ತುಮಕೂರು; ಸಂವಿಧಾನದ ಆಶಯಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಆಗಬೇಕು ಎಂದು ನ್ಯಾಯಾಧೀಶಾದ ಪುಟ್ಟರಂಗಸ್ವಾಮಿ ಕರೆ ನೀಡಿದರು.
ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಂಗದ ಮಹತ್ವವನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಡಿ.ಎಂ. ಘನಶ್ಯಾಮ ಮಾತನಾಡಿ, ಸಂವಿಧಾನದಲ್ಲಿ ಅಡಕ ಮಾಡಿರುವ ಬಹುತ್ವದ ಕಾರಣದಿಂದಲೇ ಇಂದು ಭಾರತ ಭಾರತವಾಗಿ ಉಳಿಯಲು ಸಾಧ್ಯವಾಗಿದೆ. ನಾವೆಲ್ಲ ಭಾರತೀಯರು ಎಂಬ ಭಾವ ನಮ್ಮ ಆಂತರ್ಯದಲ್ಲೇ ಅಡಗಿದೆ ಎಂದರು.
ಭಾರತೀಯರಾಗಿ ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ, ನೆಮ್ಮದಿ, ಶಾಂತತೆಯ ಬದುಕಿಗೆ ನಮ್ಮ ಸಂವಿಧಾನವೇ ಕಾರಣವಾಗಿದೆ ಎಂದರು.
ಪ್ರಾಂಶುಪಾಲರಾದ ಡಾ. ಎಸ್.ರಮೇಶ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಗಟ್ಟಿಯಾಗಿದೆ. ಹೀಗಾಗಿಯೇ ಸಂವಿಧಾನ ಮೀರಿ ಯಾರೂ ಮುಂದಡಿ ಇಡಲು ಸಾಧ್ಯವಾಗಿಲ್ಲ, ಸಾಧ್ಯವಾಗುತ್ತಿಲ್ಲ ಎಂದರು.
ಸಂವಿಧಾನದ ಆಶಯಗಳ ದಾರಿಯಲ್ಲೇ ಎಲ್ಲರೂ ನಡೆಯಬೇಕು ಎಂದು ತಿಳಿಸಿದರು.
ಕಾಲೇಜಿನ ಆಡಳಿತ ಸಂಸ್ಥೆಯ ಅಧ್ಯಕ್ಷರಾದ ಷಫೀ ಅಹಮದ್, ಉಪ ಪ್ರಾಂಶುಪಾಲರಾದ ಟಿ. ಒಬಯ್ಯ ಇದ್ದರು.