರಕರ್ತ ಟಿ.ಎನ್.ಸೂರ್ಯನಾರಾಯಣರಾವ್ ಅಲ್ಪಕಾಲದ ಅಸ್ವಸ್ಥತೆಯಿಂದ ಶುಕ್ರವಾರ ಮಧ್ಯಾಹ್ನ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಚಿಕ್ಕಂದಿನಿಂದಲೇ ಪತ್ರಿಕಾ ವಿತರಕರಾಗಿ ವೃತ್ತಿ ಆರಂಭಿಸಿದ್ದ ಸೂರ್ಯನಾರಾಯಣರಾವ್ ನಂತರ ಪತ್ರಕರ್ತರಾಗಿ ಸುಮಾರು 5 ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಬಿಸಿಲು, ಮಳೆ, ಚಳಿಯೆನ್ನದೆ ತಮ್ಮ ವೃದ್ದಾಪ್ಯದಲ್ಲೂ ನಡೆದುಕೊಂಡೇ ಮನೆ ಮನೆಗೆ ಪತ್ರಿಕೆ ವಿತರಿಸುತ್ತಿದ್ದ ಅವರು ಹಲವು ಯುವ ಪತ್ರಕರ್ತರಿಗೆ ಮಾದರಿಯಾಗಿದ್ದರು.
ಸಹಕಾರಿ ಆಧಾರದ ಮೇಲೆ ಬಡವರಿಗೆ ಹಾಗೂ ನಾಗರಿಕರಿಗೆ ವಸತಿ ಯೋಜನೆ ಕಲ್ಪಿಸುವಲ್ಲೂ ಅವರು ಸಾಕಷ್ಟು ಶ್ರಮ ವಹಿಸಿದ್ದರು.
ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ, ಪರುಸ್ಕಾರಗಳಿಗೆ ಭಾಜನರಾಗಿದ್ದರು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪುತ್ರ, ಪತ್ರಕರ್ತ ಟಿ.ಎಸ್.ನಾಗಭೂಷಣ್, ಐವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ಪಟ್ಟಣದ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ನೆರವೇರಿತು. ಮೃತರ ನಿಧನಕ್ಕೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬ್ರಾಹ್ಮಣ ಸೇವಾ ಸಮಾಜ ಹಾಗೂ ಇತರೆ ಹಲವಾರು ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.