ದುರ್ಯೋದನನ ಪಾತ್ರದಲ್ಲಿ ಡಿವೈಎಸ್ಪಿ ಚಂದ್ರಶೇಖರ್
ಬಹುಶಃ ಈ ವ್ಯಕ್ತಿತ್ವವೇ ಹಾಗೆ. ಎಲ್ಲರನ್ನು ಒಗ್ಗೂಡಿಸುವ ಮನಸ್ಸು, ಎಲ್ಲರೊಳಗೊಂದಾಗುವ ಮನುಷ್ಯ. ಕಠಿಣ ಶಿಸ್ತಿನ ಇಲಾಖೆಯ ಕಟ್ಟುನಿಟ್ಟಿನ ಅಧಿಕಾರಿಯಾದರೂ ಮಾತೃ ಹೃದಯ ಶ್ರೀಮಂತಿಕೆ.
ಹೆಸರು ಚಂದ್ರಶೇಖರ. ಬಹುಶಃ ಅದಕ್ಕೆ ಇರಬೇಕು ಚಂದ್ರನಂತ ಆಕರ್ಷಣೆ ಉಳ್ಳ ಸಹೃದಯತೆಯಿಂದ ಎಂತವರನ್ನು ಸೆಳೆಯುವ ವ್ಯಕ್ತಿತ್ವ.
ತಾನೆಲ್ಲೇ ಕೆಲಸ ನಿರ್ವಹಿಸಿದರೂ, ಅಲ್ಲೊಂದು ನೆನಪಿನ ಬುತ್ತಿ ತುಂಬಿಡುವ, ತನ್ನದೇ ಆದ ಅಸ್ತಿತ್ವದ ಕುರುಹು ಉಳಿಸಿ ಬರುವ ಸಾಂಘಿಕ.

ಅವಮಾನಿಸಿದವರ ಎದುರು ಅವಿರತವಾಗಿ ಸಾಧಿಸಿ, ನಿಬ್ಬೆರಗಿನಿಂದ ಒಮ್ಮೆ ತನ್ನತ್ತ ತಿರುಗಿ ನೋಡುವಂತೆ ನಡೆವ ಛಲದಂಕ.
ಪ್ರಾಯಶಃ ಇದೇ ಅಸ್ಮಿತೆಯಿಂದಲೇ ಇರಬಹುದು ತನ್ನ ನೇತೃತ್ವದಲ್ಲಿ ಕಲೆಗೊಂದು ಬೆಲೆ ಕಟ್ಟುವ ನಿಟ್ಟಿನಲ್ಲಿ ಪೌರಾಣಿಕ ನಾಟಕ ಆಯೋಜಿಸಿ, ತನ್ನವರೊಂದಿಗೆ ಕಲೆಗೊಂದಿಷ್ಟು ಬೆಳಕು ಚೆಲ್ಲುವ ಹೊಸ ಅಡಿಗೆ ಮುನ್ನುಡಿಯಾಗಿದ್ದಾರೆ.
ಪ್ರಸ್ತುತ ತುಮಕೂರು ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಕೆ.ಆರ್. ಚಂದ್ರಶೇಖರ ಮೂಲತಃ ಗಂಡು ಮೆಟ್ಟಿದ ನಾಡು ಮಂಡ್ಯ ಜಿಲ್ಲೆಯ ಕೋಣಸಾಲೆಯ ಮಗ. ಆದರೂ ತುಮಕೂರು ಜಿಲ್ಲೆಯಲ್ಲಿ ತನ್ನದೇ ಆದ ವ್ಯಕ್ತಿ, ವ್ಯಕ್ತಿತ್ವ ರೂಪಿಸಿಕೊಂಡು, ತನ್ನ ಅಪ್ಪಿ ಬರುವವರಿಗೆ ಸಹೋದರ, ಸ್ನೇಹಿತ, ಪ್ರೀತಿ ಪಾತ್ರನಾಗಿ, ಧ್ವೇಷಿಸಿ ದೂರ ತಳ್ಳುವವರಿಗೆ ತೊಡೆ ತಟ್ಟಿ ನಿಲ್ಲುವ ಅಂತರ್ಮುಖಿ.
