ಸಚಿವರ ಬಳಿಗೆ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನಿಯೋಗ
ಪ್ರಕಾಶನ ರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಭರವಸೆ ನೀಡಿದರು.
ಇಂದು ಬೆಂಗಳೂರಿನಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ಪ್ರಕಾಶಕರ ನಿಯೋಗವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟಸ್ವಾಮಯ್ಯ, ಕಾರ್ಯದರ್ಶಿ ಆರ್ ದೊಡ್ಡೇಗೌಡ, ಹಿರಿಯ ಪ್ರಕಾಶಕರುಗಳಾದ ನಿತಿನ್ ಶಾ, ಜಿ ಎನ್ ಮೋಹನ್, ಮಾನಸ, ಬಿ ಕೆ ಸುರೇಶ್, ನಿಡಸಾಲೆ ವಿಜಯ್ ನಿಯೋಗದಲ್ಲಿದ್ದರು.
ಪ್ರಕಾಶನ ರಂಗ ಇತರ ರಾಜ್ಯಗಳಲ್ಲಿ ಉತ್ತಮ ಸ್ಥಿತಿಯಲ್ಲಿದ್ದು ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಿಂದ ದುಸ್ಥಿತಿಯಲ್ಲಿರುವ ಬಗ್ಗೆ ನಾನು ತಿಳಿದಿದ್ದೇನೆ. ಈ ಸಮಸ್ಯೆಗಳನ್ನು ನಾನು ಅಧ್ಯಯನ ಮಾಡಿ ಕ್ರಮೇಣ ಓದು ಸಂಸ್ಕೃತಿಯನ್ನು ಬಲಪಡಿಸುವ ಈ ಮಹತ್ವವಾದ ಕ್ಷೇತ್ರಕ್ಕೆ ಆದ್ಯತೆಯ ಮೇಲೆ ಪರಿಹಾರ ಒದಗಿಸುತ್ತೇನೆ ಎಂದು ಅವರು ತಿಳಿಸಿದರು.
2020 ರಿಂದ ಮೂರು ವರ್ಷಗಳ ಪುಸ್ತಕಗಳನ್ನು ಖರೀದಿಸಿಲ್ಲ. ಇದರಿಂದಾಗಿ ರಾಜ್ಯದ ಎಲ್ಲೆಡೆ ಹೊಸ ಕೃತಿಗಳಿಂದ ಓದುಗರು ವಂಚಿತರಾಗಿದ್ದಾರೆ. ಬಿಬಿಎಂಪಿ ಗ್ರಂಥಾಲಯ ಕರ ಎಂದು 450 ಕೋಟಿ ರೂಗಳನ್ನು ಸಂಗ್ರಹಿಸಿದೆ. ಇದನ್ನು ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಿಲ್ಲ. ಇದರಿಂದಾಗಿ ಪ್ರಕಾಶನ ಉದ್ಯಮ ಕಂಗಾಲಾಗಿದೆ ಎಂದು ಪ್ರಕಾಶಕರ ಸಂಘ ಸಚಿವರ ಗಮನಕ್ಕೆ ತಂದಿತು.
ಪುಸ್ತಕ ಪ್ರಕಟನೆಯ ವೆಚ್ಚ ಇಂದು ಗಗನಕ್ಕೇರಿದೆ. ಆದರೆ ಸಗಟು ಖರೀದಿಯಲ್ಲಿ ಮಾತ್ರ ಹಳೆಯ ದರವನ್ನೇ ನಿಗದಿಪಡಿಸಿದ್ದಾರೆ. ಹೆಚ್ಚಿರುವ ಕಾಗದ, ಇಂಕು, ಮುದ್ರಣ ಬೆಲೆ, ಜಿ ಎಸ್ ಟಿ ಯಿಂದಾಗಿ ಪ್ರಕಾಶನ ರಂಗ ತತ್ತರಿಸಿದೆ. ಆದ್ದರಿಂದ ಒಂದು ಪುಟದ ಬೆಲೆಯನ್ನು ಇನ್ನೂ 40 ಪೈಸೆ ಹೆಚ್ಚಳ ಮಾಡಬೇಕು ಎಂದು ಸಂಘ ಮನವಿ ಮಾಡಿತು.
ಕನ್ನಡ ಪುಸ್ತಕಗಳನ್ನು ಖರೀದಿಸಲು ಈಗ ಮಂಡಿಸಲಿರುವ ಬಜೆಟ್ ನಲ್ಲಿ 25 ಕೋಟಿ ರೂಗಳನ್ನು ಮೀಸಲಿಡಬೇಕು ಎಂದು ಸಂಘ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಸಂಘ ಸನ್ಮಾನಿಸಿತು.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನೇತೃತ್ವದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪ್ರಕಾಶಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟಸ್ವಾಮಯ್ಯ, ಕಾರ್ಯದರ್ಶಿ ಆರ್ ದೊಡ್ಡೇಗೌಡ, ಹಿರಿಯ ಪ್ರಕಾಶಕರಾದ ನಿತಿನ್ ಶಾ ಅವರು ಉಪಸ್ಥಿತರಿದ್ದರು.