ಕೊರಟಗೆರೆ:
ಗ್ರಾಮದೇವತೆ ಉತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಬಳೆಗಾರನ ಮಲಾರದಲ್ಲಿ ಬಳೆ ತೊಡಿಸುವ ಮೂಲಕ ಶಾಸಕ ಡಾ. ಜಿ. ಪರಮೇಶ್ವರ ಎಲ್ಲರ ಗಮನ ಸೆಳೆದರು.
ಇದು ನಡೆದದ್ದು ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿ.
ಜಾತ್ರೆ ಉತ್ಸವದಲ್ಲಿ ಪಾಲ್ಗೊಂಡಿದ್ದ ಗ್ರಾಮದ ಮಹಿಳೆಯರಿಗೆ ಅಣ್ಣನ ರೀತಿ ಬಳೆ ಮಲಾರದ ಮುಂದೆ ಕುಳಿತು ಬಳೆ ತೊಡಿಸಿ ಗ್ರಾಮದ ಜನರ ಮೆಚ್ಚುಗೆ ಪಾತ್ರರಾದರು. ತುಂಬಾಡಿ ಗ್ರಾಮದೇವತೆ ಮಾರಮ್ಮನ ಉತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆದ ಬಳಿಕ. ಬಳೆ ಅಂಗಡಿ ಮುಂದೆ ನಿಂತಿದ್ದ ಗ್ರಾಮದ ಹೆಣ್ಣು ಮಕ್ಕಳು ಬಳೆ ಖರೀದಿ ಮಾಡುವುದನ್ನು ಕಂಡು ಶಾಸಕರು ಅಲ್ಲಿದ್ದ ಹೆಣ್ಣು ಮಕ್ಕಳಿಗೆ ತಾವೇ ಮುಂದೆ ನಿಂತು ಅಣ್ಣನ ರೀತಿ ಬಳೆ ತೊಡಿಸಿ ಅಂಗಡಿಯವರಿಗೆ ಹಣ ನೀಡಿದರು.
ಅಲ್ಲಿದ್ದ ಹೆಣ್ಣು ಮಕ್ಕಳು ತಮಗೆ ಇಷ್ಟವಾದ ಹಾಗೂ ಕೇಳಿದಷ್ಟು ಬಳೆ ತೊಡುವಂತೆ ಸ್ವತಃ ಶಾಸಕರೇ ಅಪ್ಪಣೆ ನೀಡಿ ಅದರಹಣವನ್ನು ಅವರೇ ಭರಿಸಿದರು.
ಕರೊನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿದರೆ ಗ್ರಾಮ ರೋಗ ಮುಕ್ತವಾಗುವುದೆಂದು ಹಲವು ವರ್ಷಗಳಿಂದ ಜನರಲ್ಲಿ ನಂಬಿಕೆ ಇದೆ. ಅದಕ್ಕಾಗಿ ಈ ವಿಶೇಷ ಉತ್ಸವನ್ನು ಪ್ರತೀ ಗ್ರಾಮದಲ್ಲಿ ಮಾಡುತ್ತಿದ್ದಾರೆ. ಇಂತ ಧಾರ್ಮಿಕ ಆಚರಣೆಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಂಪ್ರದಾಯಿಕ ಆಚರಣೆ ಮಾಡಬೇಕು.
ಗ್ರಾಮ ದೇವತೆ ಉತ್ಸವಗಳಿಗೆ ಮದುವೆಯಾಗಿ ಗಂಡನ ಮನೆ ಹೋಗಿರುವ ಹೆಣ್ಣು ಮಕ್ಕಳು ಊರಿಗೆ ಉತ್ಸವಕ್ಕೆ ಬರುವುದು ಪ್ರತೀತಿ. ಇಂತಹ ಸಮಯದಲ್ಲಿ ಅವರು ಬಳೆಗಳನ್ನು ಕೊಂಡುಕೊಳ್ಳುವುದು ಸಂಪ್ರದಾಯ. ಈ ವೇಳೆ ಕ್ಷೇತ್ರದ ಶಾಸಕನಾಗಿ ಹೆಣ್ಣು ಮಕ್ಕಳಿಗೆ ಅಣ್ಣನಾಗಿ ಬಳೆಯನ್ನು ಕೊಡಿಸಿರುವುದು ಸಂತಸ ತಂದಿದೆ. ಸಂಪ್ರದಾಯಗಳನ್ನು ಗೌರವಿಸಬೇಕಿರುವುದು ನಮ್ಮ ಆದ್ಯ ಕರ್ತವಯ ಎಂದು ಶಾಸಕ ಡಾ. ಜಿ. ಪರಮೇಶ್ವರ ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.