ಬೆಂಗಳೂರು: ಭಾನುವಾರ ಬೆಳಗ್ಗೆ ವಿಧಿವಶರಾದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಂತಿಮ ವಿಧಿ ವಿಧಾನಕ್ಕೆ ಸಕಲ ಸಿದ್ದತೆ ನಡೆದಿದೆ.
ಮಾಧ್ವ ಸಂಪ್ರದಾಯದಂತೆ ಸ್ವಾಮೀಜಿ ವಿಧಿವಿಧಾನ ಮಾಡಲು ಶ್ರೀ ಮಠದ ಸಿಬ್ಬಂದಿ ಅಗತ್ಯ ಸಿದ್ದತಾ ಕಾರ್ಯ ಕೈಗೊಂಡಿದ್ದಾರೆ.
ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಶ್ರೀಕೃಷ್ಣ ದೇಗುಲದ ಪಕ್ಕದಲ್ಲೇ ಶ್ರೀಗಳು ವೃಂದಾವನಸ್ಥರಾಗಲಿದ್ದಾರೆ. ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳನ್ನು, ಭಾನುವಾರ ಬೆಳಗಿನ ಜಾವ ಉಡುಪಿ ಕೃಷ್ಣಮಠಕ್ಕೆ ಕರೆತರಲಾಗಿತ್ತು. ಸ್ವಾಮೀಜಿ ಕೊನೆಯ ಆಸೆಯಂತೆ, ಶ್ರೀಮಠದಲ್ಲಿ ಅವರು ಇಹ ಲೋಕ ತ್ಯಜಿಸಿದರು. ವೈದ್ಯರು ಮಠದಲ್ಲಿ ಚಿಕಿತ್ಸೆ ಮುಂದುವರೆಸಿದ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ 88 ವರ್ಷ ವಯಸ್ಸಿನ ಪೇಜಾವರ ಶ್ರೀಗಳು ವಿಧಿವಶರಾದರು. ಉಡುಪಿ ಮಠದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಕ್ತಾದಿಗಳ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು. ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪಾರ್ಥಿವ ಶರೀರ ತರಲಾಯಿತು.
ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ವಿಧಿವಿಧಾನ ನೆರವೇರುತ್ತಿದೆ. ವಿದ್ಯಾಪೀಠದ ಕೃಷ್ಣ ಮಂದಿರದ ಪಕ್ಕದಲ್ಲಿ ಶ್ರೀಗಳು ಬೃಂದಾವನಸ್ಥರಾಗಲಿದ್ದಾರೆ. ಬೃಂದಾವನ ಪ್ರವೇಶಕ್ಕೆ ಮುನ್ನ ಶ್ರೀಗಳಿಂದ ಶ್ರೀಕೃಷ್ಣನ ಪೂಜೆ ಮಾಡಿಸುವುದೂ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ವಿದ್ಯಾಪೀಠಕ್ಕೆ ಶ್ರೀಗಳ ಪಾರ್ಥಿವ ಶರೀರ ಆಗಮಿಸಿದ ಕೂಡಲೇ ಪೊಲೀಸರು ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದರು. ಸಿಎಂ ಯಡಿಯೂರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ 2 ಗಂಟೆಗಳ ಕಾಲ ಸಾರ್ವಜನಿಕ ದರ್ಶನದ ಬಳಿಕ ಶ್ರೀಗಳ ಪಾರ್ಥಿವ ಶರೀರವನ್ನು ವಿದ್ಯಾಪೀಠಕ್ಕೆ ತರಲಾಯಿತು. ಮೈದಾನದಲ್ಲಿ ಹಾಗೂ ರಸ್ತೆಯುದ್ಧಕ್ಕೂ ಭಕ್ತಸಾಗರವೇ ನೆರೆದಿತ್ತು. ನೂರಾರು ಜನ ದರ್ಶನ ಸಿಗದೆ ನಿರಾಶರಾಗಿ ದೂರದಿಂದಲೇ ತೆರೆದ ವಾಹನದಲ್ಲಿದ್ದ ಶ್ರೀಗಳಳಿಗೆ ನಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.