ಡಾ. ರಜನಿ ಎಂ
1.
ಸೌದೆ ಒಲೆಯ
ಕಾವು
ನಿನ್ನೆದೆ ಗೂಡು.
2.
ಚಳಿಯಲ್ಲಿ
ಹುದುಗಿ ಬರದ
ದೋಸೆ ಸಂಪಣ
ನಿನ್ನ ಮೌನ.
3.
ಹಾಸಿಗೆ ಮೇಲಿನ
ಚದುರಿದ
ಮಲ್ಲಿಗೆ…
ಮರ ಉದುರಿಸಿದ ಎಲೆ.
4.
ಗರಿಕೆ
ಮೇಲಿನ ಇಬ್ಬನಿ
ನಿನ್ನ ನಾಸಿಕದ
ಬೆವರು.
5.
ನಿನ್ನ
ಅಪ್ಪುಗೆ ಸಡಿಲಿಸಿದ
ಕೂಡಲೇ …
ಬೆಳಗ್ಗಿನ ಚಳಿ.
6.
ಪಿಸು ಮಾತು…
ಮುತ್ತು
ಮುಗಿಯುವ ಮುನ್ನವೆ
ಬೇಗನೆ ಕತ್ತಲ
ಕೊಡುಗೆ.
7.
ಸುರಿಯುವ
ಹಿಮದ ಬಿಳಿ
ರಗ್ಗೊಳಗಡೆ
ನಿನ್ನ ಕಣ್ಣು
ಹಲ್ಲು…
8.
ಕೊರೆಯುವ
ಕೈ
ಮುಟ್ಟಿಸಿ
ಕೆಣಕುವ
ನಿನ್ನ ಆಟ..
9.
ಬಾಟಲೊಳಗೆ
ಕೂತ
ಕೊಬ್ಬರಿ ಎಣ್ಣೆ..
ರೂಮಿಗೆ
ಬಾರದ ನೀನು…
10.
ಊಟಕ್ಕೆ
ಕೊಟ್ಟ ನೆಂಚಿಕೆ
ನಿನ್ನ
ಬಿಸಿ ಮುತ್ತು.
ಚಳಿ ಚುಟುಕು ಭಾಗ -2
ನಿನ್ನ ಮೋಹ
ನಿಧಾನವಾಗಿ
ಏರುವ
ಕಂಬಳಿಯೊಣಗಣ ಕಾವು.
ನಿನ್ನ
ಮೂಡ್…
ಬೆಳಗ್ಗೆ ಚಕ್ಕನೆ
ಕಂಬಳಿ ಕಿತ್ತಾಗಿದ ಹಾಗೆ.
ನಿನ್ನ
ನೆನಪು..
ಮಾಗಿಯ ಚಳಿಯಲ್ಲಿ
ಬೆಳಗಿನ ಜಾವದ ಕನಸಲ್ಲಿ.
ಹಿತುಕಿದ
ಅವರೆಕಾಳು ಸಾರು
ನಿನ್ನ ತಾಳ್ಮೆಯ
ಪ್ರತೀಕ.
ಗೀಟಿನ
ರಂಗೋಲಿ..
ಚಳಿಗೆ ಮಾಯವಾದ
ಚುಕ್ಕಿ ಚಿತ್ತಾರ.
ಹದವಾದ
ಕಾಫಿ..ನಿನ್ನ
ಬೆಚ್ಚನೆ
ಒಲವು.
ರಾತ್ರಿ ಊಟದ
ನಂತರ
ತೊಳೆಯದ ಪಾತ್ರೆ..
ನೀ ಕ್ಷಮಿಸಿದ
ನನ್ನ
ಅವಾಂತರಗಳು.
ಗೂಡಿಂದ ತೆಗೆದು ಕೊಟ್ಟ
ಸ್ವೆಟರ್..
ನನ್ನೆಲ್ಲಾ..
ತಪ್ಪುಗಳಿಗೆ ನೀನು
ನೀಡಿದ ಔದಾರ್ಯ.