-ಡಾ.ಓ.ನಾಗರಾಜು
ಸ್ನೇಹಿತರೇ, ಹಾಗೆ ಸುಮ್ಮನೆ ಮೈಸೂರು ಗೆಜಟ್ ನ ಅವಲೋಕಿಸುತ್ತಿರುವಾಗ ನಮ್ಮ ತುಮಕೂರು ಜಿಲ್ಲೆಗೆ ಸಂಬಂಧ ಪಟ್ಟ ಮಾಹಿತಿ ಸಿಗಬಹುದೆ ಎಂದು ಕುತೂಹಲದಿಂದ ಓದಿದೆ.
ಕ್ರಿ.ಶ.1866 ನೇ ಇಸವಿ ಮೇ ತಿಂಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ನಡೆದ ಎಲ್ಲ ಆಗು ಹೋಗುಗಳ ಭಾಗಶ: ವರದಿ ನನ್ನ ಗಮನ ಸೆಳೆಯಿತು.
ಲೇಖನ, ವರದಿ, ಬರಹಗಳನ್ನು ನೀವು ವಾಟ್ಸಾಪ್ ಮಾಡಬಹುದು:9844817737
ತುಮಕೂರು ಜಿಲ್ಲೆ ಅಂದು ನಂದಿ ದುರ್ಗ ಡಿವಿಜನ್ ಗೆ ಒಳಪಟ್ಟಿತ್ತು ಎಂಬ ಮಾಹಿತಿ ಯ ಜೊತೆಗೆ ಮೇ ತಿಂಗಳಲ್ಲಿ ಜಿಲ್ಲೆಯ ಜನ -ಜಾನುವಾರಗಳ ಪ್ರಕೃತಿ ಯೊಂದಿಗಿನ ಅವಲಂಬನೆ ಮತ್ತುಅವಘಡ ಸಂಬಂಧಿತ ಸಾಧಕ ಬಾಧಕಗಳು ನಮ್ಮ ಇಂದಿನ ಕೊರೋನ ಸೋಂಕಿನ ಭಯದ ವಾತಾವರ ಕ್ಕೆ ತುಲನೆ ಮಾಡತೊಡಗಿ ಸೋಜಿಗಪಟ್ಟೆ.
ನನ್ನಲ್ಲಿ ಇಂದಿನ ಆಡಳಿತ ದ ಹೊಣೆಗೇಡಿತನದ ಬಗ್ಗೆ ಬಾಲಿಶ ಹೇಳಿಕೆಗಳ ಬಗ್ಗೆ ಹಲವಾರು ಪ್ರಶ್ನೆಗಳಿವೆ. ಆ ಸಂಬಂಧ ಮಾತಾಡುವ ಕಾಲ ಇಲ್ಲವಾದ್ದರಿಂದ, ನಾನು ಓದಿ ಮೈಸೂರು ಗೆಜೆಟ್ ಯಥಾವತ್ತಾದ ವರದಿ ನಿಮ್ಮ ಅವಗಾಹನೆಗೆ ತರುತ್ತಿದ್ದೇನೆ.
ಸುಮಾರು ಒಂದೂವರೆ ಶತಮಾನದ ಹಿಂದೆ ತುಮಕೂರು ಜಿಲ್ಲೆ ಯಾವ ರೀತಿ ಪ್ರಾಕೃತಿಕ ವಿಕೋಪ ಕ್ಕೆ ನಲುಗಿತ್ತು.(ಉಖಾಲ್ ಜಲಾಬ್ ಎಂದರೆ ವಾಂತಿ ಭೇದಿ ಎಂದು ಅರ್ಥ ) ಸಾವುಗಳು ಸಂಭವಿಸಿದ್ದವು. ಬರದ ಚಿತ್ರಣವೂ ಇದೆ.
