ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಮನೆಯೊಂದರಲ್ಲಿ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಗ್ಗದ ಕೆಲಸ ಮಾಡುತ್ತಿದ್ದ ಇದೇ ಗ್ರಾಮದ ಶಿವಕುಮಾರ್(32) ಎಂಬುವರ ಮನೆಯ ಮೊದಲನೆ ಮಹಡಿಯಲ್ಲಿ ಪ್ರಿಂಟರ್ ಇತ್ಯಾದಿ ಪರಿಕರಗಳನ್ನು ಉಪಯೋಗಿಸಿಕೊಂಡು ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
100, 200, 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ತಾಲ್ಲೂಕು ಆಂಧ್ರದ ವಿವಿದ ಪ್ರದೇಶಗಳಲ್ಲಿ ಚಲಾವಣೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ‘ಪಬ್ಲಿಕ್ ಸ್ಟೋರಿ’ ಗೆ ಲಭಿಸಿದೆ.
ಶಿವಕೂಮಾರ್ ಜೊತೆ ಬಟ್ಟೆ ಹೂವು ತಯಾರಿ ಕೆಲಸದಲ್ಲಿ ನಿರತನಾಗಿದ್ದ ಶ್ರೀನಿವಾಸ್(50) ಕೃತ್ಯದಲ್ಲಿ ತೊಡಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಧಾಳಿ ನಡೆಸಿದ ಪೊಲೀಸರಿಗೆ ಸುಮಾರು 1.20 ಲಕ್ಷ ರೂ ಖೋಟಾ ನೋಟುಗಳು ಸಿಕ್ಕಿವೆ. ವೈ.ಎನ್.ಹೊಸಕೋಟೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ಖೋಟಾ ನೋಟು ಚಲಾವಣೆ ಹೆಚ್ಚಿದೆ ಎಂಬ ಆರೋಪಗಳು ಕಳೆದ ಸಾಕಷ್ಟು ವರ್ಷಗಳಿಂದ ಕೇಳಿ ಬಂದಿತ್ತು. ಇದೀಗ ಈ ಪ್ರಕಣದಿಂದ ತಾಲ್ಲೂಕಿನ ಜನತೆ ತಲ್ಲಣಗೊಂಡಿದ್ದಾರೆ.