ತುಮಕೂರು
ಮನವಿಗೆ ಸ್ಪಂದಿಸಿದ ಶಾಸಕರು ತುಮಕೂರು- ಕುಣಿಗಲ್- ಎಡೆಯೂರು ಮಾರ್ಗವಾಗಿ ಬಿ ಜಿ ನಗರಕ್ಕೆ ಬಸ್ ಓಡಾಡಲು ಹಸಿರು ನಿಶಾನೆ ತೋರಿದರು.
ಹತ್ತಾರು ವರ್ಷಗಳ ವಿದ್ಯಾರ್ಥಿಗಳ, ಭಕ್ತರ & ರೋಗಿಗಳ ಬೇಡಿಕೆಯಾಗಿದ್ದ ತುಮಕೂರು-ಹೆಬ್ಬೂರು-ಕುಣಿಗಲ್ ಮಾರ್ಗವಾಗಿ ಶ್ರೀಕ್ಷೆೇತ್ರ ಆದಿಚುಂಚನಗಿರಿ ಹೋಗಲು ಅನುಕೂಲವಾಗುವಂತೆ ಆದಿಚುಂಚನಗಿರಿ ವಿಶ್ವವಿದ್ಯಾನಿಲಯಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷರು & ಶಾಸಕರಾದ ಎಸ್.ಆರ್ ಶ್ರೀನಿವಾಸ್ ರವರಿಗೆ ಬೈರವೇಶ್ವರ ಬ್ಯಾಂಕ್ ಅಧ್ನಕ್ಷ ಚಿಕ್ಕರಂಗೇಗೌಡ, ತುಮಕೂರು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ರವಿ ಗೌಡ, ಕಾಂಗ್ರೆಸ್ ಮುಖಂಡರಾದ ಹೆತ್ತೆನಹಳ್ಳಿ ಮಂಜುನಾಥ್, ವಕೀಲ ಸಿ. ಕೆ. ಮಹೇಂದ್ರ ನಿಯೋಗ ಅವರನ್ನೊಳಗೊಂಡ ಶುಕ್ರವಾರ ತುಮಕೂರಿನ ಅವರ ನಿವಾಸದಲ್ಲಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿತು.
ಶ್ರೀ ಆದಿಚುಂಚನಗಿರಿ ಧಾರ್ಮಿಕ ಕ್ಷೇತ್ರವು ಜಿಲ್ಲೆಯಲ್ಲಿ ಅಸಂಖ್ಯಾತ ಭಕ್ತವೃಂದವನ್ನು ಹೊಂದಿದ್ದು ಜೊತೆಗೆ ವಿದ್ಯಾರ್ಜನೆಯಲ್ಲಿ ಇಂದು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ಉತ್ತಮ ಶಿಕ್ಷಣ ಕಲ್ಪಿಸುತ್ತಿದೆ. ಬಿ ಜಿ ನಗರದ ವಿಶ್ವವಿದ್ಯಾಲಯದ ಆವರಣದಲ್ಲಿ 9 ಶಾಲಾ ಕಾಲೇಜುಗಳು ಭಿನ್ನ ಭಿನ್ನ ಕೋರ್ಸ್ ಗಳನ್ನು ಆಭ್ಯಸಿಸಲು ಅವಕಾಶವಿದೆ. ಇಲ್ಲಿನ ವಿವಿಧ ಕೋರ್ಸ್ ಗಳನ್ನು ಅಭ್ಯಾಸ ಮಾಡಲು ತುಮಕೂರು, ಕುಣಿಗಲ್ ಮಾರ್ಗದಿಂದ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನ ನಿತ್ಯ ಓಡಾಡುತ್ತಾರೆ.