ತುಮಕೂರು ಡಿಸ್ಟ್ರಿಕ್ಟ್ ಕಾಲಸ್ಥಿತಿ ವೃತ್ತಾಂತ: ತುಮಕೂರು ಡಿಸ್ಟ್ರಿಕ್ ನಲ್ಲಿ ವೈಶಾಖ ಫಸಲ್ ಕಟಾವ್ ಆಯಿತು. ಕೆಲವು ಸ್ಥಳಗಳಲ್ಲಿ ವಿನಾ ಮಿಕ್ಕಾದ ಕಡೆ ಸಾಮಾನ್ಯವಾಗಿ ರೈತರು ತಮ್ಮ ಹೊಲಗಳನ್ನು ಊಳುವುದಕ್ಕೆ ಅನುಕೂಲವಾಗಿ ಸಾಕಾದಷ್ಟು ಆಗಲಿಲ್ಲವು. ಬಾಗಾಯತು ಮತ್ತು ತರೀಪೈರಿಗೆ ಮಳೆಇಲ್ಲದೆಯೂ ಭಾವಿಗಳಲ್ಲಿಯೂ,ಕೆರೆಗಳೊಳಗೂ ನೀರು ಇಲ್ಲದೆಯೂ ನಷ್ಟಕರವಾಗಿತ್ತು.
ಪದಾರ್ಥಗಳು ದೊರೆಯದರಿಂಲೂ ಧಾರಣೆ ಚಡಾವಿನಿಂದಲೂ ಬಡವರು ಬಹಳ ಕಷ್ಟ ಪಡುತ್ತಿದ್ದರು. ಕುಣಿಗಲ್ ತಾಲ್ಲೂಕಿನಲ್ಲಿ ಬಹಳಮಂದಿ ಮತ್ತೆಲ್ಲಿಯಾದರು ಕೆಲಸ ನೋಡಿ ಕೊಳ್ಳುವುದಕ್ಕೋಸ್ಕರ ಸ್ಥಳ ಬಿಟ್ಟು ಹೋಗುತ್ತಿದ್ದರಂತೆ.
ಕೆಲವು ಸ್ಥಳಗಳಲ್ಲಿ ಜೋಳ ಯೆಳ್ಳು ಅರಳು ಉದ್ದು ಹೆಸರು ಇವುಗಳು ಪೇರಾವ್ ಆಗಿದ್ದವು. ತುಮಕೂರು ತಾಲ್ಲೂಕಿನಲ್ಲಿ ಆನೆ ಕಲ್ಲು ಸಹಿತವಾಗಿ ಮಳೆ ಬಿತ್ತು. ಮದ್ದಗಿರಿ ( ಮಧುಗಿರಿ), ತುರುವೇಕೆರೆ ಹೊನ್ನವಲ್ಲಿ, ಶಿರಾ ಈ ತಾಲ್ಲೂಕುಗಳಲ್ಲಿ ಉಖಾಲ್ ಜಿಲಾಬ್ ಉಪದ್ರವವುಂಟಾಗಿತ್ತು ಪರಂತು ಇತರ ವಿಷಯದಲ್ಲಿ ಆ ಡಿಸ್ಟ್ರಿಕ್ಟಿನಲ್ಲಿ ಓಳ್ಳೇ ಆರೋಗ್ಯ ವುಂಟಾಗಿತ್ತು.
ಎಲ್ಲಾ ತಾಲ್ಲೂಕಿನೊಳಗೂ ಮುಖ್ಯವಾಗಿ ಸಿರಾ ತಾಲ್ಲೂಕಿನಲ್ಲಿ ದನಗಳು ಹುಲ್ಲಿಲ್ಲದೆ ನೀರಿಲ್ಲದೆ ಕಷ್ಟ ಪಡುತ್ತಿದ್ದವು. ಮತ್ತು ಗೋಮಾರಿಯಿಂದ ಅನೇಕ ದನಗಳು ಸತ್ತು ಹೋದವು. ಸಿರಾ ತಾಲ್ಲೂಕು ವೊಂದರಲ್ಲಿಯೇ 4338 ದನಗಳಿಗೆ ಕಡಮೆ ಇಲ್ಲದೆ ಮುಖ್ಯವಾಗಿ ಹೊಟ್ಟೆ ಗೆ ಇಲ್ಲದ್ದರಿಂಲೇ ಸತ್ತು ಹೋದವೆಂದು ತಿಳಿಯಲಾಯಿತು.
