ತುಮಕೂರು: ಕೋವಿಡ್ ಮೊದಲ ಮತ್ತು ಎರಡನೇ ಲಾಕ್ ಡೌನ್ ನಿಂದ ಜಗತ್ತೇ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದು ಬಿಟ್ಟು, ತಮ್ಮ ಸ್ವಾರ್ಥ ಮೆರೆದು ಅನ್ಯಾಯದೆಡೆಗೆ ಸಾಗಿದ್ದವು. ಇದನ್ನು ಸುಪ್ರೀಂ ಮತ್ತು ಹೈಕೋರ್ಟ್ ಗಳು ಪ್ರಶ್ನಿಸಿ ನ್ಯಾಯ ಜರುಗುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದವು ಎಂದು ಸಿ.ಐ.ಟಿ.ಯು ನ ರಾಜ್ಯ ಕಾರ್ಯದರ್ಶಿಗಳಾದ ಕೆ.ಎನ್.ಉಮೇಶ್ ತಿಳಿಸಿದರು.
ನಗರದ ಕನ್ನಡ ಭವನದಲ್ಲಿಂದು (ಜು೧೮) ಸುಫಿಯಾ ಕಾನೂನು ಕಾಲೇಜು ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಡಾ.ರಮೇಶ್ ಅವರ ಅಭಿನಂದನಾ ಸಮಾರಂಭ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯ, ಮಾಧ್ಯಮ ಮತ್ತು ನ್ಯಾಯಾಂಗದ ಪ್ರಸ್ತುತತೆ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ರಾಷ್ಟ್ರದೆಲ್ಲೆಡೆ ಸಮಾನತೆ, ನ್ಯಾಯ, ಪ್ರಾಮಾಣಿಕತೆ ಮರೆಯಾಗಿ ಅಧರ್ಮ, ಆನ್ಯಾಯ ಅಕ್ರಮಗಳೇ ಹೆಚ್ಚಾಗುತ್ತಿವೆ. ಇತ್ತೀಚೆಗಿನ ಪ್ರವೃತ್ತಿಗಳಂತೂ ಇನ್ನು ಮಿತಿ ಮೀರಿವೆ. ಇದನ್ನೆಲ್ಲಾ ಪ್ರಶ್ನಿಸುವವರೇ ಇಲ್ಲದಂತಾಗಿರುವುದು ಬೇಸರದ ಸಂಗತಿ ಎಂದರು. ಕೋವಿಡ್ ಸಂದರ್ಭದಲ್ಲಿ ನ್ಯಾಯಾಂಗದ ಕೊಡುಗೆ ಅಪಾರವಾಗಿತ್ತು. ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆಯಿದ್ದಾಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡದೇ ಹೋಗದಿದ್ದರೆ ರಾಜ್ಯದಲ್ಲಿ ಸಾವಿನ ಸಂಖ್ಯೆ ಅಸಂಖ್ಯೆಯಾಗಿರುತ್ತಿತ್ತು ಎಂದು ಅವರು ಹೇಳಿದರು.
ರಾಷ್ಟ್ರಕ್ಕೆ ಜಸ್ಟೀಸ್ ವಿ.ಆರ್.ಕೃಷ್ಣ ಅಯ್ಯರ್ ಅವರ ಕೊಡುಗೆ ಅಪಾರವಾಗಿದೆ. ಅನೇಕ ಕಾನೂನುಗಳನ್ನು ರೂಪಿಸಿರುವುದು, ಎಂತಹದೇ ಸಂದರ್ಭದಲ್ಲಿ ನ್ಯಾಯವನ್ನು ಎತ್ತಿ ಹಿಡಿಯುತ್ತಿದ್ದರು. ಇಂತಹ ಅಮೋಘ ನ್ಯಾಯ ಸಾಧಕರ ಕುರಿತು ರಮೇಶ್ ಎಸ್ ಅವರು ಕುವೆಂಪು ವಿವಿಯಲ್ಲಿ ಸಂಶೋದನಾ ಪ್ರಬಂಧ ಮಂಡಿಸಿ ಪಿಎಚ್.ಡಿ ಪಡೆದಿರುವುದು ಹೆಮ್ಮೆಯ ವಿಷಯ ಎಂದು ರಮೇಶ್ ಅವರಿಗೆ ಅಭಿನಂದಿಸಿದರು.
