ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೋಟೆ ಆಂಜನೇಯಸ್ವಾಮಿ, ಸಂಕಾಪುರ ಸುವರ್ಚಲಾ ಆಂಜನೇಯ ಸ್ವಾಮಿ ದೇಗುಲ ಸೇರಿದಂತೆ ವಿವಿಧ ಹನುಮಾನ್ ದೇಗುಲಗಳಲ್ಲಿ ಸೋಮವಾರ ಹನುಮದ್ವ್ರತ ಪ್ರಯುಕ್ತ ವಿಶೇಷ ಪೂಜೆ, ಹನುಮಸಂಕೀರ್ತನೆ, ಅಲಂಕಾರ ಉತ್ಸವಗಳು ನಡೆದವು.
ಸಂಕಾಪುರ ಸುವರ್ಚಲಾ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಅಭಿಷೇಕ, ಏಕಾದಶ ರುದ್ರಾಭಿಷೇಕ, ಮಧು ಅಭಿಷೇಕ, ಮನ್ಯು ಸೂಕ್ತ, ಪವಮಾನ ಹೋಮ, ಹೂವು. ವೀಳ್ಯದೆಲೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿದೆಡೆಯಿಂದ ಭಕ್ತಾದಿಗಳು ಆಗಮಿಸಿ ಸುವರ್ಚಲಾ ಆಂಜನೇಯಸ್ವಾಮಿ ದರ್ಶನ ಪಡೆದರು.
ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಭಾನುವಾರದಿಂದಲೇ ಹನುಮದ್ವ್ರತದ ಪೂಜೆಗಳನ್ನು ನಡೆಸಲಾಯಿತು. ಸೋಮವಾರದಂದು ಲೋಕಕಲ್ಯಾಣಾರ್ಥ ಪವಮಾನ ದೇವತಾ ಕಳಶ ಸ್ಥಾಪನೆ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಮಾಡಲಾಯಿತು. ಮಧ್ಯಾಹ್ನ 12.30 ಕ್ಕೆ ಪೂರ್ಣಾಹುತಿ, ಅಷ್ಟಾವಧಾನ ಸೇವೆ ಮಾಡಿದರು.
ಕೆಲ ಭಕ್ತಾದಿಗಳು ಪಾನಕ, ಕೋಸಂಬರಿ ವಿತರಿಸಿ ಹರಕೆ ತೀರಿಸಿದರು. ಗುಂಡಾರ್ಲಹಳ್ಳಿ, ಬಳಸಮುದ್ರ, ಗುಂಡ್ಲಹಳ್ಳಿ, ರೊಪ್ಪ, ವೈ.ಎನ್.ಹೊಸಕೋಟೆ ಸೇರಿದಂತೆ ಪ್ರತಿ ಹನುಮ ದೇಗುಲದಲ್ಲಿಯೂ ವಿವಿಧ ಪೂಜೆಗಳನ್ನು ಭಕ್ತಾದಿಗಳು ನೆರವೇರಿಸಿದರು.