ಪಾವಗಡ: ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಸುರಕ್ಷತೆಗೆ ಗಂಟಲು ದ್ರವ ತೆಗೆಯುವ ಕಿಯೋಸ್ಕ್ ಕೊಡುಗೆಯಾಗಿ ನೀಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ.ವೆಂಕಟೇಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭಾನುವಾರ ಗಂಟಲು ದ್ರವ ತೆಗೆಯುವ ಕಿಯೋಸ್ಕ್ ಹಸ್ತಾಂತರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ಕೊರೊನಾ ಪರೀಕ್ಷೆ ನಡೆಸಲು ಕಿಯೋಸ್ಕ್ ಬೇಕಿದೆ ಎಂದು ವೈದ್ಯರು ಮನವಿ ಮಾಡಿದರು. ಕೂಡಲೇ ಕಾರ್ಯ ಪ್ರವೃತ್ತರಾಗಿ ತಯಾರಿಕಾ ಕಂಪನಿಗೆ ಬೇಡಿಕೆ ಸಲ್ಲಿಸಿ ತರಿಸಿಕೊಳ್ಳಲಾಗಿದೆ. ಇದರಿಂದ ಸುರಕ್ಷತೆ ಹಾಗೂ ಧೈರ್ಯವಾಗಿ ವೈದ್ಯರು ಗಂಟಲು ದ್ರವ ತೆಗೆಯಬಹುದಾಗಿದೆ ಎಂದರು.
ಪಟ್ಟಣದ ಬ್ಯಾಂಕ್, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣದಲ್ಲಿನ ಸುಮಾರು 2 ಸಾವಿರ ಮಂದಿ ಬಡ ಜನತೆ, ಗ್ರಾಮಗಳಿಂದ ಬರುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ಹಣ್ಣು ವಿತರಿಸಲಾಗುತ್ತಿದೆ. ಆಹಾರ ವಿತರಿಸುವ ಕಾರ್ಯಕ್ರಮ ಲಾಕ್ ಡೌನ್ ಮುಕ್ತಾಯವಾಗುವವರೆಗೆ ಮುಂದುವರೆಸಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲ್ಲೂಕಿನ ಜನತೆಗೆ ಅಗತ್ಯ ಸಹಾಯ ಸಹಕಾರ ನೀಡಲಾಗುವುದು. ತಾಲ್ಲೂಕಿನಲ್ಲಿ ಕೊರೊನಾ ನಿಯಂತ್ರಿಸುವ ಹಾಗೂ ಜನತೆಯ ಹಿತದೃಷ್ಠಿಯಿಂದ ವಿವಿಧ ಇಲಾಖೆ ಸಿಬ್ಬಂದಿ, ವೈದ್ಯರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುದೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷ ಎ.ಶಂಕರರೆಡ್ಡಿ, ಪುರಸಭೆ ಸದಸ್ಯ ರಾಜೇಶ್, ರವಿ, ಎಂ.ಎ.ಜಿ ಇಮ್ರಾನ್, ವೆಂಕಟರವಣಪ್ಪ, ಮಣಿ, ಎಂ.ಎಸ್.ವಿಶ್ವನಾಥ್, ಅಶ್ವಥ್, ಅಶೋಕ್, ಅಮರ್, ಷಾ ಬಾಬು, ರಿಜ್ವಾನ್, ಕಿರಣ್, ಅವಿನಾಶ್, ಹನುಮೇಶ್ ಉಪಸ್ಥಿತರಿದ್ದರು.