ಅಲ್ಲದೇ ಆದಿಚುಂಚನಗಿರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಜಧಾನಿಯ ಯಾವ ಹೈ ಟೆಕ್ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದೆ. ನರರೋಗ ವಿಭಾಗವು ಅತ್ಯಂತ ಸುಧಾರಿತ ವೈಶಿಷ್ಟ್ಯಗಳನ್ನೊಳಗೊಂಡಿದೆ. ಈ ಕಾರಣಕ್ಕೂ ದಿನಂಪ್ರತಿ ಕನಿಷ್ಟ 50-100 ಜನ ರೈತರು, ಬಡವರು ಚಿಕಿತ್ಸೆಗಾಗಿ ಹೋಗುತ್ತಿದ್ದಾರೆ. ಗೂಳೂರು, ನಾಗವಲ್ಲಿ, ಹೆಬ್ಬುರು ಕಡೆಯಿಂದ ವಿದ್ಯಾರ್ಥಿಗಳು, ರೋಗಿಗಳು, ಭಕ್ತರು ಪ್ರತಿದಿನ ಬಿ. ಜಿ. ನಗರದ ಆಸ್ಪತ್ರೆ ಗೆ ತೆರಳಲು ಪರದಾಡುತ್ತಾರೆ.
ಬಸ್ ಕಲ್ಪಿಸಿಕೊಡುವುದರಿಂದ ಬಡ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತಲುಪಲು ಅನುಕೂಲ ಆಗಲಿದೆ. ವಿಶ್ವವಿದ್ಯಾಲಯದ ಆವರಣದಲ್ಲಿರುವ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದ ಚಿಕಿತ್ಸೆ ಪಡೆಯಲು ಬಡವರಿಗೆ ಅನುಕೂಲವಾಗಲಿದೆ ಎಂದು ಭೈರವೇಶ್ವರ ಬ್ಯಾಂಕಿನ ಅಧ್ಯಕ್ಷರಾದ ಚಿಕ್ಕ ರಂಗಣ್ಣ ಅವರು ಶಾಸಕರಿಗೆ ವಿದ್ಯಾರ್ಥಿಗಳ ಕಷ್ಟವನ್ನು ಮನವರಿಕೆ ಮಾಡಿಕೊಟ್ಟರು.
ವಿದ್ಯಾರ್ಥಿಗಳು ದಿನನಿತ್ಯ ಈ ಮಾರ್ಗವಾಗಿ ಪ್ರಯಾಣ ಬೆಳೆಸುತ್ತಿದ್ದು ಬಸ್ ನಲ್ಲಿ ಒಂದು ಗಂಟೆ ತೆಗೆದುಕೊಳ್ಳುವ ಪ್ರಯಾಣ ಎರಡು ಮೂರು ಬಸ್ ಹತ್ತಿ ಇಳಿದು ಅಲ್ಲಿಗೆ 3 ಗಂಟೆಯಾಗುತ್ತಿದೆ. ತುಮಕೂರಿನಿಂದ ನೇರವಾಗಿ ಆದಿಚುಂಚನಗಿರಿ ವಿಶ್ವವಿದ್ಯಾನಿಲಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ, ಭಕ್ತರಿಗೆ, ರೋಗಿಗಳಿಗೆ, ಅನುಕೂಲವಾಗುತ್ತದೆಂಬ ನಿಯೋಗದ ಮನವಿಗೆ ಸ್ಪಂದಿಸಿದ ಶಾಸಕ ಎಸ್.ಆರ್ ಶ್ರೀನಿವಾಸ್ ರವರು ಒಂದು ವಾರದೊಳಗೆ ಶಾಲಾ ಕಾಲೇಜಿನ ಸಮಯಕ್ಕೆ ಅನುಕೂಲ ವಾಗುವಂತೆ ಬಸ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರಿನಿಂದ ಬೆಳಗ್ಗೆ 7.10 ಕ್ಕೆ ಹೊರಡುವ ಈ ಬಸ್ ಕುಣಿಗಲ್ ಹಾಗೂ ಎಡೆಯೂರು ಮಾರ್ಗವಾಗಿ 8.50ಕ್ಕೆ ಬಿ ಜಿ ನಗರದ ವಿಶ್ವವಿದ್ಯಾನಿಲಯದ ಆವರಣ ತಲುಪಲಿದೆ. ಸಂಜೆ 4.10ಕ್ಕೆ ಅಲ್ಲಿಂದ ಹೊರಡಲಿದೆ. ರೋಗಿಗಳು, ವಿದ್ಯಾರ್ಥಿಗಳು ಮತ್ತು ಎಡೆಯೂರು ಹಾಗೂ ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಭಕ್ತಾಧಿಗಳಿಗೂ ಅನುಕೂಲವಾಗಲಿದೆ.