ತುಮಕೂರು: ಬಿಜೆಪಿ ಎಸ್.ಸಿ. ಮೋರ್ಚಾ ಭಾನುವಾರ ಆಯೋಜಿಸಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಪರಿಶಿಷ್ಟರ ಸಮಾವೇಶಕ್ಕೆ ಹರಿದುಬಂದ ಜನಸಾಗರ ಪಕ್ಷದಲ್ಲಿ ಉತ್ಸಾಹ ಇಮ್ಮಡಿ ಮಾಡಿದೆ.

ಸಮಾವೇಶ ಉದ್ಘಾಟಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಹ ಜನಸಾಗರ ಕಂಡು ಹುಬ್ಬಿ ಹೋದರು. ಇದು ಬಿಜೆಪಿಗೆ ಸಮುದಾಯ ನೀಡುತ್ತಿರುವ ಬೆಂಬಲಕ್ಕೆ ಸಾಕ್ಷಿ ಎಂದು ಬಳಿಕ ನಡೆದ ಪ್ರಮುಖರ ಸಭೆಯಲ್ಲಿ ಹೇಳಿದರು ಎನ್ನಲಾಗಿದೆ.
ಸುಮಾರು 20 ಸಾವಿರಕ್ಕೂ ಹೆಚ್ಚು ಪರಿಶಿಷ್ಟರು ಸೇರಿದ್ದರು ಈ ವರ್ಗದ ಜನರು ಸುರೇಶಗೌಡರತ್ತ ಒಲುವು ತೋರಿಸಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಇದೊಂದು ದೊಡ್ಡ ಶಕ್ತಿ. ಸುರೇಶಗೌಡರು ಈ ಸಮುದಾಯದ ಕಣ್ಮಣಿಯಾಗಲಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಜಿ.ಎಸ್.ಬಸವರಾಜ್ ಆಂತರಿಕ ಸಭೆಯಲ್ಲಿ ವಿಶ್ಲೇಸಿದರು ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.

ಅಗಾಧ ಸಂಖ್ಯೆ ಯ ಜನರನ್ನು ಕಂಡು ನನ್ನ ಹೃದಯ ತುಂಬಿ ಬಂತು. ಡಾ.ಬಿ.ಆರ್. ಅಂಬೇಡ್ಕರ್ ಅವರ ಮಾತಿನಂತೆ, ಆ ಸಮುದಾಯದ ಮಕ್ಕಳೇ ಹೆಚ್ಚು ಓದುವ ಸರ್ಕಾರಿ ಶಾಲೆಗಳನ್ನು ಕಟ್ಟಿದ್ದು, ಶಾಸಕನಾಗಿದ್ದ ಅವಧಿಯಲ್ಲಿ ಕಾಲೊನಿಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಕ್ಕೆ ಈ ಪ್ರೀತಿ ತೋರಿಸಿದ್ದಾರೆ. ಈ ಸಲ ಗೆಲ್ಲಿಸಿದರೆ ಕಾಲೊನಿಗಳ ಸಮಗ್ರ ಅಭಿವೃದ್ಧಿ ನನ್ನ ಗುರಿಯಾಗಲಿದೆ ಎಂದು ಸುರೇಶಗೌಡ ಪ್ರತಿಕ್ರಿಯಿಸಿದ್ದಾರೆ.
ಸುರೇಶಗೌಡರು ಶಾಸಕರಾಗಿದ್ದ ಅವಧಿ ಯಲ್ಲಿ ಕಾಲೊನಿಗಳಲ್ಲಿ ಮಾಡಿದ ಕೆಲಸ ಜನರ ಪ್ರೀತಿಗೆ ಕಾರಣವಾಗಿದೆ. ಅಲ್ಲದೇ ಸಮಾವೇಶದ ತಯಾರಿಯನ್ನು ಕಾರ್ಯಕರ್ತರು ಅಚ್ಚುಕಟ್ಟಾಗಿ ಮಾಡಿದ್ದರು. ಕಾಲೊನಿಗಳ ಜನರ ನಡುವೆ ನಿಂತು ಕೆಲಸ ಮಾಡಿದ್ದು ಸಹ ಈ ಭಾರಿ ಸಂಖ್ಯೆಯ ಜನರು ಸೇರಲು ಕಾರಣ ಎಂದು ಗ್ರಾಮಾಂತರ ಮಂಡಲ ಅಧ್ಯಕ್ಷ ಶಂಕ್ರಣ್ಣ ತಿಳಿಸಿದರು.
