ತುಮಕೂರು ಲೈವ್

30% ಯುವಕರು ತಂಬಾಕಿಗೆ ದಾಸರು

ತುಮಕೂರು: ಮಾದಕದ್ರವ್ಯ ಮತ್ತು ತಂಬಾಕು ಸೇವನೆ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜನರ ನೈತಿಕಮಟ್ಟ ಕಡಿಮೆಯಾಗುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯಲ್ಲಿ ಹಮ್ಮಿಕೊಂಡಿದ್ದ ‘ತಂಬಾಕು ನಿಯಂತ್ರಣ’ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ತಪ್ಪು ಮಾಡಿದಾಗ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ ಎಂದರು.ಅನೌಪಚಾರಿಕ ನಿಯಂತ್ರಣಗಳು ಇಂದು ತುಂಬಾ ಕೆಲಸಕ್ಕೆ ಬರುತ್ತವೆ. ಸ್ವತಃ ನಾವೇ ಪೋಲಿಸ್ ಅಥವಾ ಜಡ್ಜ್‍ಗಳಾಗಿ ನಿಯಂತ್ರಣದ ಶಕ್ತಿಯಾಗಿ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು. ಅನಾರೋಗ್ಯ ನಿಯಂತ್ರಣಕ್ಕೆ ಜಾಗೃತಿ ಮೂಡಿಸುವ ಚಟುವಟಿಕೆಗಳಲ್ಲಿ ತುಮಕೂರು ಜಿಲ್ಲೆ ಮುಂದಿದೆ. ನಿರ್ಮಲ ಜೀವನ, ತ್ಯಾಗಮಯ ಮನಸ್ಸು ಇವುಗಳಿಗೆ ತುಮಕೂರು ಹೆಸರುವಾಸಿಯಾಗಿದೆ ಎಂದು ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಮಾಜಕ್ಕೆ ತಿಳಿಸುತ್ತೇನೆ, ತಾನು ತಂಬಾಕು ಸೇವಿಸದೆ ಇನ್ನೊಬ್ಬರಿಗೂ ಸೇವಿಸದಂತೆ ತಿಳುವಳಿಕೆಯನ್ನು ನೀಡುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು. ಸಕಾರಾತ್ಮಕ, ಶ್ರದ್ಧೆ, ಶಿಸ್ತು ಇಲ್ಲದ ಮೇಲೆ ಜೀವನದಲ್ಲಿ ಏನ್ನನ್ನೂ ಸಾಧಿಸಲು ಸಾಧ್ಯವಿಲ್ಲ. ಮನಸ್ಸು ಪರಿಪಕ್ವವದಾಗ ಮಾತ್ರ ಗುರಿಯನ್ನು ತಲುಪಲು ಸಾಧ್ಯ ಎಂದರು. ನಾರಾಯಣ ಹೃದಯಾಲಯದ ವೈದ್ಯೆ ಡಾ. ತೃಪ್ತಿ ಸಿ. ಕೊಟ್ಟೂರ್ ಮಾತನಾಡಿ ತಂಬಾಕು, ಗುಟ್ಕಾದಂತ ಸೇವನೆಯೂ ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಇತ್ತೀಚಿನ ವರದಿಯ ಪ್ರಕಾರ ದೇಶದಲ್ಲಿ 30% ಯುವಕರು ತಂಬಾಕಿಗೆ ದಾಸರಾಗಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ಒಂದು ದಿನಕ್ಕೆ ಮಾತ್ರ ಸೀಮಿತ ಅಲ್ಲ, ಅದು ಬಹಳಷ್ಟು ದಿನಗಳ ಕಾಲ ನಡೆಯಬೇಕಾಗುತ್ತದೆ. ಎಷ್ಟೋ ಕ್ಯಾನ್ಸರ್ ರೋಗಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ ಎಂದರು.

Comment here