ಜಪಾನಿಸ್ ಚೆರ್ರಿ ಎಂದು ಕರೆಯಲ್ಪಡು ಈ ಹೂವುಗಳನ್ನು 1912 ರಲ್ಲಿ ಅಮೇರಿಕಾ ಮತ್ತು ಜಪಾನ್ ದೇಶದ ಸ್ನೇಹದ ಸಂಕೇತವಾಗಿ ಪ್ರಸ್ತುತಪಡಿಸಿದರು. ಅನಂತರ ಚೆರ್ರಿ ಹೂವುಗಳ ವೀಕ್ಷಣೆಯು ಹರಡಲು ಪ್ರಾರಂಭಿಸಿತು.
ತಮ್ಮ ಅತೀಂದ್ರಿಯ ಗುಲಾಬಿ ಹೂವುಗಳಿಂದಾಗಿ ಚೆರ್ರಿ ಜಪಾನ್‌ನಲ್ಲಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ವಸಂತಕಾಲದಲ್ಲಿ ಬೆಂಗಳೂರು ಕೂಡ ಚೆರ್ರಿ ಹೂಗಳನ್ನು ಹೊತ್ತು ಕಂಗೊಳಿಸುತ್ತಿದೆ. ಒಮ್ಮೆ ನಿಂತು ನೋಡಿ ಆಸ್ವಾದಿಸಿ. ಚೆರ್ರಿ ಹೂಗಳ ವೀಕ್ಷಣೆಗೆ “ಸಕುರ ಹನಾಮಿ” ಹಬ್ಬವಾಗಿದೆ . ಡಾ. ರಜನಿ ಬರೆದಿರುವ ಈ ಕವನ ನಿಮ್ಮ ಹೃದಯಗಳಿಗೆ ಕೂಡ ಹಬ್ಬವಾಗಲೀ.
ಹೂಗಳ ಹಬ್ಬ…
ಹೂ ಎಂದರೆ ಯಾರಿಗೆ
ಇಷ್ಟವಿಲ್ಲ?
ಅದರಲ್ಲೂ
ಒಟ್ಟು ಒಟ್ಟಿಗೇ ಅರಳಿದ
ಗುಲಾಬಿ ,ನೀಲಿ ,ಹಳದಿ
ತೆಳು ಗುಲಾಬಿ ಹೂಗಳು …
ಮರದ ಎಲೆಯೆ ಕಾಣದಂಥ
ಹೂಗಳು.
ಯಾವ ಶಕ್ತಿ ನಿನ್ನನ್ನು
ಒಟ್ಟಿಗೆ ಅರಳಿಸಿದೆ?
ಎಲೆ ಉದುರಿ
ಬರಡಾಗಿದ್ದ ಬಾಳಲ್ಲಿ
ಬಣ್ಣ ಬಣ್ಣದ ಹೂಗಳು
ಎಂದರೆ ಹುಡುಗಾಟವೇ?
ಕಣ್ಣಿಗೆ ರಸದೂಟ..
ನೋಡದ ಕಣ್ಣುಗಳು
ಆಸ್ವಾದಿಸದ ಹೃದಯ
ಇದ್ದರೂ …ತಾನೇ ಯಾಕೆ??
ಬೆಳಗ್ಗಿನ ಬಿಸಿಲು
ಸಂಜೆಯ ಇಬ್ಬೆಳಗಲ್ಲಿ
ಮತ್ತಷ್ಟು ರಂಗೇರಿ …
ಇನ್ನೇನು
ಸಾಯುವಾಗೆ
ನೋಡಿದರೂ
ಸಾವೇ ಮುಂದಕ್ಕೆ ಹೋಗುತ್ತದೆ…
ಆ ದೇವರಿಗೆ
ಇಡೀ ಭೂಮಿಗೆ
ಬಣ್ಣ ಹಚ್ಚುವ ಉಮೇದು…
ಅರಳಿ ಉದುರಿ
ಉದುರಿ
ಹೂವಿನ ಹಾಸಿಗೆ…
ಮತ್ತೆ ಈ ದೃಶ್ಯ
ಮರೆಯಾಗುವ
ಮುನ್ನ..
ಅರಳಿದ ಹೃದಯಗಳು
ಚೆರ್ರಿ ಹೂಗಳ
ಕೆಳಗೆ
ತನ್ನ ವಿರಹ
ಗೀತೆಗೆ ..ವಿರಾಮ ನೀಡಿ
ಹೂ ಮುತ್ತು
ಕದಿಯುವಾಗಲೇ
ಗಾಳಿ ಬೀಸಿ
ಹೂಗಳು
ಪ್ರೇಮಿಗಳ
ಮೇಲೆ ಉದುರುತಿರೆ…
ಮಾಗಿದ ಮನಸ್ಸು
ಮರದ ಕೆಳಗೆ
ಚಹ ಕುಡಿಯುತ್ತಾ ..
ಒಣಗಿದ ಚೆರ್ರಿ ಹೂ ಅನ್ನು
ಕೈಯಲ್ಲಿ ಹಿಡಿದು…