ಮನುಷ್ಯರಲ್ಲಿ ಉಲಾಖ್ ಜಲಾಬ್ ನಿಂದಾಹೋದವರು ( ಸತ್ತು ಹೋದವರು) 42 ಮಂದಿ. ಶಿಡ್ಲುಹೊಡೆದು ಹೋದವರು 4 ಮಂದಿ ಸಹಿತ ವಾಗಿ ಹಸಿವು, ಕಾಯಿಲೆಯಿಂದ 284 ಮಂದಿ ಮೃತಪಟ್ಟರು. ದನಗಳಲ್ಲಿ ಗೋಮಾರಿ ಯಿಂದ ಹೊದ್ದು 227 ಸಹಿತವಾಗಿ ವಿಸ್ತಾರ 5421 ಕಾಲ್ನಡೆಗಳು ನಷ್ಟವಾದವು. ಆದರೆ ಏಪ್ರಿಲ್ ತಿಂಗಳಲ್ಲಿ 283 ಮಟ್ಟಿಗೆ ಹೋದವು.
ಮೇಲಿನ ವರದಿಯಲ್ಲಿ ಅಂದಿನ ಆಡಳಿತ ಜನರ ಸಮಸ್ಯೆಗೆ ಸ್ಪಂದಿಸುವ ಯಾವ ಯತ್ನ ಮಾಡದಿರುವುದು ತಿಳಿಯುತ್ತದೆ ಮತ್ತು ಇಂದು ಕೊರೋನ ಉಂಟು ಮಾಡಿರುವ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಯಲ್ಲಿ ಒಬ್ಬೊಬ್ಬರೂ ಪರಿಸ್ಥಿತಿಯ ಲಾಭವನ್ನು ಪಡೆಯಲು ಯತ್ತಿಸುತ್ತಿದ್ದಾರೆ ಹಾಗೂ ಕೆಲವರು ಪ್ರಾಮಾಣಿಕ ವಾಗಿ ಸಮಸ್ಯೆ ನಿವಾರಣೆಗೆ ಕಾರ್ಯ ಮಗ್ನವಾಗಿರುವ ವಿದ್ಯಮಾನ ಕಣ್ಮುಂದೆಯೇ ಇದೆ. ಆ ಗೆಜೆಟ್ ವರದಿಯೊಂದಿಗೆ ಇಂದಿನ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ಹೇಗಿದೆ ಎಂಬುದನ್ನು ಹೋಲಿಕೆ ಮಾಡಿ.
ಲೇಖಕ ಡಾ.ಓ.ನಾಗರಾಜ್ ಮೂಲತಃ ಕೊರಟಗೆರೆಯವರು.ಕೊರಟಗೆರೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು.
ಬಂಡಾಯ ಸಾಹಿತ್ಯ ಚಳವಳಿಯ ಮುಂಚೂಣಿಯಲ್ಲಿರುವ ಅವರು, ತುಮಕೂರು ಜಿಲ್ಲೆಯ ಮಹತ್ವದ ಬರಹಗಾರರಲ್ಲಿ ಒಬ್ಬರು.
ತುಮಕೂರು ಜಿಲ್ಲೆಯ ಚನ್ನರಾಯನದುರ್ಗವನ್ನು ಕೇಂದ್ರವಾಗಿಟ್ಟುಕೊಂಡು ಆಳ್ವಿಕೆ ಮಾಡಿದ ಈ ನಾಡಿನ ಮೊದಲ ದಲಿತ ದೊರೆ ಕುರುಂಗರಾಜನ ಕುರಿತು ಇವರು ಬರೆದಿರುವ ಕುರಂಗರಾಜ ವೈಭವ ಐತಿಹಾಸಿಕ ಕಾದಂಬರಿ ಇಡೀ ನಾಡಿನ ಇತಿಹಾಸ ಅಧ್ಯಯನಕಾರರಿಗೆ ಹೊಸ ದಾರಿಯ ಹುಡುಕಾಟ ತೋರಿಸಿದೆ.