Wednesday, November 20, 2024
Google search engine
Homeಜಸ್ಟ್ ನ್ಯೂಸ್ಖ್ಯಾತ ನಿರ್ದೇಶಕ ಶ್ರೀಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

ಖ್ಯಾತ ನಿರ್ದೇಶಕ ಶ್ರೀಪಾದ ಭಟ್ ಗೆ ‘ರಂಗ ಭೂಪತಿ’ ಪ್ರಶಸ್ತಿ

ಕೃಪೆ: ಅವಧಿ

ಹಿರಿಯ ರಂಗ ನಿರ್ದೇಶಕ ಶ್ರೀಪಾದ ಭಟ್ ಅವರಿಗೆ ಖ್ಯಾತ ನಾಟಕಕಾರ ದಿ. ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ‘ರಂಗ ಭೂಪತಿ’ ಮೊದಲ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಧಾರವಾಡದ ಗೋ.ವಾ. ರಂಗ-ಸಂಗ, ಆಟ-ಮಾಟ, ಹಾಗೂ ಬೆಂಗಳೂರಿನ ಬಹುರೂಪಿ ಫೌಂಡೇಶನ್ ಸಂಸ್ಥೆಗಳು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಮಾರ್ಚ್ 30 (ಶನಿವಾರ) ಸಂಜೆ 6-30 ಕ್ಕೆ ಧಾರವಾಡದ ರಂಗಾಯಣ ಆವರಣದಲ್ಲಿರುವ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಹಿರಿಯ ಸಾಹಿತಿ ಡಾ ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು ರಂಗಕರ್ಮಿ ಧನಂಜಯ ಕುಲಕರ್ಣಿ ಹಾಗೂ ಹಿರಿಯ ಪತ್ರಕರ್ತ, ಬಹುರೂಪಿ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾದ ಜಿ ಎನ್ ಮೋಹನ್, ರವಿ ಕುಲಕರ್ಣಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಗೋಪಾಲ ವಾಜಪೇಯಿ ಅವರು ರಚಿಸಿದ ರಂಗಗೀತೆಗಳ ಹಬ್ಬ ಆಯೋಜಿಸಲಾಗಿದ್ದು ರಂಗಾಯಣ ಕಲಾವಿದ ರಾಘವ ಕಮ್ಮಾರ, ಹೂವಿನ ಹಡಗಲಿಯ ಶಶಿಧರ.ಕೆ.ಎಂ, ರವಿ ಯಲ್ಲಪ್ಪನವರ್, ಪರಶುರಾಮ ನಾಗೋಜಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರೂ, ಗೋ.ವಾ. ರಂಗ-ಸಂಗದ ರಾಜಕುಮಾರ ಮಡಿವಾಳರ ಅವರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದ ಶ್ರೀಪಾದ ಭಟ್ ಅವರು ಕನ್ನಡ ರಂಗಭೂಮಿಯ ಮಹತ್ವದ ಹೆಸರು. ರಂಗಭೂಮಿಯ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಎರಡೂ ರಂಗಗಗಳಲ್ಲಿ ನುರಿತವರು. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಜಾನಪದ ಅಧ್ಯಯನ, ಸಂಗೀತ, ಸಂಘಟನೆ ಇವರ ಆಸಕ್ತಿಯ ಕ್ಷೇತ್ರಗಳು. ಶಿಕ್ಷಣ, ಕಾವ್ಯ ಹಾಗೂ ಮಕ್ಕಳ ರಂಗಭೂಮಿಯಲ್ಲಿ ಇವರು ನಡೆಸಿದ ಪ್ರಯೋಗಗಳು ದೇಶಾದ್ಯಂತ ಹೆಸರುವಾಸಿಯಾಗಿದೆ. ಗಾಂಧಿ- 150 ರ ಸಂದರ್ಭದಲ್ಲಿ ಇವರು ನಿರ್ದೇಶಿಸಿದ ‘ಪಾಪು-ಬಾಪು’ ನಾಟಕವು 2 ಸಾವಿರ ಪ್ರಯೋಗ ಕಂಡಿದೆ. ಇದುವರೆಗೂ ಸುಮಾರು 150 ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ‘ದಡವ ನೆಕ್ಕಿದ ಹೊಳೆ’ ನಟನೆಯ ಕೈಪಿಡಿ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ರಂಗಭೂಮಿ ಕುರಿತ ಅಧ್ಯಯನಕ್ಕೆ ಪಿ ಎಚ್ ಡಿ ಪಡೆದಿದ್ದಾರೆ.

ಹಲವು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸುವುದರ ಜತೆ ಕವಿ, ನಾಟಕಕಾರ, ನಟ, ನಿರ್ದೇಶಕರಾಗಿ, ಆಕಾಶವಾಣಿ, ರಂಗಭೂಮಿ, ಸಿನಿಮಾ, ಜನಸಮುದಾಯ ಅತಿ ಇಷ್ಟದ ಮಾಧ್ಯಮಗಳ ಮೂಲಕ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಬರಹದ ಮೂಲಕ ಪ್ರಭಾವಿಸಿದವರು ಗೋಪಾಲ ವಾಜಪೇಯಿ ಅವರು. ಉತ್ತರ ಕರ್ನಾಟಕದ ಗಟ್ಟಿ ಆಡುಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಅವರು ರಂಗಭೂಮಿಗೆ ನೀಡಿದ ಕೊಡುಗೆ ಅಪಾರ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?