ಅವರ ಸಾರಥ್ಯದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನವನ್ನು ಅವರ ಸಹೋದ್ಯೋಗಿ ಮಿತ್ರರೊಂದಿಗೆ ಏರ್ಪಡಿಸಲಾಗಿದೆ.
ಪೊಲೀಸ್ ಎಂದಾಕ್ಷಣ ಜನರ ಮಸ್ತಕದಲ್ಲಿ ನಾನಾ ಬಗೆಯ ಆಲೋಚನೆಗಳು ಎದುರಾಗುವುದುಂಟು. ಅದಕ್ಕೆ ಕಾರಣಗಳು ನೂರೆಂಟಿರಬಹುದು. ಆದರೆ ಯಾರೋ ಒಂದಿಬ್ಬರ ವಿಕೃತತೆಗೆ ಎಲ್ಲರನ್ನೂ ಹಾಗೆ ಎಂದು ಸಂಭಾವಿಸುವಂತಿಲ್ಲ. ಶಿಸ್ತಿನ ಇಲಾಖೆಯಲ್ಲಿ ಕೆಲವೊಮ್ಮೆ ಕಠಿಣ ನಿರ್ಧಾಗಳು ಅನಿವಾರ್ಯ. ಆಗೆಂದ ಮಾತ್ರಕ್ಕೆ ಪೊಲೀಸರಿಗೆ ಮನುಷ್ಯತ್ವ, ಮಾನವೀಯ ಮೌಲ್ಯಗಳಿಲ್ಲ ಎಂಬಂತಿಲ್ಲ. ಅಂತಃಕರಣದ ಹೃದಯ ಇಲಾಖೆಯ ಎಲ್ಲರಲ್ಲೂ ಇರದ್ದಿದ್ದರೆ ಇಂದು ಇಷ್ಟು ಅಭಿರಾಮವಾಗಿ ನಾವು ಉಳಿಯುತ್ತಿರಲಿಲ್ಲ ಎಂದೆನಿಸುತ್ತದೆ.
ಚಂದ್ರಶೇಖರ ಅವರಂತ ಹೃದಯ ಶ್ರೀಮಂತಿಕೆ ವ್ಯಕ್ತಿಗಳು ಪೊಲೀಸ್ ಇಲಾಖೆಯಲ್ಲಿ ಇನ್ನೂ ಉಳಿದಿರುವ ಕಾರಣದಿಂದಾಗಿಯೇ ಮಾನವೀಯ ಮೌಲ್ಯಗಳು ಇನ್ನೂ ಜೀವಂತಿಕೆ ಪಡೆದಿವೆ. ಇಲಾಖೆಯ ಗೌರವವು ಶಿಖರ ಮುಖವಾಗಿದೆ.
ಇಂತಹ ಮೇರು ವ್ಯಕ್ತಿಯ ಸಾರಥ್ಯದಲ್ಲಿ ಇಲಾಖೆಯ ಸಮಾನ ಚಿತ್ತದ ಸಿಬ್ಬಂದಿ ಒಟ್ಟುಗೂಡಿ ಜಂಜಾಟದ ಬದುಕಿಗೊಂದಿಷ್ಟು ವಿರಾಮ ನೀಡಿ, ವೀರಾಜಮಾನವಾಗಿ ತಮ್ಮ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡಲು ಮುಂದಾಗಿದ್ದಾರೆ.