ರಾಮನಗರ ಸ್ನಾತಕೋತ್ತರ ಕೇಂದ್ರ ವಿಶೇಷಾಧಿಕಾರಿ ಹಾಗೂ ಜ್ಞಾನಭಾರತಿ ಕನ್ನಡ ಅಧ್ಯಯನ ಕೇಂದ್ರದ ಪ್ರೊ. (ಡಾ.) ಡೊಮಿನಿಕ್.ಡಿ ಅವರು ಮಾತನಾಡಿ, ಅತೀ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಆಧುನೀಕರಣದಿಂದ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ, ಅಸತ್ಯ ಅನ್ಯಾಯ ರಾರಾಜಿಸುತ್ತಿದೆ. ನೂತನ ತಂತ್ರಜ್ಞಾನದಿAದ ಅಭಿವ್ಯಕ್ತಿ ಸ್ವಾತಂತ್ರ‍್ಯವು ಹರಣವಾಗುತ್ತಿದೆ. ಮಾಧ್ಯಮಗಳು ಗುಣಮಟ್ಟದ ಸುದ್ದಿ ಬಿಟ್ಟು ಬೇರೆಲ್ಲವನ್ನು ತೋರಿಸುತ್ತಿದೆ. ಹೀಗೆ ಮುಂದುವರೆದಲ್ಲಿ ಇದು ಇನ್ನು ಯಾವ ಹಂತ ತಲುಪುತ್ತದೆಯೋ ಎಂದು ಆತಂಕ ವ್ಯಕ್ತಪಡಿಸಿದರು. ಜಾತಿ, ಮತ, ಪಂಥ ಎಂದು ಕಚ್ಚಾಡುತ್ತಾ ನಾವೇ ಅವನತಿಯತ್ತ ಸಾಗುತ್ತಿದ್ದೇವೆ ಇದು ಬದಲಾಗಬೇಕಿದೆ ಎಂದರು.
ಎ.ಸ್ಟಡಿ ಆನ್ ಜ್ಯುಡಿಷಿಯಲ್ ಆಕ್ಟಿವಿಸಂ ವಿತ್ ಸ್ಪೆಷಲ್ ರೆಫರೆನ್ಸ್ ಟು ಕಾಂಟ್ರಿಬ್ಯೂಷನ್ ಆಫ್ ಜಸ್ಟೀಸ್ ವಿ.ಆರ್. ಕೃಷ್ಣ ಅಯ್ಯರ್ ಕುರಿತ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಕಾನೂನು ವಿಭಾಗದಲ್ಲಿ ಪಿಎಚ್ಡಿ ಪದವಿ ಪಡೆದಿರುವ ಡಾ. ರಮೇಶ .ಎಸ್ ಅವರನ್ನು ಗೌರವಿಸಿ ಸನ್ಮಾನ ಮಾಡಲಾಯಿತು. ಅವರ ಅಪಾರವಾದ ಅಭಿಮಾನಿ ಬಳಗದವರು, ಆತ್ಮೀಯರು, ಸ್ನೇಹಿತರು, ಗುರುಗಳು ಎಲ್ಲರು ಅಭಿನಂದಿಸಿ ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ.ಪೂ.ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಪ್ರೊ.ಕೆ. ದೊರೈರಾಜ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಶೋಧನಾ ವಿಭಾಗದ ಮುಖ್ಯಸ್ಥರು (ಕಾನೂನು), ಅಲೆಯನ್ಸ್ ವಿ.ವಿ ಬೆಂಗಳೂರು ಹಾಗೂ ನಿವೃತ್ತ ಕುಲಸಚಿವರು (ಮೌಲ್ಯಮಾಪನ), ಕೆ.ಎಸ್.ಎಲ್.ಯು ನ ಪ್ರೊ. (ಡಾ.) ಬಿ.ಎಸ್. ರೆಡ್ಡಿ, ಮಾಜಿ ಶಾಸಕರು ಹಾಗೂ ಹೆಚ್.ಎಂ.ಎಸ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಡಾ. ಎಸ್. ಷಫಿ ಅಹಮದ್, ತುಮಕೂರಿನ ವಕೀಲರ ಸಂಘದ ಅಧ್ಯಕ್ಷರಾದ ದೊಡ್ಡಮನೆ ಗೋಪಾಲಗೌಡರು, ತುಮಕೂರಿನ ಗಂಗಾವಾಹಿನಿ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಆರ್. ಕಾಮರಾಜ್, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಪತ್ರಕರ್ತ ಸಿ.ಕೆ.ಮಹೇಂದ್ರ, ಅನೇಕ ಪತ್ರಕರ್ತರು, ವಕೀಲರು, ಮುಖಂಡರು, ಮಾಧ್ಯಮ ಮತ್ತು ಕಾನೂನು ವಿದ್ಯಾರ್ಥಿಗಳು ಹಾಜರಿದ್ದರು.