ಡಾ. ರಜನಿ ಎಂ
ಹಸಿರು ಹುಲ್ಲ
ಹಾಸು
ಎಳೆ ಚಿಗುರು
ತಿಳಿ ಹಸಿರು
ಹೂಂಗೆ ಹೂವ
ಘಾಟು
ಬಿದ್ದ ಹೊಂಗೆ ಹೂವು
ಜೇನ್ನೊಣ
ಒಣ ಎಲೆಯ ಹಾಸಿನೊಳಗಿಂದ
ನುಗ್ಗಿ ಸೂರ್ಯನ
ನೋಡಲು ಬಂದ ಹುಲ್ಲು
ಚಿಲಿ ಪಿಲಿಯೋ
ನಲ್ಲನ ಕೊಗುವ ಕರೆಯೋ..
ಯಾರೂ ಭಾಷಾಂತರಿಗಳಿಲ್ಲ.
ರಾಚುವ ಸೂರ್ಯನಿಗೂ
ಸಡ್ಡು ಹೊಡೆಯುತ..
ಮಿಂಚುವ ಹೊಂಗೆ
ಎಲೆಯೋ.
ಹುಟ್ಟಿದ ಮರುಗಳಿಗೆಯೇ
ಹೆಚ್ಚುವ ಆಯಸ್ಸು
ಮರು ವಸಂತಕ್ಕೆ..
ಸತ್ತು ಹುಟ್ಟುವ ಉಮೇದು.
ಬೋಳಾದ ಮರದಿಂದ
ಭೂಮಿ ಒಳಗಿನಿಂದ ..
ಚಿಗುರಿ , ಸಾಧಾರಪಡಿಸಿದ
ಜೀವ ಸೆಲೆ.
ಒಂದು ಹೂವು
ಒಂದು ಚಿಗುರು
ಒಂದು ಪೀಚು ..
ಜೀವನದ ಹಂತಗಳೆಲ್ಲಾ ಒಟ್ಟಿಗೆ.
ಒಂದು ಸಾಯುತ್ತಾ
ಒಂದು ಹುಟ್ಟುತ್ತಾ
ಒಂದು ಉದುರುತ್ತಾ
ಒಂದು ಕೊನರುತ್ತಾ.
ಒಂದು ಕರೆಯುತ್ತಾ
ಒಂದು ಕಳಿಸುತ್ತಾ
ಒಂದು ಅರಸುತ್ತಾ
ಒಂದು ರಮಿಸುತ್ತಾ
ಹಸಿರ ಹಿನ್ನೆಲೆ
ಕುಂಚಗಾರನ
ಅನೂಹ್ಯ ಬಣ್ಣಗಳ ಮಿಶ್ರಣ.
ಪ್ರಕೃತಿಯ ಬಣ್ಣದೋಕುಳಿಗೆ
ಕರಗದ ಹೃದಯವುಂಟೆ ?
ಕಣ್ಣಳೊಗಿನಿಂದ ಹೃದಯಕ್ಕೆ
ಇಳಿದ ಬಣ್ಣಗಳು.
ವರಷವೊಂದು ಹೆಚ್ಚಾದರೇನು ?
ಹರುಷ ಕ್ಕಿದೆ ರಂಗಿನಾಟ.
ವಸಂತನ ಆಗಮನ ಕವಯಿತ್ರಿ ಕಣ್ಣಿಗೆ ಸಾವು ಬದುಕಿನ
ಜೀವನ ಚಕ್ರಗಳನ್ನು ಒಟ್ಟೊಟ್ಟಿಗೆ ತೋರಿಸಿದೆ. ಜೀವ ಸೆಲೆಯಲ್ಲೇ …ಸಾವು ಮೆಲ್ಲಗೆ ಜೊತೆಯಾಗುವ ವಿಸ್ಮಯ. ಒಂದು ದಿನದ ಚಿಗುರಿಗೆ ಒಂದು ದಿನದ ಆಯಸ್ಸು ಮುಗಿದಿದೆ. ಎಂತಹ ಸತ್ಯ. ಓದಿ ಡಾ|| ರಜನಿಯವರ ಕವನದಲ್ಲಿ.