ನಮ್ಮ ಕಲೆಗೆ ಒಂದಿಷ್ಟು ಬೆಲೆ ತರುವ, ನಾಡಿನ ಭಾಷೆಗೆ ಹೊಸ ಭಾಷ್ಯ ಬರೆಯುವ, ನಮಗೂ ಅವಕಾಶ ಸಿಕ್ಕರೆ ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನ ತೋರ್ಪಡಿಸುವ ನಿಟ್ಟಿನಲ್ಲಿ “ಕುರುಕ್ಷೇತ್ರ” ಎಂಬ ಪೌರಾಣಿಕ ನಾಟಕ ಅಭಿನಯಕ್ಕೆ ಕ್ಷಣ ಗಣನೆ ಎಣಿಸುತ್ತಿದ್ದಾರೆ.
ಇದೇ ಮಾರ್ಚ್ 11 ರಂದು ಸಂಜೆ 4 ಗಂಟೆಗೆ
ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಮೀಪದ ಮೈಧಾನದಲ್ಲಿ ಖಾಕಿ ಧಾರಣಿಗಳು ತಮ್ಮ ದೈನಂದಿನ ಸಮವಸ್ತ್ರವನ್ನು ಬದಿಗಿರಿಸಿ ಕುರುಕ್ಷೇತ್ರ ನಾಟಕದ ಭೀಮಾರ್ಜುನ, ಧರ್ಮರಾಯ ನಕುಲ-ಸಹದೇವರಾದಿಯಾಗಿ, ದುರ್ಯೋಧನ, ದುಶ್ಯಾಸನಾಧಿಗಳ ವೇಷದಲ್ಲಿ ತಮ್ಮ ಪಾತ್ರಗಳನ್ನ ಅಭಿವ್ಯಕ್ತಿ ಪಡಿಸುವ ಮೂಲಕ ಪ್ರತಿಭೆಯನ್ನ ಅನಾವರಣ ಮಾಡಲಿದ್ದಾರೆ.
ಸದಾ ಕಾಲ ಸಾರ್ವಜನಿಕ ಸೇವೆಗಾಗಿ ಪಿಸ್ತೂಲ್, ಲಾಟಿ ಹಿಡಿದು ರಕ್ಷಣೆಗಾಗಿ ನಿಲ್ಲುತ್ತಿದ್ದ ಕೈಗಳು ಈಗ ಗದೆ, ಕತ್ತಿ ಹಿಡಿದು ನಮ್ಮ ಸಾಂಸ್ಕೃತಿಕ ಪ್ರತೀಕವೆನಿಸಿದ ಕುರುಕ್ಷೇತ್ರ ಪೌರಾಣಿಕ ನಾಟಕ ಅಭಿನಯಿಸುವ ಮೂಲಕ ಕಲೆಗೆ ಹೊತ್ತು ನೀಡಿ ಒಂದಿಷ್ಟು ಮನೋಲ್ಲಾಸ ಪಡಿಸಲು ಸಿದ್ದರಾಗಿದ್ದಾರೆ. ಜನರ ಹಿತಕ್ಕಾಗಿ ಸ್ವಹಿತ ಲೆಕ್ಕಿಸದೆ ಒಂದಲ್ಲಾ ಒಂದು ಜಂಜಾಟದ ಬದುಕಿನಲ್ಲಿ ತೊಡಗುವ ಆರಕ್ಷಕ ಜೀವಗಳ ಈ ಕೌತುಕ ಅಭಿನಯವನ್ನು ಕಣ್ತುಂಬಿಕೊಂಡು ನಾವೂ ಆನಂದಿಸಿ, ಬೆನ್ನುತಟ್ಟಿ ಅವರನ್ನೂ ಪ್ರೋತ್ಸಾಹಿಸುವ ಮುಖೇನ ನಮಗಾಗಿ ತುಡಿವ ಮನಸುಗಳಿಗೊಂದಿಷ್ಟು ಮುದ ನೀಡುವ ಬನ್ನಿ…

✍️
ಲೇಖನ: ತುಳಸೀತನಯ ಚಿದು